Advertisement

ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸುಧಾರಣ ನೀಲನಕಾಶೆ

01:28 AM Feb 06, 2021 | Team Udayavani |

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಒಂದು ಸುಧಾರಣ ನೀಲನಕಾಶೆಯನ್ನು ಒದಗಿಸಿದ್ದಾರೆ ಎನ್ನಬಹುದು.

Advertisement

ಹಿಂದಿನ ಯಾವ ಹಣಕಾಸು ಸಚಿವರೂ ಕೈ ಹಾಕದ ವಿಷಯವಾದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಅವರು ಮುಂದಾಗಿದ್ದಾರೆ. ಸಾರ್ವಜನಿಕ ರಂಗದ ಎರಡು ಬ್ಯಾಂಕ್‌ಗಳಲ್ಲಿ ಸರಕಾರದ ಬಂಡವಾಳದ ದಾಮಾಶಯವನ್ನು ಕಡಿತಗೊಳಿಸುವ ಇಂಗಿತವನ್ನು ನಿರ್ಮಲಾ ಸೀತಾರಾಮನ್‌ ವ್ಯಕ್ತಪಡಿಸಿದ್ದಾರೆ.

ಸರಕಾರದ ಬಂಡವಾಳ ಹಿಂದೆಗೆತ ತಂತ್ರವನ್ನು ವಿವರಿಸುತ್ತಾ ಹಣಕಾಸು ಸಚಿವೆ ಸರಕಾರ ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ ಇತರ ಕ್ಷೇತ್ರಗಳ ಎಲ್ಲ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಬಹುದು ಎಂದು ಹೇಳಿದ್ದಾರೆ. ಈ ನಾಲ್ಕು ಕ್ಷೇತ್ರಗಳ ಸಂಸ್ಥೆಗಳಲ್ಲೂ ಕೂಡ ಸರಕಾರ ಕನಿಷ್ಠ ದಾಮಾಶಯದ ಬಂಡವಾಳವನ್ನು ಉಳಿಸಿಕೊಂಡು, ಉಳಿದ ಭಾಗವನ್ನು ಹಿಂದೆಗೆಯುವ ಸೂಚನೆ ನೀಡಿದ್ದಾರೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಐಡಿಬಿಐ ಬ್ಯಾಂಕ್‌ ಮಾತ್ರವಲ್ಲದೆ ಉಳಿದ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ಪ್ರಕಟಿಸಿ ದ್ದಾರೆ. ಇದಲ್ಲದೆ ಒಂದು ಸಾಮಾನ್ಯ ವಿಮಾ ಸಂಸ್ಥೆ ಯನ್ನು ಖಾಸಗೀಕರಣಕ್ಕೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದ ಸರಕಾರ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸುಧಾರಣೆಗೆ ಬದ್ಧತೆಯನ್ನು ತೋರಿಸುತ್ತಿದೆ ಎಂಬುದುದು ಸ್ಪಷ್ಟವಾಗುತ್ತದೆ.

ಈಗ ಕೇಂದ್ರ ಸರಕಾರ ಸುಮಾರು 50 ಬ್ಯಾಂಕ್‌ಗಳಲ್ಲಿ ಶೇ. 70ಕ್ಕಿಂತ ಹೆಚ್ಚಿನ ಬಂಡವಾಳವನ್ನು ಹೊಂದಿದೆ. ಸುಮಾರು 8 ಬ್ಯಾಂಕ್‌ಗಳಲ್ಲಿ ಶೇ. 80 ಕ್ಕಿಂತಲೂ ಜಾಸ್ತಿ ಮತ್ತು ಮೂರು ಬ್ಯಾಂಕ್‌ಗಳಲ್ಲಿ ಶೇ. 90ಕ್ಕಿಂತಲೂ ಹೆಚ್ಚಿನ ಬಂಡವಾಳವನ್ನು ಹೊಂದಿದೆ. ಈ ಶೇ. 90ಕ್ಕಿಂತ ಹೆಚ್ಚಿನ ಸರಕಾರಿ ಬಂಡವಾಳವಿರುವ ಮೂರು ಬ್ಯಾಂಕ್‌ಗಳೆಂದರೆ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಯುಕೋ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್ ಮಹಾರಾಷ್ಟ್ರ.

2014ರಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ನೇಮಿಸಿದ ಪಿ.ಜೆ. ನಾಯಕ್‌ ಸಮಿತಿಯು ಸರಕಾರ ಬ್ಯಾಂಕ್‌ಗಳ ಒಡೆತನದಿಂದ ನಿರ್ಗಮಿಸಬೇಕೆಂದು ಸಲಹೆ ನೀಡಿತ್ತು. ಆದರೆ ಸರಕಾರ ಈ ವರದಿಯನ್ನು ಈವರೆಗೂ ನಿರ್ಲಕ್ಷಿಸಿತ್ತು.

