ಇಸ್ಲಾಮಾಬಾದ್ : ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಇಮ್ರಾನ್ ಖಾನ್ ಇಂದು ಸೋಮವಾರ ತಮ್ಮ ತೆಹರೀಕ್ ಎ ಇನ್ಸಾಫ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. “ರೋಡ್ ಟು ನಯಾ ಪಾಕಿಸ್ಥಾನ’ ಎಂಬ ಶೀರ್ಷಿಕೆ ಹೊಂದಿರುವ ಈ ಪ್ರಣಾಳಿಕೆಯು ಪಾಕಿಸ್ಥಾನವನ್ನು ಇಸ್ಲಾಮಿಕ್ ವೆಲ್ ಫೇರ್ ಸ್ಟೇಟ್’ ಆಗಿ ರೂಪಾಂತರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
ಪಾಕಿಸ್ಥಾನದ ಡಾನ್ ನ್ಯೂಸ್ ಇಮ್ರಾನ್ ಖಾನ್ ಅವರ ಮಾತುಗಳನ್ನು ಉಲ್ಲೇಖೀಸಿ ವರದಿ ಮಾಡಿದೆ. ಇದೇ ಜುಲೈ 25ರಂದು ಪಾಕಿಸ್ಥಾನದಲ್ಲಿ ನಡೆಯಲಿರುವ ಮಹಾ ಚುನಾವಣೆಗಾಗಿ ಇಮ್ರಾನ್ ಖಾನ್ ಬಿಡುಗಡೆ ಮಾಡಿರುವ ತಮ್ಮ ಪ್ರನಾಳಿಕೆಯಲ್ಲಿ ದೇಶಕ್ಕೆ ಹೊಸ ಇಮೇಜ್ ನೀಡುವ ಸಂಕಲ್ಪ ಹೊಂದಿದೆ ಎಂದು ವರದಿ ತಿಳಿಸಿದೆ.
ತನ್ನ ಪಕ್ಷ ಅಧಿಕಾರಕ್ಕೆ ಬಂದಲ್ಲಿ ವ್ಯೂಹಾತ್ಮಕ ಚರ್ಚೆಗಾಗಿ ತಾನು ಭಾರತವನ್ನು ಆಹ್ವಾನಿಸುತ್ತೇನೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಶಸ್ತ್ರಾಸ್ತ್ರ ಪ್ರಸರಣ ತಡೆಯುವುದು ಪಕ್ಷದ ಗುರಿ ಎಂದವರು ಹೇಳಿದ್ದಾರೆ.
ನ್ಯಾಶನಲ್ ಅಕೌಂಟೆಬಿಲಿಟಿ ಬ್ಯೂರೋ (ರಾಷ್ಟ್ರೀಯ ಉತ್ತರದಾಯಿ ವಿಭಾಗ) ವನ್ನು ಸ್ವಾಯತ್ತಗೊಳಿಸಿ ದೇಶದಲ್ಲಿನ ಭ್ರಷ್ಟಾಚಾರದ ಮೂಲೋತ್ಪಾಟನೆ ಮಾಡಲಾಗುವುದು; ಎಲ್ಲ ಬಗೆಯ ಭ್ರಷ್ಟಾಚಾರದ ಕೇಸುಗಳನ್ನು ನ್ಯಾಬ್ ಕೈಗೆತ್ತಿಕೊಳ್ಳಲಿದೆ ಎಂದು ಇಮ್ರಾನ್ ಹೇಳಿದರು.
ನ್ಯಾಯಾಂಗ ಸುಧಾರಣೆ ಕೈಗೊಳ್ಳಲಾಗುವುದು ಮತ್ತು ಪ್ರಕ್ಷುಬ್ಧ ಬಲೂಚಿಸ್ಥಾನದಲ್ಲಿ ಪರಸ್ಪರ ತಿಳಿವಳಿಕೆ ರಾಜಕಾರಣವನ್ನು ಪ್ರೋತ್ಸಾಹಿಸಲಾಗುವುದು ಎಂದಿರುವ ಇಮ್ರಾನ್, ಚೀನ-ಪಾಕಿಸ್ಥಾನ ಇಕಾನಮಿಕ್ ಕಾರಿಡಾರ್ (ಸಿಪಿಇಸಿ) ಅನ್ನು ಪಕ್ಷವು ಬೆಂಬಲಿಸುವುದು ಎಂದು ಹೇಳಿದ್ದಾರೆ.