Advertisement

ಪ್ರಜಾಪ್ರಭುತ್ವದಲ್ಲಿ ಜನರ ಭಾಗೀದಾರಿಕೆ ಮುಖ್ಯ

12:24 AM Dec 19, 2020 | mahesh |

ದೇಶದ ಆಡಳಿತ ವ್ಯವಸ್ಥೆ ನಾಲ್ಕು ಸ್ತಂಭಗಳ ಮೇಲೆ ನಿಂತಿದೆ. ಸಂವಿಧಾನದಲ್ಲಿಯೇ ಇದನ್ನು ಪ್ರಸ್ತಾವಿಸಲಾಗಿದ್ದು ಅದರಂತೆ ಆಡಳಿತವನ್ನು ವಿಕೇಂದ್ರೀಕರಿಸಲಾಗಿದೆ. ಜನರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದು, ಅಭಿವೃದ್ಧಿ ಮತ್ತು ಜನ ಕಲ್ಯಾಣ ಯೋಜನೆಗಳನ್ನು ಕ್ಷಿಪ್ರಗತಿ ಯಲ್ಲಿ ತಲುಪಿಸುವ ಉದ್ದೇಶದೊಂದಿಗೆ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಗ್ರಾಮ ಪಂಚಾಯತ್‌, ಜಿಲ್ಲಾ ಪಂಚಾಯತ್‌, ರಾಜ್ಯ ಮತ್ತು ಕೇಂದ್ರ ಸರಕಾರ ಇವೇ ಆ ನಾಲ್ಕು ಆಡಳಿತ ವ್ಯವಸ್ಥೆಗಳಾಗಿವೆ.

Advertisement

ಪಂಚಾಯತ್‌ ವ್ಯವಸ್ಥೆ ಕಾಲಕಾಲಕ್ಕೆ ಬದಲಾ ಗುತ್ತಾ ಬಂದು ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಪಂಚಾಯತ್‌ ರಾಜ್‌ ಕಾಯ್ದೆಗೆ ಪ್ರಮುಖ ಅಂಶ ಗಳನ್ನು ಸೇರಿಸಲಾಯಿತು. ಈ ಮೂಲಕ ಇಡೀ ದೇಶದಲ್ಲಿ ಏಕ ರೀತಿಯ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಸುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಸದ್ಯ ಕರ್ನಾಟಕದಲ್ಲಿ ತ್ರಿಸ್ತರದ ಪಂಚಾಯತ್‌ ರಾಜ್‌ ಆಡಳಿತವಿದೆ. ಗ್ರಾಮ, ತಾಲೂಕು, ಜಿಲ್ಲಾ ಪಂಚಾ ಯತ್‌ಗಳು ಅಸ್ತಿತ್ವದಲ್ಲಿವೆ.

ಗ್ರಾ. ಪಂಚಾಯತ್‌ ಕಾರ್ಯವ್ಯಾಪ್ತಿ
ವಾರ್ಷಿಕ ಯೋಜನೆಯ ತಯಾರಿ ಮತ್ತು ಅಯವ್ಯಯ ಸಿದ್ಧಗೊಳಿಸುವುದು, ಕುಡಿಯುವ ನೀರಿನ ಪೂರೈಕೆ, ದಾರಿದೀಪ, ಮನೆ ನಿವೇಶಗಳ ವಿತರಣೆ, ವಸತಿ ಸೌಕರ್ಯ, ಬಡತನ ನಿರ್ಮೂಲನೆ ಕಾರ್ಯಕ್ರಮ ಹಾಗೂ ರಸ್ತೆ, ಮೋರಿಗಳ ನಿರ್ಮಾಣ ಪ್ರತಿಯೊಂದೂ ಗ್ರಾ.ಪಂ.ಗಳ ಹೊಣೆಗಾರಿಕೆಯಾಗಿದೆ.

