Advertisement

ಪುಲ್ವಾಮಾ ದಾಳಿಯಲ್ಲಿ ಇಮ್ರಾನ್‌ ಪಾತ್ರ ; ಕಠಿನ ಕ್ರಮ ಅಗತ್ಯ

08:07 AM Oct 31, 2020 | mahesh |

ಉಗ್ರ ಸಂಘಟನೆಗಳಿಗೆ ಹಣಕಾಸು ನೆರವನ್ನು ತಡೆಯಲು ರಚಿತವಾಗಿರುವ ಎಫ್ಎಟಿಎಫ್ನ ಬೂದುಪಟ್ಟಿಯಲ್ಲಿಯೇ ಇರುವ ಪಾಕಿಸ್ಥಾನವನ್ನು, ಕಪ್ಪುಪಟ್ಟಿಗೆ ಸೇರಿಸಬೇಕೆಂಬ ಭಾರತದ ಧ್ವನಿಗೆ ಈಗ ಬಲ ಸಿಗಲಿದೆ.

Advertisement

ಪುಲ್ವಾಮಾದಲ್ಲಿ ಭಾರತದ 40 ಯೋಧರನ್ನು ಹತ್ಯೆಗೈದಿದ್ದು ತಾನೇ ಎಂದು ಪಾಕ್‌ ಘೋಷಿಸಿರುವುದಷ್ಟೇ ಅಲ್ಲದೇ, ಇದನ್ನು ಇಮ್ರಾನ್‌ ಸರಕಾರದ ದೊಡ್ಡ ಸಾಧನೆ ಎಂದು ಹೇಳಿದ್ದಾರೆ ಪಾಕಿಸ್ಥಾನದ ಸಚಿವ ಫ‌ವಾದ್‌ ಚೌಧರಿ.

ಇಷ್ಟು ಸಮಯದಿಂದ ಪುಲ್ವಾಮಾ ದಾಳಿಗೂ ತಮಗೂ ಸಂಬಂಧವೇ ಇಲ್ಲ ಎಂದು ಹೇಳುತ್ತಾ ಬರುತ್ತಿದ್ದ ಪಾಕ್‌, ಈಗ ಬಹಿರಂಗವಾಗಿಯೇ ತನ್ನ ದುಷ್ಕೃತ್ಯವನ್ನು ಒಪ್ಪಿಕೊಂಡಿದೆ. ಕಳೆದ ವರ್ಷ ಅಮೆರಿಕ ಪ್ರವಾಸದಲ್ಲಿದ್ದ ಇಮ್ರಾನ್‌ ಖಾನ್‌, “”ಪುಲ್ವಾಮಾ ದಾಳಿಗೆ ಅನಗತ್ಯವಾಗಿ ಪಾಕಿಸ್ಥಾನವನ್ನು ದೂರುತ್ತದೆ ಭಾರತ. ಈ ಕೃತ್ಯ ಎಸಗಿದ್ದು, ಭಾರತದ ಸೇನೆಯಿಂದ ನೊಂದ ಸ್ಥಳೀಯ ಕಾಶ್ಮೀರಿ ಯುವಕ” ಎಂದಿದ್ದರು.

ಈ ದಾಳಿಯ ಹೊಣೆಯನ್ನು ಪಾಕಿಸ್ಥಾನ ಮೂಲದ ಜೈಶ್‌-ಎ- ಮೊಹಮ್ಮದ್‌ ಹೊತ್ತಿದೆಯಲ್ಲ ಎಂಬ ಪ್ರಶ್ನೆ ಎದುರಾದಾಗ, ಜೈಶ್‌ ಭಾರತದಲ್ಲೂ ಕಾರ್ಯಾಚರಿಸುತ್ತದೆ ಎಂದು ಜಾರಿಕೊಂಡಿದ್ದರು.

