Advertisement

ಮೂವರು ಅಭಿಮಾನಿಗಳು ಮತ್ತು ಅಪರಿಚಿತ ಬಾವುಟ; ಇಂದು ಆ ದೇಶದ ಆಟಗಾರರಿಗೆ ಭಾರೀ ಬೇಡಿಕೆ

03:31 PM Sep 09, 2021 | ಕೀರ್ತನ್ ಶೆಟ್ಟಿ ಬೋಳ |
ಶ್ರೀಲಂಕಾದ ಕೊಲಂಬೊ ಮತ್ತು ಗಾಲೆ ಮೈದಾನಗಳಲ್ಲಿ ಆ ದೇಶದ ಪಂದ್ಯಗಳು ನಡೆಯುತ್ತಿದ್ದರೆ ಆ ಮೂವರು ಯುವಕರು ತಮ್ಮ ದೇಶದ ಆಟಗಾರರಿಗೆ ಪ್ರೋತ್ಸಾಹ ನೀಡಲು ಬಂದಿದ್ದರು. ತಮ್ಮ ದೇಶದ ಧ್ವಜವನ್ನು ಹಿಡಿದು ಸಂಭ್ರಮಿಸುತ್ತಿದ್ದರು. ಕ್ರೀಡಾಂಗಣದಲ್ಲಿ ಅಷ್ಟೊಂದು ಸಾವಿರ ಮಂದಿ ಪ್ರೇಕ್ಷಕರ ನಡುವೆ ಈ ಮೂವರು ಮಾತ್ರ ಮಿಂಚುತ್ತಿದ್ದರು. ಅದಕ್ಕೆ ಕಾರಣ ಆ ದೇಶದ ತಂಡಕ್ಕೆ ಚಿಯರ್ ಮಾಡಲು ಬಂದವರು ಅವರು ಮೂವರು ಮಾತ್ರ!
Now pay only for what you want!
This is Premium Content
Click to unlock
Pay with

ನಮ್ಮದು ಕೇವಲ ಯುದ್ಧಗ್ರಸ್ಥ ದೇಶವಲ್ಲ, ನಮ್ಮ ದೇಶದಲ್ಲಿ ಮದ್ದುಗುಂಡುಗಳು ಮಾತ್ರ ಸಿಡಿಯುವುದಲ್ಲ. ನಮ್ಮ ದೇಶದ ಪ್ರತಿಭೆಗಳನ್ನು ವಿಶ್ವ ನೋಡಬೇಕಿದೆ. ನಮ್ಮಲ್ಲೂ ಉತ್ತಮ ಕ್ರಿಕೆಟ್ ಆಟಗಾರಿದ್ದಾರೆ. ನಮ್ಮ ದೇಶದ ಬಾವುಟ ವಿಶ್ವದೆಲ್ಲೆಡೆ ಮೈದಾನಗಳಲ್ಲಿ ಹಾರಾಡಬೇಕು..” ಹೀಗನ್ನುತ್ತಿದ್ದ ಯುವಕನ ಉಸಿರಲ್ಲಿ ಉದ್ವೇಗವಿತ್ತು. ಭಾವನೆಗಳ ಏರಿಳಿತವಿತ್ತು. ತನ್ನ ದೇಶದ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಬೇಕು ಎನ್ನುವ ಹಪಹಪಿಯಿತ್ತು. ಕ್ರೀಡಾಂಗಣದಲ್ಲಿ ನಿಂತು ದೇಶದ ಧ್ವಜವನ್ನು ಹಾರಿಸುತ್ತಿದ್ದರೇ, ದೇಶ ಪ್ರೇಮ ರಕ್ತದ ಕಣ ಕಣದಲ್ಲೂ ಹರಿದಾಡುತ್ತಿತ್ತು.

