ಇಸ್ಲಾಮಾಬಾದ್: ಪಾಕಿಸ್ಥಾನದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ಜೆಮಿಮಾ ಗೋಲ್ಡ್ ಸ್ಮಿತ್ ಅವರು ಶೆಹಬಾಜ್ ಷರೀಫ್ ನೇತೃತ್ವದ ಸರಕಾರದ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತನ್ನ ಮಾಜಿ ಪತಿಯನ್ನು ಏಕಾಂತ ಸೆರೆಮನೆಯಲ್ಲಿ ಇರಿಸಲಾಗಿದ್ದು, ಅಧಿಕಾರಿಗಳು ಜೈಲಿನ ಸೆಲ್‌ನಲ್ಲಿ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿದ್ದಾರೆ ಮತ್ತು ಪುತ್ರರಿಗೆ ವಾರಕ್ಕೊಮ್ಮೆ ಕರೆ ಮಾಡಲೂ ಅನುಮತಿಸಲಾಗುತ್ತಿಲ್ಲ ಎಂದು ಜೆಮಿಮಾ ಗೋಲ್ಡ್ ಸ್ಮಿತ್ ಹೇಳಿಕೊಂಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ SCO(Shanghai Cooperation Organisation) ಶೃಂಗಸಭೆಯ ನಡುವೆಯೇ ಗೋಲ್ಡ್ ಸ್ಮಿತ್ ಅವರ ಆರೋಪಗಳು ಕೇಳಿಬಂದಿವೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೇರಿದಂತೆ ಸದಸ್ಯ ರಾಷ್ಟ್ರಗಳ ಉನ್ನತ ನಾಯಕರು SCO ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ.
ಶೃಂಗಸಭೆಗೂ ಮುನ್ನ ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಇಸ್ಲಾಮಾಬಾದ್‌ನಲ್ಲಿ ಮೆರವಣಿಗೆಗೆ ಯತ್ನಿಸಿದ ನೂರಾರು ಮಂದಿ ಬೆಂಬಲಿಗರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಗೋಲ್ಡ್ ಸ್ಮಿತ್, ಪಾಕಿಸ್ಥಾನದ ಅಧಿಕಾರಿಗಳು ಎಲ್ಲಾ ನ್ಯಾಯಾಲಯದ ವಿಚಾರಣೆಗಳನ್ನು ಮುಂದೂಡಿದ್ದಾರೆ ಮತ್ತು ಮಾಜಿ ಪ್ರಧಾನಿಯ ಸ್ನೇಹಿತರು ಮತ್ತು ಕುಟುಂಬದವರ ಭೇಟಿಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. 1995 ರಲ್ಲಿ ಇಮ್ರಾನ್ ಖಾನ್ ಅವರನ್ನು ವಿವಾಹವಾಗಿದ್ದ ಜೆಮಿಮಾ ಗೋಲ್ಡ್ ಸ್ಮಿತ್ 2004 ರವರೆಗೆ ಜತೆಯಲ್ಲಿದ್ದರು.
2023,ಆಗಸ್ಟ್ 5 ರಂದು ಬಂಧನಕ್ಕೊಳಗಾಗಿದ್ದ ಇಮ್ರಾನ್ ಖಾನ್ ಖಾನ್ ಅವರನ್ನು ರಾವಲ್ಪಿಂಡಿಯ ಆದಿಲಾಲ ಜೈಲಿನಲ್ಲಿ ಇರಿಸಲಾಗಿದೆ.