ಆದರೆ ಹೆಚ್ಚಿನ ಪಂಚಾಯತ್‌ಗಳು ತಮ್ಮ ಹೊಣೆಗಾರಿಕೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಕಾರ್ಯಗತಗೊಳಿಸುತ್ತಿಲ್ಲ. ಗಾಂಧೀಜಿ ಅವರ ರಾಮರಾಜ್ಯದ ಕನಸು ನನಸಾ ಗಿಲ್ಲ. ಸಂವಿಧಾನ ತಜ್ಞರು, ಆಡಳಿತ ನಿಪುಣರ ಪ್ರಕಾರ ಪಂಚಾಯತ್‌ ರಾಜ್‌ ವ್ಯವಸ್ಥೆಯ ಮುಖ್ಯಾಂಶಗಳೆಂದರೆ 3 ಎಫ್ ಗಳು.
1. Fund (ಸಂಪನ್ಮೂಲ)
2. Function (ಕಾರ್ಯನಿರ್ವಹಣೆ)
3. Functionaries (ಅಧಿಕಾರಸ್ಥರು)
ಇವುಗಳಿಂದ ಜನರಿಗೆ ಪ್ರಯೋಜನ ದೊರಕಿಲ್ಲ. ಬಡವರ ಸಮಸ್ಯೆ ಪರಿಹಾರವಾಗಿಲ್ಲ. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಿಲ್ಲ. ಗ್ರಾಮೀಣ ಜನರ ಬದುಕು ಹಸನಾಗಿಲ್ಲ. ಸರಿಯಾಗಿ ಅಧ್ಯ ಯನ ಮಾಡಿ ಈ ಎಲ್ಲ ನ್ಯೂನತೆಗಳನ್ನು ಸರಿಪಡಿಸ ಬೇಕಾಗಿದೆ. ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ 3ಎಫ್ ಗಳಿಗಿಂತ ಮೊದಲು ಈ ಕೆಳಗಿನ 4 ಎಫ್ ಗಳನ್ನು ಅನುಷ್ಠಾನಕ್ಕೆ ತರಬೇಕಾಗಿದೆ.

1. Faith (ನಂಬಿಕೆ, ಭಕ್ತಿ, ನಿಷ್ಠೆ, ಭರವಸೆ)
2. Facts ( ನಿಜಸಂಗತಿ, ಸತ್ಯಾಂಶ, ವಾಸ್ತವಾಂಶ)
3. Figures (ಸರಿಯಾದ ಅಂಕಿಅಂಶಗಳು)
4. Freedom (ಸ್ವಾತಂತ್ರ್ಯ ಮತ್ತು ಹಕ್ಕು)

Advertisement

1. ಪಂಚಾಯತ್‌ನಲ್ಲಿರುವ ಪ್ರತಿನಿಧಿಗಳಿಗೆ ಪಂಚಾ ಯತ್‌ ಕಾರ್ಯವ್ಯಾಪ್ತಿ ಮೇಲೆ ನಂಬಿಕೆ, ಭಕ್ತಿ ಇರ ಬೇಕಾಗಿದ್ದು ಇದರ ಕೊರತೆ ಇದೆ. ಅಧಿಕಾರ ವಿಕೇಂದ್ರೀಕರಣದ ಮಹತ್ವವನ್ನು ಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡುವುದು ತೀರ ಅಗತ್ಯವಾಗಿದೆ.

2. ಪಂಚಾಯತ್‌ ಸದಸ್ಯರು ನಿಜ ಸಂಗತಿ, ಸತ್ಯಾಂಶ ಮತ್ತು ವಾಸ್ತವಾಂಶಗಳನ್ನು ತಿಳಿದುಕೊಳ್ಳಲು ಸಂಪೂರ್ಣ ಸಫ‌ಲರಾಗಿಲ್ಲ. ಅಧಿಕಾರಿಗಳು ಮಾಹಿತಿ ಯನ್ನು ಕಲೆ ಹಾಕುವುದಿಲ್ಲ. ಇದರಿಂದಾಗಿ ನಮ್ಮ ಅನೇಕ ಯೋಜ ನೆಗಳು ಸಮರ್ಪಕವಾಗಿ ಅನು ಷ್ಠಾನವಾಗುತ್ತಿಲ್ಲ. ವೈಜ್ಞಾನಿಕವಾಗಿ ಸರಿಯಾದ ಮಾಹಿ ತಿಗಳನ್ನು ಕಲೆಹಾಕುವುದನ್ನು ಕಡ್ಡಾಯ ಗೊಳಿಸಬೇಕು ಮತ್ತು ಸರಿಯಾದ ಯೋಜನೆಯನ್ನು ಪ್ರಚುರಪಡಿಸಬೇಕು.