Advertisement

ಹೌದು, ಅದು 2012ರ ಟಿ20 ವಿಶ್ವಕಪ್. ಆಗಷ್ಟೇ ಅಫ್ಘಾನಿಸ್ಥಾನವೆಂಬ ಕ್ರಿಕೆಟ್ ಶಿಶು ಹೆಸರು ಮಾಡಲಾರಂಭಿಸಿತ್ತು. ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆ ಅರ್ಹತೆ ಪಡೆದಿತ್ತು. ಲಂಕಾದ ಮೈದಾನಗಳಲ್ಲಿ ಅಫ್ಘಾನಿಸ್ಥಾನದ ಪಂದ್ಯಗಳು ನಡೆಯುತ್ತಿದ್ದರೆ ಆ ಮೂವರು ಯುವಕರು ತಮ್ಮ ದೇಶದ ಆಟಗಾರರಿಗೆ ಪ್ರೋತ್ಸಾಹ ನೀಡಲು ಬಂದಿದ್ದರು. ಕ್ರೀಡಾಂಗಣದಲ್ಲಿ ಅಷ್ಟೊಂದು ಸಾವಿರ ಮಂದಿ ಪ್ರೇಕ್ಷಕರ ನಡುವೆ ಈ ಮೂವರು ಮಾತ್ರ ಮಿಂಚುತ್ತಿದ್ದರು. ಅದಕ್ಕೆ ಕಾರಣ ಅಫ್ಘಾನ್ ದೇಶದ ತಂಡಕ್ಕೆ ಚಿಯರ್ ಮಾಡಲು ಬಂದವರು ಅವರು ಮೂವರು ಮಾತ್ರ!

ಜಿಯಾವುದ್ದೀನ್ ಆರ್ಯೂಬಿ, ಇಸ್ಲಾಮುದ್ದೀನ್ ಆರ್ಯೂಬಿ ಮತ್ತು ಇಹ್ಸಾನ್ ಹಾಶಿಮಿ ಎಂಬವರೇ ಈ ಅಭಿಮಾನಿಗಳು. ಶ್ರೀಲಂಕಾದ ಕೊಲಂಬೊ ಮತ್ತು ಗಾಲೆ ಮೈದಾನಗಳಲ್ಲಿ ತಮ್ಮ ದೇಶವನ್ನು ಬೆಂಬಲಿಸುತ್ತಿದ್ದರು. ತಮ್ಮ ದೇಶದ ಧ್ವಜವನ್ನು ಹಿಡಿದು ಸಂಭ್ರಮಿಸುತ್ತಿದ್ದರು.

ಆಗಷ್ಟೇ ಕ್ರಿಕೆಟ್ ಲೋಕಕ್ಕೆ ಅಫ್ಗಾನ್ ಕಾಲಿಟ್ಟಿತ್ತು. ಮೈದಾನದಲ್ಲಿ ಈ ಯುವಕರು ಕಪ್ಪು-ಕೆಂಪು-ಹಸಿರು ಬಣ್ಣದ ಬಾವುಟವನ್ನು ಹೆಮ್ಮೆಯಿಂದ ಹಾರಿಸುತ್ತಿದ್ದರೇ ಹಲವರಿಗೆ ಇದು ಯಾವ ದೇಶದ ಬಾವುಟವೆಂದೇ ಗೊತ್ತಿರಲಿಲ್ಲ. ಹಲವರು ಇವರ ಬಳಿ ಬಂದು ಇದು ಯಾವ ದೇಶದ ಬಾವುಟ ಎಂದು ಕೇಳಿದ್ದಾರೆ ಕೂಡಾ! “ಇಡೀ ಮೈದಾನದಲ್ಲಿ ನಾವು ಮೂವರು ಮಾತ್ರ ಅಫ್ಘಾನ್ ಗೆ ಬೆಂಬಲ ನೀಡುತ್ತಿದ್ದೇವೆ. ನಮ್ಮ ಧ್ವಜವನ್ನು ಎಲ್ಲರೂ ನೋಡಬೇಕು ಎಂದು ಹಾರಿಸುತ್ತಿದ್ದೇವೆ” ಎಂದ 28 ವರ್ಷದ ಜಿಯಾ ಧ್ವನಿಯಲ್ಲಿ ಮುಂಬರುವ ದೊಡ್ಡ ದಿನಗಳಿಗೆ ತಾವು ನಾಂದಿ ಹಾಡುತ್ತಿದ್ದೇವೆ ಎಂಬ ಹೆಮ್ಮೆ-ಹುಮ್ಮಸ್ಸಿತ್ತು.

