ಇಸ್ಲಾಮಾಬಾದ್ : ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಮ್ಮ ದೇಶವು ಮುಳುಗುತ್ತಿದೆ. ರಾಷ್ಟ್ರದ ಮೇಲೆ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ದೊಡ್ಡದಾಗಿದೆ ಎಂದು ಎಚ್ಚರಿಸಿದ್ದಾರೆ.
ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ಪಿಟಿಐ ಸರ್ಕಾರಗಳನ್ನು ವಿಸರ್ಜನೆ ಮಾಡುವುದಾಗಿ ಇಮ್ರಾನ್ ಖಾನ್ ಘೋಷಿಸಿದರು. ಆರ್ಥಿಕ ಸ್ಥಿರತೆಯನ್ನು ತರಲು ಪಿಟಿಐ ಹೊಸ ಚುನಾವಣೆಗಳನ್ನು ಬಯಸುತ್ತದೆ ಎಂದು ಅವರು ಘೋಷಿಸಿದರು. ತಜ್ಞರ ಪ್ರಕಾರ, ಪಾಕಿಸ್ಥಾನವು ಜನವರಿ ಮತ್ತು ಮಾರ್ಚ್ 2023 ರ ನಡುವೆ ಸುಮಾರು 9 ಬಿಲಿಯನ್ ಡಾಲರ್ ಸಾಲ ಮತ್ತು ಬಡ್ಡಿಯನ್ನು ಮರುಪಾವತಿಸಬೇಕಾಗಿದೆ ಮತ್ತು ಈ ಗುರಿಯನ್ನು ಪೂರೈಸಲು ರಾಷ್ಟ್ರವು ಹಣದ ಕೊರತೆಯನ್ನು ಎದುರಿಸುತ್ತಿದೆ.
“ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ನಡೆಯದಿರುವವರೆಗೆ, ದೇಶವು (ಪಾಕಿಸ್ಥಾನ) ಮುಳುಗುತ್ತಿದೆ ಎಂದು ನಾವೆಲ್ಲರೂ ಭಯಪಡುತ್ತೇವೆ” ಎಂದು ಪಾಕಿಸ್ಥಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಪಂಜಾಬ್ ಮುಖ್ಯಮಂತ್ರಿ ಪರ್ವೇಜ್ ಇಲಾಹಿ ಅವರೊಂದಿಗೆ ವಿಡಿಯೋ ಭಾಷಣದಲ್ಲಿ ಹೇಳಿದರು. ಅವರ ಪಕ್ಕದಲ್ಲಿ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಇದ್ದರು.
ಮತ್ತೊಂದೆಡೆ, ಪಾಕಿಸ್ಥಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ನಾಯಕ ಹಮ್ಜಾ ಶಹಬಾಜ್ ಖಾನ್ ಅವರು ಪಾಕ್ ನಲ್ಲಿ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಯನ್ನು ತರಲು ಉದ್ದೇಶಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಳ್ಳು ಆರೋಪ ಮಾಡುವ ಮೂಲಕ ಇಮ್ರಾನ್ ಖಾನ್ ತಮ್ಮ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ವಿಧಾನಸಭೆಗಳನ್ನು ವಿಸರ್ಜಿಸುವ ಇಮ್ರಾನ್ ಖಾನ್ ನಿರ್ಧಾರವನ್ನು ಪಾಕ್ ಪ್ರಧಾನಿ ಪುತ್ರ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಹಮ್ಜಾ ಶಹಬಾಜ್ ಟೀಕಿಸಿದ್ದಾರೆ.