3. ಮಾಹಿತಿಯ ಕೊರತೆಯಿಂದಾಗಿ ತಪ್ಪು ಅಂಕಿ ಅಂಶಗಳ ಮೇಲೆ ನಿರ್ಣಯ ಕೈಗೊಂಡ ಉದಾಹ ರಣೆಗಳು ನಮ್ಮ ಮುಂದೆ ಬಹಳಷ್ಟಿವೆ. ಹೀಗಾಗ ದಂತೆ ಕಟ್ಟುನಿಟ್ಟಿನ ಸೂಕ್ತ ಕ್ರಮ ಕೈಗೊಳ್ಳಬೇಕು. ಅನಧಿಕೃತ ಕಟ್ಟಡಗಳು, ವಸತಿರಹಿತರ ಸರಿಯಾದ ಮಾಹಿತಿಯನ್ನು ಕಲೆ ಹಾಕಬೇಕು.

4. ವಿಕೇಂದ್ರಿಕರಣ ಸಿದ್ಧಾಂತದ ವ್ಯವಸ್ಥೆ ಇನ್ನಷ್ಟು ಪ್ರಗತಿ ಕಾಣಲು ಗ್ರಾಮೀಣ ಜನರಿಗೆ ಸ್ವಾತಂತ್ರ್ಯ ನೀಡಬೇಕಾಗಿರುವುದು ತೀರಾ ಅಗತ್ಯ. ಸದ್ಯ ಪಂಚಾ ಯತ್‌ರಾಜ್‌ ವ್ಯವಸ್ಥೆಯಲ್ಲಿ ಅಧಿಕಾರಿಗಳು ಹಸ್ತ ಕ್ಷೇಪ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಆಡಳಿತ ವ್ಯವಸ್ಥೆ ಯಶಸ್ವಿಯಾಗಲು ಆಡಳಿತ ವಿಕೇಂದ್ರಿಕರಣ ದೊಂದಿಗೆ ಅಧಿಕಾರದ ವಿಕೇಂದ್ರಿ ಕರಣವು ಅಗತ್ಯ. ಈ ವಿಚಾರವನ್ನು ತಿಳಿದು ಸಂವಿ ಧಾನ ತಜ್ಞರು ಗ್ರಾಮ ಪಂಚಾಯತ್‌ ಅಧ್ಯಕ್ಷರಿಗೆ ಚೆಕ್‌ಗೆ ಸಹಿ ಹಾಕುವ ಅಧಿಕಾರ ನೀಡಿರುವುದು ಗಮನಾರ್ಹ. ಯಾವುದೇ ಕಾರಣಕ್ಕೂ ಕಾನೂನಿಗೆ ವಿರುದ್ಧವಾಗಿ ಪಂಚಾಯತ ಆಡಳಿತ ಸದಸ್ಯರು, ಅಧಿಕಾರಿಗಳಾಗಲಿ, ಆಡಳಿತ ವರ್ಗದವರಾಗಲಿ ಹಸ್ತಕ್ಷೇಪ ಮಾಡಬಾರದು.

ಅನುಭವೀ ಸಿಬಂದಿಯ ಅಗತ್ಯ: ಪಂಚಾ ಯತ್‌ ಕಾರ್ಯನಿರ್ವಹಣೆಗೆ ನುರಿತ, ನಿಷ್ಠಾವಂತ, ಪ್ರಾಮಾಣಿಕ, ಅನುಭವಿ ಸಿಬಂದಿಯ ಅಗತ್ಯವಿದೆ. ದುರಾದೃಷ್ಟವಶಾತ್‌ ನಮ್ಮ ರಾಜ್ಯದಲ್ಲಿ ಇದರ ಕೊರತೆ ಎದ್ದು ಕಾಣುತ್ತಿದೆ. ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಸಿಬಂದಿಯೇ ಇಲ್ಲವಾಗಿದ್ದು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಅನೇಕ ಸಿಬಂದಿಗೆ ವಿಕೇಂದ್ರೀಕರಣ ಸಿದ್ಧಾಂತದ ತಿಳಿವಳಿಕೆ ಇಲ್ಲದಿರುವುದು ಗಮನಾರ್ಹ. ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಿಬಂದಿಯ ನೇಮಕಕ್ಕೆ ಅಗತ್ಯ ಕಾನೂನು ತಿದ್ದುಪಡಿ ತರುವುದು ಸೂಕ್ತ. ಸಂಪನ್ಮೂಲದ ಸದ್ಬಳಕೆಗೆ, ನಿಷ್ಠಾವಂತ, ಪ್ರಮಾಣಿಕ ಅನುಭವೀ ಸಿಬಂದಿಯ ಅಗತ್ಯವಿದೆ. ಗ್ರಾಮ ಪಂಚಾಯತ್‌ ನಮ್ಮ ಕುಟುಂಬ ಎಂಬ ಭಾವನೆಯೊಂದಿಗೆ ಪಂಚಾಯತ್‌ ಸದಸ್ಯರು ಕಾರ್ಯನಿರ್ವಹಿಸಬೇಕಿದೆ. ಗ್ರಾಮ ಮನೆಯೆಂಬ ಭಾವನೆ ಅಗತ್ಯ. ಇಂತಹ ಭಾವನೆ, ನಂಬಿಕೆ ಇದ್ದಾಗಲಷ್ಟೆ ಉತ್ತಮ ಆಡಳಿತ ನಡೆಸಲು ಸಾಧ್ಯ.

