Advertisement

ಸುಧಾರಿಸಬೇಕಾಗಿದೆ ಟ್ರಾಫಿಕ್‌ ವ್ಯವಸ್ಥೆ

12:47 AM Mar 28, 2019 | Team Udayavani |

ಬೈಂದೂರು: ತಾಲೂಕು ಕೇಂದ್ರವಾದ ಇಲ್ಲಿನ ಪ್ರಮುಖ ರಸ್ತೆಯಾದ ರಥಬೀದಿಯಲ್ಲಿ ಟ್ರಾಫಿಕ್‌ ವ್ಯವಸ್ಥೆ ಶೀಘ್ರ ಸುಧಾರಿಸಬೇಕಾಗಿದೆ. ಪ್ರತಿದಿನ ರಸ್ತೆಯಲ್ಲೆ ನಿಲ್ಲುವ ವಾಹನಗಳಿಂದಾಗಿ ಪಾದಚಾರಿಗಳು ಮತ್ತು ಪ್ರಯಾಣಿಕರು ನಿತ್ಯ ಪರದಾಡಬೇಕಾಗಿದೆ.

Advertisement

ಸಮಸ್ಯೆಗೆ ಕಾರಣಗಳೇನು
ಎಲ್ಲ ಭಾಗಗಳ ಸಂಪರ್ಕ ಸೇತು ಇದಾಗಿದ್ದು, ಗಂಗನಾಡು, ರಾಷ್ಟ್ರೀಯ ಹೆದ್ದಾರಿ, ಪಡುವರಿ, ಯಡ್ತರೆ, ದೊಂಬೆ ಹೀಗೆ ಹತ್ತಾರು ಕಡೆಗಳಿಂದ ಬೇರೆ ಕಡೆಗೆ ಹೋಗಬೇಕಾದರೆ ರಥಬೀದಿ ಮೂಲಕವೆ ತೆರಳಬೇಕು. ಮಾತ್ರವಲ್ಲದೆ ಪ್ರಮುಖ ವಾಣಿಜ್ಯ ಮಳಿಗೆಗಳು, ವಿವಿಧ ಕಚೇರಿ, ಆರಕ್ಷಕ ಠಾಣೆ, ದೇವಸ್ಥಾನ ಎಲ್ಲವೂ ಕೂಡ ಇದೇ ರಸ್ತೆ ವ್ಯಾಪ್ತಿಯಲ್ಲಿದೆ. ಮಾತ್ರವಲ್ಲದೆ ಪ.ಪೂ. ಕಾಲೇಜು, ಹೈಸ್ಕೂಲ್‌, ಪದವಿ ಕಾಲೇಜು, ಸರಕಾರಿ ಆಸ್ಪತ್ರೆ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಕೂಡ ಈ ರಸ್ತೆಯ ಮೂಲಕ ತೆರಳಬೇಕಾಗಿದೆ.

ಹಿಂದೆಲ್ಲ ವಾಹನ ದಟ್ಟಣೆ ಈ ಮಟ್ಟಿಗಿರಲಿಲ್ಲ. ಈಗ ಕಾರು, ಬೈಕ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಅದರೊಂದಿಗೆ ಅಂಗಡಿಗಳಿಗೆ ತೆರಳುವವರು ರಸ್ತೆ ಪಕ್ಕದಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ನಿಲ್ಲಿಸುವುದರ ಪರಿಣಾಮ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸುವವರಿಗೆ ತೊಂದರೆಯಾಗುತ್ತಿದೆ.

ಗ್ರಾಮ ಪಂಚಾಯತ್‌ ಗಮನಹರಿಸಬೇಕು
ಸ್ಥಳೀಯ ಗ್ರಾ.ಪಂ ಈ ಕುರಿತು ಗಂಭೀರವಾಗಿ ಪರಿಗಣಿಸಬೇಕು. ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ಹಾಡಲು ಗ್ರಾ.ಪಂ. ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿ ರಥಬೀದಿಯಿಂದ ತೆರವುಗೊಳಿಸಿದಲ್ಲಿ ಉತ್ತಮ. ಈಗಾಗಲೆ ಆರಕ್ಷಕ ಇಲಾಖೆಯಿಂದ ಪಂಚಾಯತ್‌ಗೆ ಈ ಕುರಿತು ಪತ್ರ ಬರೆಯಲಾಗಿದೆ.

ವಿಪರ್ಯಾಸವೆಂದರೆ ಆರಕ್ಷಕ ಠಾಣೆಯ ಸಮೀಪದಲ್ಲೆ ಈ ರೀತಿಯ ಸಂಚಾರ ಸಮಸ್ಯೆಯಾದರು ಕೂಡ ಇಲಾಖೆ ಗಮನಹರಿಸುತ್ತಿಲ್ಲ. ಬದಲಾಗಿ ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ಅಡ್ಡಗಟ್ಟಿ ಶುಲ್ಕ ಕಟ್ಟಿಕೊಳ್ಳಲಾಗುತ್ತಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

Advertisement

ಒಂದೊಮ್ಮೆ ಗ್ರಾ.ಪಂ. ನಿಗದಿತ ಪಾರ್ಕಿಂಗ್‌ ಸ್ಥಳ ಕಾದಿರಿಸಿದರೆ ಆದಾಯ ಹೆಚ್ಚಳದ ಸಾಧ್ಯತೆಯೂ ಇದೆ. ಇಲ್ಲವಾದಲ್ಲಿ ಅಲ್ಲಲ್ಲಿ ಪಾರ್ಕಿಂಗ್‌ ನಿರ್ಮಿಸುವ ಮೂಲಕವೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಪ್ರಯತ್ನಗಳಾಗಬೇಕಿದೆ.

ಪಾರ್ಕಿಂಗ್‌ ಸಮಸ್ಯೆ
ಪೇಟೆಯಲ್ಲಿ ಟ್ರಾಫಿಕ್‌ ಸಮಸ್ಯೆಯನ್ನು ಬಹಳ ಹಿಂದಿನಿಂದಲೂ ಗಮನಿಸಿದ್ದೇನೆ.ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮೊದಲು ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಬೇಕು. ಈ ಬಗ್ಗೆ ಪಂಚಾಯತ್‌ಗೆ ಪತ್ರ ಬರೆಯಲಾಗಿದೆ.ಪಂಚಾಯತ್‌ ಪಾರ್ಕಿಂಗ್‌ ಸಮಸ್ಯೆ ಇತ್ಯರ್ಥಕ್ಕೆ ಮುಂದಾದರೆ ಆರಕ್ಷಕ ಸಹಕಾರ ನೀಡಲಾಗುವುದು. ಕಾನೂನು ಮೀರಿ ನಿಲ್ಲಿಸುವ ವಾಹನಗಳಿಗೆ ದಂಡ ವಿಧಿಸಲಾಗುವುದು.

-ಪರಮೇಶ್ವರ ಗುನಗ, ವೃತ್ತ ನಿರೀಕ್ಷಕರು, ಬೈಂದೂರು

Advertisement

Udayavani is now on Telegram. Click here to join our channel and stay updated with the latest news.

Next