Advertisement

ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿದ ಮತ್ತೂಂದು ಮಹತ್ವದ ಅಂಶವೆಂದರೆ ಹೆಚ್ಚುವರಿ ಬಂಡವಾಳ ನೀಡಿಕೆ. 2021-22ರಲ್ಲಿ ಸರಕಾರ ಹೆಚ್ಚುವರಿಯಾಗಿ 20,000 ಕೋ. ರೂ.ಗಳಷ್ಟು ಬಂಡವಾಳವನ್ನು ಬ್ಯಾಂಕ್‌ಗಳಿಗೆ ನೀಡಲಿದೆ. 2020-21ರಲ್ಲಿ ಈ ವರೆಗೆ ಸರಕಾರ ಬ್ಯಾಂಕ್‌ಗಳಿಗೆ 5,500 ಕೋ. ರೂ. ಬಂಡ ವಾಳ ನೀಡಿದೆ. ಮಾತ್ರವಲ್ಲದೆ ಬಾಂಡುಗಳ ಮೂಲಕ ಮೂರು ಸಂಸ್ಥೆಗಳಿಗೆ ಬಂಡವಾಳ ಒದಗಿಸಿದೆ. ಈ ಮೂರು ಸಂಸ್ಥೆಗಳೆಂದರೆ ಐಡಿಬಿಐ ಬ್ಯಾಂಕ್‌ (4,557 ಕೋ.ರೂ.), ಎಕ್ಸಿಮ್‌ ಬ್ಯಾಂಕ್‌(5,050 ಕೋ.ರೂ.) ಮತ್ತು ಐಐಎಫ್ಸಿಎಲ್‌ ( 5,297 ಕೋ.ರೂ.). 2021-22ರಲ್ಲಿ ಒದಗಿಸಲಾಗಿರುವ 20,000 ಕೋ.ರೂ. ಬಂಡವಾಳ ನಿಜವಾದ ಬಂಡವಾಳ ಬೇಡಿಕೆಗಿಂತ ತುಂಬಾ ಕಡಿಮೆ. ಮೂಡಿಸ್‌ ಸಂಸ್ಥೆ ಹೇಳಿರುವಂತೆ ನಿಜವಾದ ಬಂಡವಾಳದ ಬೇಡಿಕೆ 2 ಲಕ್ಷ ಕೋಟಿ ರೂ.ಗಳಷ್ಟು!

ಈ ಸಲದ ಬಜೆಟ್‌ನಲ್ಲಿ ಸೇರಿರುವ ಮತ್ತೂಂದು ಅತೀ ಮಹತ್ವದ ಸುಧಾರಣ ಅಂಶ ಸೊತ್ತು ಪುನಾರಚನೆ ಮತ್ತು ನಿರ್ವಹಣ ಸಂಸ್ಥೆ (Asset Reconstruction and Management company)ಯ ಸೃಷ್ಟಿ. ಈ ಹೊಸ ಸಂಸ್ಥೆಯು ಬ್ಯಾಂಕ್‌ಗಳು ಹೊಂದಿರುವ ಕೆಟ್ಟ ಸಾಲ ಸೊತ್ತುಗಳನ್ನು ತನ್ನಲ್ಲಿಗೆ ವರ್ಗಾಯಿಸಿಕೊಂಡು ಅವುಗಳ ನಿರ್ವಹಣೆ ಮಾಡಲಿದೆ. ಇದರಿಂದಾಗಿ ಬ್ಯಾಂಕ್‌ಗಳಿಗೆ ಕೆಟ್ಟ ಸಾಲಗಳ ಸಮಸ್ಯೆಯನ್ನು ನಿವಾರಿಸಿಕೊಂಡು ಹೊಸ ಸಾಲ ನೀಡಿಕೆಯ ಮೇಲೆ ಲಕ್ಷ್ಯವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಬ್ಯಾಂಕ್‌ಗಳ ಲಾಭದ ಪ್ರಮಾಣವನ್ನು ವೃದ್ಧಿಸಬಹುದು.

ಒಟ್ಟಾರೆಯಾಗಿ ಈ ಬಾರಿಯ ಕೇಂದ್ರ ಮುಂಗಡಪತ್ರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಒಂದು ಸ್ಪಷ್ಟ ಸುಧಾರಣ ನೀಲನಕಾಶೆಯನ್ನು ಒದಗಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಬ್ಯಾಂಕ್‌ಗಳ ಸುಧಾರಣ ಕ್ರಮಗಳೇನೋ ಸದ್ಯದ ಸ್ಥಿತಿಯಲ್ಲಿ ಸ್ವಾಗತಾರ್ಹ ನಡೆಯೇ. ಆದರೆ ಈ ಸುಧಾರಣ ಕ್ರಮಗಳು, ಖಾಸಗೀಕರಣದ ಜಪಗಳಿಂದಾಗಿ ಬ್ಯಾಂಕ್‌ಗಳು ಬಡವರು ಮತ್ತು ಮಧ್ಯಮವರ್ಗದಿಂದ ದೂರವಾಗಿ ಮತ್ತೆ ಉಳ್ಳವರ ಆಸ್ತಿಯಾಗದಂತೆ ನಿಗಾ ಇಡುವ ಹೊಣೆಗಾರಿಕೆಯಿಂದ ಸರಕಾರ ನುಣುಚಿಕೊಳ್ಳಬಾರದು.

– ಡಾ| ಕೆ.ಕೆ. ಅಮ್ಮಣ್ಣಾಯ

Advertisement

Udayavani is now on Telegram. Click here to join our channel and stay updated with the latest news.

Next