Advertisement

ಜಿಯಾವುದ್ದೀನ್ ಆರ್ಯೂಬಿ ಮತ್ತು ಇಹ್ಸಾನ್ ಹಾಶಿಮಿ ಹಲವು ವರ್ಷಗಳಿಂದ ಇಂಗ್ಲೆಂಡ್ ನಲ್ಲಿ ನೆಲೆಸಿದವರು. ಜಿಯಾವುದ್ದೀನ್ ಆರ್ಯೂಬಿಯ ಸಹೋದರ ಇಸ್ಲಾಮುದ್ದೀನ್ ಆರ್ಯೂಬಿ ಅಫ್ಘಾನಿಸ್ಥಾನದ ಕಾಬೂಲ್ ನವರು. ಈ ಮೂವರೂ ಆಗ್ನೇಯ ಅಫ್ಘಾನಿಸ್ತಾನದ ಪಾಕ್ತಿಯಾ ಮೂಲದವರು.

ಇಸ್ಲಾಮುದ್ದೀನ್ ನಿರ್ಮಾಣ ಕಂಪನಿಯನ್ನು ನಡೆಸುತ್ತಿದ್ದರು. ತನ್ನ ದೇಶವು ಟಿ20 ವಿಶ್ವಕಪ್ ಗೆ ಅರ್ಹತೆ ಪಡೆದಾಗ ತನ್ನೆಲ್ಲಾ ಕೆಲಸವನ್ನು ಬದಿಗೊತ್ತಿ ಲಂಕಾ ವಿಮಾನವೇರಿದ್ದರು. ತಂಡವು ವಿಶ್ವಕಪ್ ಗೆ ಅರ್ಹತೆ ಪಡೆದಿರುವುದಕ್ಕಾಗಿ ಎಲ್ಲಾ ಅಫ್ಘಾನಿಗಳಿಗೆ ಅಭಿನಂದನೆ ಹೇಳುತ್ತೇನೆ ಎಂದು ಇಸ್ಲಾಮುದ್ದೀನ್ ಹೇಳಿದರೆ, ನಮ್ಮ ತಂಡವನ್ನು ಬೆಂಬಲಿಸಲು ಇಲ್ಲಿಗೆ ಬಂದಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ ಎನ್ನುತ್ತಾರೆ ಜಿಯಾವುದ್ದೀನ್.

ಸದ್ಯ ಅಫ್ಘಾನಿಸ್ಥಾನ ತಂಡ ವಿಶ್ವ ಕ್ರಿಕೆಟ್ ನಲ್ಲಿ ಬಹಳಷ್ಟು ಮುಂದುವರಿದಿದೆ. 2021ರ ವಿಶ್ವಕಪ್ ಗೆ ನೇರ ಅರ್ಹತೆ ಪಡೆಯಲು ಶ್ರೀಲಂಕಾ, ಬಾಂಗ್ಲಾದೇಶ, ಐರ್ಲೆಂಡ್ ದೇಶಗಳು ಪರದಾಡುತ್ತಿದ್ದರೆ, ಅಫ್ಘಾನಿಸ್ಥಾನ ತಂಡವು ಅವರಿಗಿಂತ ಮೊದಲೇ ಪ್ರವೇಶ ಪಡೆದಿದೆ. 2012ರ ಟಿ20 ವಿಶ್ವಕಪ್ ನಲ್ಲಿ ಗ್ರೂಪ್ ಹಂತದಲ್ಲಿ ಅಫ್ಘಾನ್ ಗೆ ಎದುರಾಗಿದ್ದು ಬಲಿಷ್ಠ ತಂಡಗಳಾದ ಭಾರತ ಮತ್ತು ಇಂಗ್ಲೆಂಡ್. ಈ ಎರಡೂ ಪಂದ್ಯಗಳಲ್ಲಿ ಅಫ್ಘಾನ್ ಹುಡುಗರು ಸೋತರಾದರೂ ವಿಶ್ವ ಕ್ರಿಕೆಟ್ ನಲ್ಲಿ ತಮ್ಮ ಛಾಪು ಮೂಡಿಸಿದ್ದರು.

