ಧಾರವಾಡ: ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಸಾಧನಕೇರಿ ಹಾಗೂ ಕೋಳಿಕೇರಿ ಕೆರೆಗಳ ಸುಧಾರಣೆ, ಸೌಂದರ್ಯೀಕರಣಕ್ಕಾಗಿ ಸರಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಡಿಸಿ ದೀಪಾ ಚೋಳನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ಸ್ಥಳ, ನಿಸರ್ಗದತ್ತವಾದ ಹಸಿರು ತಾಣಗಳಿದ್ದು, ಇವುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ 8 ಕೋಟಿ ರೂ. ಅನುದಾನ ಇದೆ. ಇದರಲ್ಲಿ ಸ್ಥಳೀಯ ಪ್ರೇಕ್ಷಣೀಯ ಮತ್ತು ಐತಿಹಾಸಿಕ ಸ್ಥಳಗಳ ಅಭಿವೃದ್ಧಿ, ಸೌಂದರ್ಯೀಕರಣ ಹಾಗೂ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಆದ್ಯತೆ ಮೇರೆಗೆ ಕಲ್ಪಿಸಲು ಕ್ರಿಯಾ ಯೋಜನೆ ತಯಾರಿಸಲಾಗುವುದು. ತೋಳನಕೆರೆ, ಉಣಕಲ್ ಕೆರೆ, ಕೆಲಗೇರಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾಫಿ ಟೇಬಲ್ ಬುಕ್ ಸಂಪಾದಕ ದಿನೇಶ ಹೆಗಡೆ ಮಾತನಾಡಿ, ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಮತ್ತು ಪ್ರವಾಸಿ ತಾಣಗಳನ್ನು ಗಮನದಲ್ಲಿಟ್ಟು, ಪ್ರಮುಖ 50 ಸ್ಥಳ ಹಾಗೂಪ್ರಕಾರಗಳನ್ನು ಗುರುತಿಸಿ ಚಿತ್ರೀಕರಣ ಮಾಡಲಾಗುತ್ತಿದೆ. ಜಿಲ್ಲೆಯ ಬಗ್ಗೆ ಮಾಹಿತಿಯಿರುವ ತಜ್ಞರ ಮತ್ತು ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಉತ್ತಮ ಕೃತಿ ಕಾಫಿ ಟೇಬಲ್ ಬುಕ್ ರೂಪಿಸುವುದಾಗಿ ತಿಳಿಸಿದರು.
ಇಕೋ ವಿಲೇಜ್ ಮುಖ್ಯಸ್ಥ ಪಿ.ವಿ. ಹಿರೇಮಠ, ಆಹಾರ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಡಿಎಫ್‌ಒ ಮಹೇಶಕುಮಾರ, ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ| ಡಿ.ಎಂ. ಹಿರೇಮಠ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಇತಿಹಾಸ ತಜ್ಞೆ ರೇಖಾ ಶೆಟ್ಟರ, ಅಶೋಕ ಮನಸೂರ, ಸಂಜಯ ಕಬ್ಬೂರ, ಚಂದ್ರಶೇಖರ ಬೈರಪ್ಪನವರ, ಕಿರಣ ಹಿರೇಮಠ, ವೀಣಾ ಹೊಸಮಠ, ಡಾ| ಕವನ ದೇಶಪಾಂಡೆ, ಸಮೀರ ಜೋಶಿ, ಧೀರಜ ಮೀರನಗೌಡರ ಇನ್ನಿತರರಿದ್ದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸ್ವಾಗತಿಸಿ, ನಿರೂಪಿಸಿದರು.