ಬೆಂಗಳೂರು: ಕೋವಿಡ್- 19ಕ್ಕೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳ ಪೋರ್ಟಲ್‌ನಡಿ ಪ್ರತ್ಯೇಕ ಮಾಹಿತಿ ಬದಲಿಗೆ ಸಮಗ್ರ ಮಾಹಿತಿಯುಳ್ಳ ಏಕೀಕೃತ ಡ್ಯಾಶ್‌ಬೋರ್ಡ್ ಅಭಿವೃದ್ಧಿಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚನೆ ನೀಡಿದ್ದು, ಅದರಂತೆ ಕೆಲವೇ ದಿನಗಳಲ್ಲಿ ಏಕೀಕೃತ ಕೋವಿಡ್-19 ಡ್ಯಾಶ್‌ಬೋರ್ಡ್ ಸಿದ್ಧವಾಗಲಿದೆ.
ಗೃಹ ಕಚೇರಿ “ಕೃಷ್ಣಾ’ದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಕೋವಿಡ್- 19 ಸಂಬಂಧ ಡ್ಯಾಶ್‌ಬೋರ್ಡ್ ಕುರಿತು ಚರ್ಚೆ ನಡೆಯಿತು.
ಸದ್ಯ ಆರೋಗ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತ್ಯೇಕವಾಗಿ ತಮ್ಮ ವೆಬ್‌ಸೈಟ್‌ಗಳಲ್ಲಿ ಕೋವಿಡ್- 19 ಕುರಿತು ಮಾಹಿತಿ ನೀಡುತ್ತಿವೆ. ಜತೆಗೆ ಬಿಬಿಎಂಪಿ ಪ್ರತ್ಯೇಕವಾಗಿ ಕೋವಿಡ್-19 ವಾರ್ ರೂಂ ಆರಂಭಿಸಿದೆ. ಇದರಿಂದಾಗಿ ಕೋವಿಡ್- 19 ಕುರಿತು ವಿವಿಧ ಕಡೆ ಮಾಹಿತಿ ಲಭ್ಯವಾಗುತ್ತಿದ್ದು, ವಿವರಗಳಲ್ಲಿನ ವ್ಯತ್ಯಾಸ ಗೊಂದಲಕ್ಕೆ ಎಡೆ ಮಾಡಿಕೊಡಬಹುದು. ಆ ಹಿನ್ನೆಲೆಯಲ್ಲಿ ಏಕೀಕೃತ ಪೋರ್ಟಲ್ ರೂಪಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಅದರಂತೆ ಅಂಕಿಸಂಖ್ಯೆ ಇತರ ಸುಧಾರಿತ ಮಾಹಿತಿಯನ್ನು ಆರೋಗ್ಯ ಇಲಾಖೆ ಒದಗಿಸಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಾಗೃತಿ, ಪ್ರಚಾರ ಮಾಹಿತಿ ನೀಡಲಿದ್ದು, ಇ-ಆಡಳಿತ ಇಲಾಖೆಯು ಡ್ಯಾಶ್‌ಬೋರ್ಡ್ ನಿರ್ವಹಣೆ ವಹಿಸಿಕೊಳ್ಳಲಿದೆ. ಕೋವಿಡ್- 19ಕ್ಕೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿ, ಅಂಕಿಸಂಖ್ಯೆ ಸಹಿತ ಉಪಯುಕ್ತ ಮಾಹಿತಿಯನ್ನು ಡ್ಯಾಶ್‌ಬೋರ್ಡ್ ಒಳಗೊಂಡಿರಲಿದ್ದು, ವಾರಾಂತ್ಯದೊಳಗೆ ಸಿದ್ಧವಾಗುವ ನಿರೀಕ್ಷೆ ಇದೆ ಎಂದು ಹೇಳಿವೆ.