ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ನಾಯಕ ಫವಾದ್ ಚೌಧರಿ ಅವರು ಬಂಧನದ ಭೀತಿಯಿಂದ ಕಾರಿನಿಂದ ಇಳಿದ ಕೂಡಲೇ ನ್ಯಾಯಾಲಯದ ಆವರಣದೊಳಗೆ ಓಡಿಹೋದ ನಾಟಕೀಯ ದೃಶ್ಯಗಳಿಗೆ ಇಸ್ಲಾಮಾಬಾದ್ ಹೈಕೋರ್ಟ್ ಆವರಣ ಸಾಕ್ಷಿಯಾಯಿತು.
ಇಸ್ಲಾಮಾಬಾದ್ ಪೋಲೀಸರ ಪ್ರಕಾರ, ಫವಾದ್ ಚೌಧರಿಯನ್ನು ಕಳೆದ ವಾರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಇತರ ನಾಯಕರೊಂದಿಗೆ “ಶಾಂತಿಗೆ ಧಕ್ಕೆ ತರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ಪ್ರಚೋದಿಸಿದ” ಪ್ರಕರಣದಡಿಯಲ್ಲಿ ಬಂಧಿಸಲಾಯಿತು. ಇಸ್ಲಾಮಾಬಾದ್ ಹೈಕೋರ್ಟ್ ನ ಹೊರಗೆ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನಿ ರೇಂಜರ್‌ಗಳು ಬಂಧಿಸಿದ ನಂತರ ಪ್ರತಿಭಟನೆಗಳು ಆರಂಭವಾಗಿತ್ತು.
ಮಂಗಳವಾರ ಇಸ್ಲಾಮಾಬಾದ್ ಹೈಕೋರ್ಟ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದ ಕೂಡಲೇ, ಫವಾದ್ ಚೌಧರಿ ನ್ಯಾಯಾಲಯದ ಆವರಣದಿಂದ ಹೊರಬಂದು ತಮ್ಮ ಬಿಳಿ ಎಸ್ ಯುವಿ ಒಳಗೆ ಕುಳಿತರು. ಆದರೆ, ನ್ಯಾಯಾಲಯದ ಹೊರಗೆ ಪೊಲೀಸರನ್ನು ನೋಡಿದ ಅವರು ಕೂಡಲೇ ಕಾರಿನ ಬಾಗಿಲು ತೆರೆದು ಕೋರ್ಟ್ ಒಳಗೆ ಓಡಿ ಹೋದರು.
ಮತ್ತೊಂದು ಪ್ರಕರಣದಡಿಯಲ್ಲಿ ಪೊಲೀಸರು ಬಂದ ಕಾರಣದಿಂದ ಫವಾದ್ ಚೌಧರಿ ಕೋರ್ಟ್ ನೊಳಗೆ ಓಡಿ ಹೋದರು ಎಂದು ಡಾನ್ ನ್ಯೂಸ್ ವರದಿ ಮಾಡಿದೆ.