ವಾಷಿಂಗ್ಟನ್: ಪಾಕಿಸ್ಥಾನದ ಪ್ರಧಾನಿಯಾದ ಬಳಿಕ ಇಮ್ರಾನ್ ಖಾನ್ ಅಮೆರಿಕಕ್ಕೆ ಮೊದಲ ಬಾರಿಗೆ ಹುಮ್ಮಸ್ಸಿನಿಂದ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಆದರೆ ಅವರನ್ನು ಡೊನಾಲ್ಡ್ ಟ್ರಂಪ್ ಸರಕಾರ ಕ್ಯಾರೇ ಅಂದಿಲ್ಲ. ಸ್ವಾಗತಕ್ಕೆ ವಾಷಿಂಗ್ಟನ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಸರಕಾರದ ವತಿಯಿಂದ ಯಾರೂ ಬರಲಿಲ್ಲ. ಹೀಗಾಗಿ ಅವರಿಗೆ ಭಾರೀ ಅವಮಾನವಾಗಿದೆ. ಅವರನ್ನು ಸ್ವಾಗತಿಸಿದ್ದು, ವಿದೇಶಾಂಗ ಸಚಿವರಾಗಿರುವ ಶಾ ಮೆಹಮೂದ್ ಖುರೇಶಿ, ರಾಯಭಾರ ಕಚೇರಿಯ ಅಧಿಕಾರಿಗಳು, ಅಮೆರಿಕದಲ್ಲಿರುವ ಪಾಕಿಸ್ಥಾನ ಮೂಲದ ಉದ್ಯಮಿಗಳು ಪ್ರಧಾನಿ ಇಮ್ರಾನ್ ಖಾನ್‌ರನ್ನು ಬರಮಾಡಿಕೊಂಡಿದ್ದಾರೆ.
ಭಾರತದಲ್ಲಿ ಉಗ್ರ ಕೃತ್ಯಗಳಿಗೆ ನಿರಂತರ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ಥಾನಕ್ಕೆ ಕಂಡು ಕೇಳರಿಯದ ಆರ್ಥಿಕ ಸಂಕಷ್ಟ ಉಂಟಾಗಿದೆ. ಹೀಗಾಗಿ ಇಮ್ರಾನ್ ಖಾನ್ ನೇತೃತ್ವದ ಸರಕಾರ ಮಿತವ್ಯಯದ ಕ್ರಮಗಳನ್ನು ಘೋಷಿಸಿದೆ. ಹೀಗಾಗಿ, ವಿಶೇಷ ವಿಮಾನದಲ್ಲಿ ತೆರಳಲು ಅಸಾಧ್ಯವಾಗಿದೆ ಪಾಕ್ ಪ್ರಧಾನಿಗೆ. ಅವರು ಇಸ್ಲಾಮಾಬಾದ್‌ನಿಂದ ವಾಷಿಂಗ್ಟನ್‌ಗೆ ಆಗಮಿಸಿದ್ದು ಕತಾರ್ ಏರ್‌ವೇಸ್‌ನ ವಿಮಾನದಲ್ಲಿ.
ಮೂರು ದಿನಗಳ ಪ್ರವಾಸ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ಸೋಮವಾರ ಅಧಿಕೃತ ಮಾತುಕತೆ ನಡೆಸಲಿದ್ದಾರೆ. ಮಂಗಳವಾರ ವಿದೇಶಾಂಗ ಸಚಿವ ಮೈಕ್ ಪೊಂಪ್ಯೋ ಜತೆಗೆ ಆದ್ಯತೆಯ ಮಾತುಕತೆ ನಡೆಸಲಿದ್ದಾರೆ. ಅಮೆರಿಕ ಮತ್ತು ಪಾಕಿಸ್ಥಾನ ನಡುವಿನ ಬಾಂಧವ್ಯ ತೀರಾ ಹದಗೆಟ್ಟಿರುವ ಸ್ಥಿತಿಯಲ್ಲಿ ಮತ್ತು ಅಮೆರಿಕ ಮತ್ತು ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಜತೆಗಿನ ಮಾತುಕತೆ ನಿರ್ಣಾಯಕ ಹಂತಕ್ಕೆ ಮುಟ್ಟಿರುವಾಗಲೇ ಈ ಪಾಕ್ ಪಿಎಂ ಈ ಪ್ರವಾಸ ಕೈಗೊಂಡಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ವಿಶ್ವಬ್ಯಾಂಕ್ ಅಧಿಕಾರಿಗಳೊಂದಿಗೂ ಅವರು ವಿತ್ತೀಯ ನೆರವಿನ ಬಗ್ಗೆ ಚರ್ಚಿಸಲಿದ್ದಾರೆ. ಒಟ್ಟು ಮೂರು ದಿನಗಳ ಪ್ರವಾಸದಲ್ಲಿರುವ ಪಾಕ್ ಪ್ರಧಾನಿಗೆ ಅಮೆರಿಕಕ್ಕೆ ಇಳಿಯುತ್ತಿರುವಂತೆಯೇ ಮುಜುಗರ ಉಂಟಾಗಿದೆ. 2015ರಲ್ಲಿ ಪಾಕಿಸ್ಥಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ನೀಡಿದ್ದ ಅಧಿಕೃತ ಭೇಟಿಯೇ ಕೊನೆ. ಆ ಬಳಿಕ ಇಮ್ರಾನ್ ಅವರೇ ಟ್ರಂಪ್ ರಾಷ್ಟ್ರಕ್ಕೆ ಪ್ರವಾಸ ಕೈಗೊಂಡಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಸೊಹೈಲ್ ಮೊಹಮ್ಮದ್ ಮತ್ತು ವಾಣಿಜ್ಯ ಸಚಿವಾಲಯದ ಸಲಹೆಗಾರ ಅಬ್ದುಲ್ ರಜಾಕ್, ಐಎಸ್‌ಐ ಮುಖ್ಯಸ್ಥ ಲೆ| ಜ| ಫೈಜ್ ಅಹ್ಮದ್ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಇಮ್ರಾನ್ ಜತೆಗೂಡಿದ್ದಾರೆ.
ವಾಸ್ತವ್ಯ ಹೊಟೇಲ್ನಲ್ಲಿ ಅಲ್ಲ
ಅಂದ ಹಾಗೆ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಾಷಿಂಗ್ಟನ್‌ನಲ್ಲಿ ಉಳಿದುಕೊಳ್ಳಲೂ ಹಿಂದು ಮುಂದು ನೋಡಬೇಕಾಗಿದೆ. ಪಂಚ, ಸಪ್ತತಾರಾ ಹೊಟೇಲ್ಗಳಲ್ಲಿ ಉಳಿದುಕೊಂಡರೆ ಬಿಲ್ ಪಾವತಿ ಮಾಡಲು ಆಗದೇ ಇರುವಂಥ ದಯನೀಯ ಸ್ಥಿತಿ ಇದೆ. ಅಮೆರಿಕದಲ್ಲಿ ಪಾಕಿಸ್ಥಾನದ ರಾಯಭಾರಿ ಅಸದ್ ಮಜೀದ್ ಖಾನ್ ನಿವಾಸದಲ್ಲಿ ಇಳಿದುಕೊಳ್ಳಲಿದ್ದಾರೆ.