ಈಗ ಖುದ್ದು ಅವರ ಸರಕಾರದ ಸಚಿವರೇ, ಈ ದುಷ್ಕೃತ್ಯದಲ್ಲಿ ಪಾಕ್‌ನದ್ದೇ ಕೈವಾಡವಿದೆ ಎಂದು ಒಪ್ಪಿಕೊಂಡಿ ದ್ದಾರೆ. ಈ ಬಹಿರಂಗ ಒಪ್ಪಿಗೆ ಪಾಕಿಸ್ಥಾನಕ್ಕೆ ನಿಸ್ಸಂಶಯವಾಗಿಯೂ ಕಗ್ಗಂಟಾಗಿ ಬದಲಾಗಲಿದೆ. ಉಗ್ರ ಸಂಘಟನೆಗಳಿಗೆ ಹಣಕಾಸು ನೆರವನ್ನು ತಡೆಯಲು ರಚಿತವಾಗಿರುವ ಎಫ್ಎಟಿಎಫ್ನ ಬೂದುಪಟ್ಟಿಯಲ್ಲಿಯೇ ಇರುವ ಪಾಕಿಸ್ಥಾನವನ್ನು, ಕಪ್ಪುಪಟ್ಟಿಗೆ ಸೇರಿಸಬೇಕೆಂಬ ಭಾರತದ ಧ್ವನಿಗೆ ಈಗ ಬಲ ಸಿಗಲಿದೆ. ಈ ಕಾರಣಕ್ಕಾಗಿಯೇ ಈಗ ತಮ್ಮ ವರಸೆ ಬದಲಿಸಿರುವ ಫ‌ವಾದ್‌ ಚೌಧರಿ, ತಮ್ಮ ಮಾತನ್ನು ಭಾರತೀಯ ಮಾಧ್ಯಮಗಳು ತಿರುಚುತ್ತಿವೆ ಎನ್ನುತ್ತಿದ್ದಾರೆ.

Advertisement

ಇಮ್ರಾನ್‌ ಸರಕಾರವು ಜಗತ್ತಿಗೆ ಶಾಂತಿ ಪಾಠ ಮಾಡುವ ನೆಪದಲ್ಲಿ ತನ್ನ ನಿಜ ಬಣ್ಣವನ್ನು ಮುಚ್ಚಿಡಲು ಪ್ರಯತ್ನಿಸುತ್ತಲೇ ಬಂದಿದೆ. ಸತ್ಯವೇನೆಂದರೆ, ಕಳೆದೆರಡು ದಶಕಗಳಲ್ಲಿನ ಪಾಕಿಸ್ಥಾನಿ ಆಡಳಿತದಲ್ಲೇ ಇಮ್ರಾನ್‌ರಷ್ಟು ಧರ್ಮಾಂಧ, ಉಗ್ರ ಪರ, “ಪಾಕ್‌ ಸೇನೆಯ ಕೈಗೊಂಬೆ’ ಇನ್ಯಾರೂ ಇರಲಿಲ್ಲ ಎಂದು ರಕ್ಷಣ ಪರಿಣತರು ಹೇಳುತ್ತಾರೆ. ವಿರೋಧಾಭಾಸವೆಂದರೆ ಜೈಶ್‌-ಎ-ಮೊಹಮ್ಮದ್‌, ಲಷ್ಕರ್‌ನಂಥ ಉಗ್ರ ಸಂಘಟನೆಗಳನ್ನು ನಿರಂತರವಾಗಿ ಸಲಹುತ್ತಾ, ಭಾರತ ವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುತ್ತಲೇ ಬಂದಿರುವ ಪಾಕ್‌ ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಗೆ ಇತ್ತೀಚೆಗಷ್ಟೇ ಮರು ಆಯ್ಕೆಯಾಗಿರುವುದು. ಕಣಕಣದಲ್ಲೂ ಭಾರತದ ವಿರುದ್ಧ ದ್ವೇಷವನ್ನು ತುಂಬಿಕೊಂಡು, ಧರ್ಮಾಂಧ ಉಗ್ರರ ಮೂಲಕ ಭಾರತೀಯ ಪಡೆಗಳ ಮೇಲೆ ಸಂಚಿನಿಂದ ದಾಳಿ ನಡೆಸುವ ಪಾಕಿಸ್ಥಾನದ ಹೀನ ಮನಃಸ್ಥಿತಿಗೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲವಾದ ಪೆಟ್ಟು ನೀಡಲೇಬೇಕಿದೆ. ಫ‌ವಾದ್‌ ಚೌಧರಿ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್‌ ಅನ್ನು ಕಟ್ಟಿಹಾಕುವ ಪ್ರಯತ್ನ ವೇಗಪಡೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next