2009ರಲ್ಲಿ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಡಿದ ಅಫ್ಘಾನ್ ಸದ್ಯ ವಿಶ್ವ ರ್ಯಾಂಕಿಂಗ್ ನಲ್ಲಿ 10ನೇ ಸ್ಥಾನದಲ್ಲಿದೆ. ಟಿ20 ರ್ಯಾಂಕಿಂಗ್ ನಲ್ಲಿ ಎಂಟನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್, ಶ್ರೀಲಂಕಾ ತಂಡಗಳಿಗಿಂತ ಉತ್ತಮವಾಗಿದೆ. ಅಫ್ಘಾನ್ ಆಟಗಾರರಾದ ರಶೀದ್ ಖಾನ್, ಮೊಹಮ್ಮದ್ ನಬಿ, ಮುಜಿಬ್ ಉರ್ ರಹಮಾನ್ ವಿಶ್ವದೆಲ್ಲೆಡೆ ಲೀಗ್ ಗಳಲ್ಲಿ ಆಡುತ್ತಿದ್ದಾರೆ.

2015 ಮತ್ತು 2019ರ ಏಕದಿನ ವಿಶ್ವಕಪ್ ನಲ್ಲೂ ಆಡಿರುವ ಅಫ್ಘಾನಿಸ್ಥಾನದ ಏಕದಿನ ತಂಡವೂ ಬಲಿಷ್ಠವಾಗಿದೆ. ಅಫ್ಘಾನ್ ಸ್ಪಿನ್ನರ್, ಮುಜಿಬ್ ಉರ್ ರಹಮಾನ್ ಸದ್ಯ ಏಕದಿನ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಟಿ20 ಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಮತ್ತೊಬ್ಬ ಬೌಲರ್ ರಶೀದ್ ಖಾನ್ ಟಿ20 ಬೌಲಿಂಗ್ ನಲ್ಲಿ ಮೂರನೇ ರ್ಯಾಂಕ್ ನಲ್ಲಿದ್ದಾರೆ. ಮೊಹಮ್ಮದ್ ನಬಿ ಸದ್ಯ ವಿಶ್ವದ ಮೂರನೇ ಶ್ರೇಯಾಂಕದ ಆಲ್ ರೌಂಡರ್.

ದಶಕದ ಹಿಂದೆ ಈ ಬಾವುಟ ಯಾವ ದೇಶದ್ದು ಎಂದು ಪ್ರಶ್ನೆ ಎದುರಿಸಿದ್ದ ಮೂವರು ಅಭಿಮಾನಿಗಳ ಬಯಕೆ ಇಂದು ಈಡೇರಿದೆ. ಇಂದು ಅಫ್ಘಾನ್ ಕ್ರಿಕೆಟ್ ತಂಡಕ್ಕೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅಫ್ಘಾನ್ ಆಟಗಾರರನ್ನು ತಮ್ಮ ತಂಡದಲ್ಲಿ ಆಡಿಸಲು ವಿಶ್ವದಾದ್ಯಂತ ಪ್ರಾಂಚೈಸಿಗಳು ಪೈಪೋಟಿ ನಡೆಸುತ್ತಿದ್ದಾರೆ. ನಿಜವಾದ ಪ್ರತಿಭೆ ಬೆಳಕಿಗೆ ಬರುವುದು ತಡವಾದರೂ ಅದರ ಕಿರಣಗಳು ದೂರವನ್ನು ಕ್ರಮಿಸುತ್ತದೆ ಎನ್ನುವುದಕ್ಕೆ ಈ ಪ್ರಸಂಗ ಉತ್ತಮ ಉದಾಹರಣೆ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.