ಹದಗೆಟ್ಟ ವ್ಯವಸ್ಥೆಯನ್ನು ಮತ್ತೆ ಸುಸ್ಥಿತಿಗೆ ತರುವಲ್ಲಿ ಗ್ರಾಮಸ್ಥರ ಪಾತ್ರ ಅತೀ ಮಹತ್ವದ್ದಾಗಿದೆ. ಅದರಲ್ಲೂ ಯುವಜನತೆ ಪಂಚಾಯತ್‌ ವ್ಯವಸ್ಥೆಯಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳ ಬೇಕಿದೆ. ಪ್ರತಿಯೊಂದಕ್ಕೂ ಆಡಳಿತ ವ್ಯವಸ್ಥೆಯತ್ತ ಬೆಟ್ಟು ಮಾಡುವುದರ ಬದಲಾಗಿ ಗ್ರಾಮದ ಬಗೆಗೆ ಕಾಳಜಿಯುಳ್ಳ ಪ್ರಜೆಯಾಗಿ, ವ್ಯವಸ್ಥೆಯಲ್ಲಿ ಬದಲಾವಣೆ ತರುವ ಹೊಣೆಗಾರಿಕೆಯನ್ನು ವಹಿಸಿ ಕೊಂಡು ಹಿರಿಯರಿಗೆ ಹೆಗಲು ಕೊಡಬೇಕಿದೆ. ಹಾಗಾದಾಗ ಮಾತ್ರ ಅಧಿಕಾರ ವಿಕೇಂದ್ರೀಕರಣದ ಉದ್ದೇಶ ಈಡೇರಿ, ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಸಾಧ್ಯ.

ಪ್ರಜಾಪ್ರಭುತ್ವ ಆಡಳಿತದಲ್ಲಿ ಜನರ ಭಾಗ ವಹಿಸುವಿಕೆ ಅತೀ ಮುಖ್ಯ. ಪ್ರಜಾ ಪ್ರಭುತ್ವ ಎಂದರೆ ಜನರಿಂದ, ಜನರಿ ಗಾಗಿ, ಜನರಿಗೋಸ್ಕರ ನಡೆಯುವ ಆಡಳಿತ ಪದ್ಧತಿ. ಸಂವಿಧಾನ ಹಾಗೂ ಪಂಚಾ ಯತ್‌ ರಾಜ್‌ ವ್ಯವಸ್ಥೆ ಈ ರೀತಿಯ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಆದರೆ ಅನುಷ್ಠಾನದಲ್ಲಿ ಮಾತ್ರ ತೀವ್ರ ಕೊರತೆ ಉಂಟಾಗಿದೆ. ಈ ಕೊರತೆಯನ್ನು ನಾವು ಗಂಭೀರವಾಗಿ ಪರಿಗಣಿಸದೇ ಇರುವುದರಿಂದಲೇ ಪರಿಸ್ಥಿತಿ ಹದಗೆ ಟ್ಟಿದೆ. ಈ ವ್ಯವಸ್ಥೆ ಬದಲಾಗಬೇಕು. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಪ್ರತಿನಿಧಿಗಳಿಗೆ ಕಡ್ಡಾಯವಾಗಿ ಪಂಚಾ ಯತ್‌ ವ್ಯವಸ್ಥೆಯ ಆಡಳಿತದ ಕುರಿತು ಮಾಹಿತಿ, ತಿಳಿವಳಿಕೆ ನೀಡಬೇಕಿದೆ.

ಎ.ಜಿ. ಕೊಡ್ಗಿ, ಅಧ್ಯಕ್ಷರು, ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ (ರಿ.)

Advertisement

Udayavani is now on Telegram. Click here to join our channel and stay updated with the latest news.

Next