ಕಾಶ್ಮೀರ: ಇಂಡೋ – ಪಾಕ್ ಗಡಿಯಲ್ಲಿ ಉದ್ಭವಿಸಿರುವ ಅಶಾಂತಿಯ ವಾತಾವರಣದ ಕುರಿತು ಇಮ್ರಾನ್ ಖಾನ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ತನ್ನ ಸರಣಿ ಟ್ವೀಟ್ ಗಳಲ್ಲಿ ಭಾರತವನ್ನು ಟೀಕಿಸುವುದರ ಜತೆಗೆ ಬಹುಕಾಲದ ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯ ಬಯಕೆಯನ್ನು ಪಾಕಿಸ್ಥಾನದ ಪ್ರಧಾನಿ ಮತ್ತೆ ಬಯಸಿದ್ದಾರೆ.
“ಗಡಿ ನಿಯಂತ್ರಣ ರೇಖೆಯ ಬಳಿ ಭಾರತ ನಡೆಸಿದ ಹಿಂಸೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅಮಾಯಕರು ಮತ್ತು ಮುಗ್ದರ ಸಾವಿನ ಕುರಿತು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಗಮನ ಹರಿಸಬೇಕು. ಗಡಿಯಲ್ಲಿ ತಲೆದೋರಿರುವ ವಿಷಮ ಪರಿಸ್ಥಿತಿಯನ್ನು ಮತ್ತು ದೀರ್ಘಕಾಲೀನ ಈ ವಿವಾದಕ್ಕೆ ಕೊನೆ ಹಾಡಲು ಇದು ಸೂಕ್ತವಾಗಿರುವ ಸಮಯ ಎಂದು ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಸಂಸ್ಥೆಯ ಭದ್ರತಾ ಸಮಿತಿ ಇದನ್ನು ಬಗೆಹರಿಸುವತ್ತ ಗಮನ ಕೊಡಲಿ ಎಂದಿದ್ದಾರೆ. ಈ ಮೂಲಕ ಏಷ್ಯಾದ ರಾಷ್ಟ್ರಗಳಲ್ಲಿ ಶಾಂತಿ ನೆಲೆಯೂರಲು ಸಾಧ್ಯ ಎಂದು ಹೇಳುವ ಮೂಲಕ ಮತ್ತೆ ಶಾಂತಿಯ ಮಂತ್ರ ಜಪಿಸಿದ್ದಾರೆ.
ತಮ್ಮ ಮೂರನೆಯ ಟ್ವೀಟ್ ನಲ್ಲಿ ಕಾಶ್ಮೀರ ಸಮಸ್ಯೆಯನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡುವ ಕುರಿತಾದ ವಿಷಯವನ್ನು ಖಾನ್ ಪ್ರಸ್ತಾಪ ಮಾಡಿದ್ದಾರೆ. ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಕಾಶ್ಮೀರ ಕುರಿತಾದ ಮಾತುಕತೆಗೆ ಮಧ್ಯಸ್ಥಿಗೆ ವಹಿಸಲು ಸಿದ್ದ ಎಂದು ಹೇಳಿದ್ದಾರೆ. ಇದಕ್ಕೆ ಇದು ಸರಿಯಾದ ಸಮಯವಾಗಿದೆ. ಭಾರತ ಈಗಾಗಲೇ ಆಕ್ರಮಿತ ಕಾಶ್ಮೀರದಲ್ಲಿ ಸೇನೆಯ ಮೂಲಕ ತೊಂದರೆ ಕೊಡುತ್ತಿದೆ.’ ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಭಾರತ ಈಗಾಗಲೇ ಕಾಶ್ಮೀರ ಸಮಸ್ಯೆಯನ್ನು ತೃತೀಯ ರಾಷ್ಟ್ರದ ಮಧ್ಯಸ್ಥಿಕೆ ಮೂಲಕ ಬಗೆಹರಿಸುವುದಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಮತ್ತು ದ್ವಿಪಕ್ಷೀಯ ಮಾತುಕತೆಗಳ ಮೂಲಕವಷ್ಟೇ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಾಧ್ಯ ಎಂಬುದು ಭಾರತದ ಪ್ರತಿಪಾದನೆಯಾಗಿದೆ.