Advertisement

ಜನಗಣತಿಯಲ್ಲಿ “ಸ್ವಯಂ ಗಣನೆ’ಗೆ ಅವಕಾಶ

08:11 PM Aug 10, 2021 | Team Udayavani |

ನವದೆಹಲಿ: ದೇಶದಲ್ಲಿ ಶೀಘ್ರದಲ್ಲೇ ನಡೆಸಲಾಗುವ ಜನಗಣತಿ ಪ್ರಪ್ರಥಮ ಬಾರಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಮಾಡಲಾಗುತ್ತದೆ ಎಂದು ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ಹೇಳಿದ್ದಾರೆ.

Advertisement

ವಿಶೇಷವೆಂದರೆ, ಪ್ರಸಕ್ತ ಸಾಲಿನ ಜನಗಣತಿಯಲ್ಲಿ ಸ್ವಯಂ-ಗಣನೆ (ಸೆಲ್ಫ್ – ಎನ್ಯುಮರೇಶನ್‌)ಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಜನಗಣತಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಲು ಮೊಬೈಲ್‌ ಆ್ಯಪ್‌ ಮತ್ತು ಜನಗಣತಿಗಾಗಿ ವೆಬ್‌ಸೈಟ್‌ ಒಂದನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

ದೇಶವ್ಯಾಪಿ ಎನ್‌ಆರ್‌ಸಿ ಇಲ್ಲ:
ಗಣತಿಯ ಮೊದಲ ಹಂತವಾಗಿ ದೇಶಾದ್ಯಂತ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಐಸಿ) ನಡೆಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಆದರೆ, ರಾಷ್ಟ್ರೀಯ ಜನಸಂಖ್ಯಾ ಕೋಷ್ಠಕ (ಎನ್‌ಆರ್‌ಸಿ)ದ ಮಾಹಿತಿ ಪರಿಷ್ಕರಣೆಗೆ ಸರ್ಕಾರ ನಿರ್ಧರಿಸಿದೆ ಎಂದರು. ಇದುವರೆಗೆ ಅಸ್ಸಾಂನಲ್ಲಿ ಮಾತ್ರ ಎನ್‌ಆರ್‌ಸಿ ಪರಿಷ್ಕರಿಸಲಾಗಿದೆ. ಇದೇ ವೇಳೆ, ದೇಶದಲ್ಲಿ ನಡೆಸಲಾಗಿರುವ ಜಾತಿ ಗಣತಿಯ ವಿವರಗಳನ್ನು ಈ ಹಂತದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದೂ ಸಚಿವ ರಾಯ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಜಪಾನ್ ಕಂಪನಿ ತೆಕ್ಕೆಗೆ ಉಡುಪಿಯ ‘ರೋಬೋಸಾಫ್ಟ್‌’ : 805 ಕೋಟಿ ರೂ.ಗೆ ಮಾರಾಟ

ಡಿಜಿಟಲ್‌ ಜನಗಣತಿ ಹೇಗೆ?
ಈವರೆಗಿನ ಜನಗಣತಿಯಲ್ಲಿ ಜನರನ್ನು ಸಂದರ್ಶಿಸಿ, ಮಾಹಿತಿಯನ್ನು ಬರೆದುಕೊಳ್ಳಲಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನ ಗಣತಿಯಲ್ಲಿ ಮನೆ ಮನೆಗಳಿಗೆ ತೆರಳಿ ಟ್ಯಾಬ್ಲೆಟ್‌ ಅಥವಾ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾಹಿತಿ ದಾಖಲಿಸಿಕೊಳ್ಳಲಾಗುತ್ತದೆ. ಅದಕ್ಕಾಗಿ ಸ್ವಯಂ ಗಣನೆ (ಸೆಲ್ಫ್ ಎನ್ಯುಮರೇಷನ್‌) ನಡೆಸಲು ಮೊಬೈಲ್‌ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ.

Advertisement

ನಡೆಸುವುದು ಹೇಗೆ?
1. ಜನಗಣತಿಗಾಗಿಯೇ ಇರುವ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ಸ್ವತಃ ಲಾಗ್‌ಇನ್‌ ಆಗಿ, ತಮ್ಮ ಮೊಬೈಲ್‌ ನಂಬರ್‌ ಅನ್ನು ನಮೂದಿಸಿ ವಿವರಗಳನ್ನು ಅಪ್‌ಡೇಟ್‌ ಮಾಡಲು ಅವಕಾಶವಿದೆ.
2. ವಿವಿಧ ಮಾಹಿತಿ ಅಪ್‌ಡೇಟ್‌ ಮಾಡಲು, ವಿವಿಧ ರೀತಿಯ ಕೋಡ್‌ಗಳು ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿವೆ.
3. ಸಾರ್ವಜನಿಕರು ಸ್ವಯಂ ಗಣನೆ ನಡೆಸಿಕೊಟ್ಟು, ಪ್ರಕ್ರಿಯೆ ಪೂರ್ತಿಯಾದ ಬಳಿಕ ಒಂದು ನಿಗದಿತ ಸಂಖ್ಯೆ (ಐಡೆಂಟಿಫಿಕೇಷನ್‌ ನಂಬರ್‌) ನೀಡಲಾಗುತ್ತದೆ. ಅದು ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬರುತ್ತದೆ.
4. ಸರ್ಕಾರದ ವತಿಯಿಂದ ಜನಗಣತಿಗೆ ಬಂದಾಗ ಅವರಿಗೆ ಈ ಐಡೆಂಟಿಫಿಕೇಷನ್‌ ನಂಬರ್‌ ಅನ್ನು ತೋರಿಸಬೇಕು. ಆಗ ಸ್ವಯಂಚಾಲಿತವಾಗಿ ಮೊದಲೇ ಭರ್ತಿ ಮಾಡಿದ ಅಂಶಗಳಿಗೆ ತಾಳೆಯಾಗಿ, ಪರಿಷ್ಕರಣೆಗೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next