ಬೆಂಗಳೂರು: ನಗರದ 509 ಜಂಕ್ಷನ್‌ಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಸುಧಾರಿತ ಪೊಲೀಸ್ ಚೌಕಿ (ಕಿಯೋಸ್ಕ್) ನಿರ್ಮಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ. ಒಂದು ಚೌಕಿ ನಿರ್ಮಿಸಲು ಅಂದಾಜು 8 ಲಕ್ಷ ರೂ. ವೆಚ್ಚವಾಗಲಿದೆ. ಈಗಾಗಲೇ 19 ಜಂಕ್ಷನ್‌ಗಳಲ್ಲಿ ಚೌಕಿಗಳು ಸಿದ್ಧವಾಗಿವೆ.
ಪೊಲೀಸ್ ಚೌಕಿಯಲ್ಲಿ ಸಂಚಾರ ಪೋಲಿಸರ ಅನುಕೂಲಕ್ಕಾಗಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಬೆಂಕಿ ನಂದಿಸುವ ಉಪಕರಣ, ಆಸನ, ಗಾಳಿ ಶುದ್ಧೀಕರಣಯಂತ್ರ, ಫ್ಯಾನ್, ವಾಕಿಟಾಕಿ, ನೀರಿನ ವ್ಯವಸ್ಥೆ, ಸಂಚಾರಕ್ಕೆ ಬೇಕಾದ ತುರ್ತು ಪ್ರಕಟಣೆ ನೀಡಲು ಧ್ವನಿವರ್ಧಕ, ಸಿಸಿ ಕ್ಯಾಮರಾ ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಪೊಲೀಸ್ ಚೌಕಿ ನಿರ್ಮಿಸುವ ಗುತ್ತಿಗೆ ಸಂಸ್ಥೆಗೆ 20 ವರ್ಷ ಕಾಲ ಚೌಕಿ ನಿರ್ವಹಣೆಯನ್ನೂ ಮಾಡಲಿದೆ. ಇದಕ್ಕೆ ಪ್ರತಿಯಾಗಿ ಪೊಲೀಸ್ ಚೌಕಿಗಳ ಮೇಲೆ ಜಾಹೀರಾತು ಪ್ರದರ್ಶಿಸಲು ಗುತ್ತಿಗೆ ಸಂಸ್ಥೆಗೆ ಅವಕಾಶ ನೀಡಲಾಗಿದೆ. ಗುತ್ತಿಗೆ ಅಂತಿಮಗೊಂಡಿದರುವ ಸಂಸ್ಥೆ ಪ್ರತಿ ವರ್ಷ ಪಾಲಿಕೆಗೆ ನೆಲ ಬಾಡಿಗೆ ರೂಪದಲ್ಲಿ 25 ಲಕ್ಷ ರೂ. ಪಾವತಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಿದ್ದು, ಈ ಪೈಕಿ ಎರಡು ಪ್ಯಾಕೇಜ್ ಅಡಿ 389 ಪೊಲೀಸ್ ಚೌಕಿ ನಿರ್ಮಿಸಲು ಟೆಂಡರ್ ಅಂತಿಮ ಗೊಂಡಿದೆ. ಇನ್ನೊಂದು ಪ್ಯಾಕೇಜ್ ಎಸ್‌ಸಿ-ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾಗಿದೆ. ಇದರಲ್ಲಿ ಗುತ್ತಿಗೆದಾರರು ಭಾಗವಹಿಸದ ಹಿನ್ನೆಲೆಯಲ್ಲಿ 117 ಪೊಲೀಸ್ ಚೌಕಿ ನಿರ್ಮಾಣಕ್ಕೆ ಮರು ಟೆಂಡರ್ ಆಹ್ವಾನಿಸಲಾಗಿದೆ.
ಈಗಾಗಲೇ ಹಡ್ಸನ್ ವೃತ್ತ, ವೆಲ್ಲಾರ ಜಂಕ್ಷನ್, ಬಿಷಪ್ ಕಾಟನ್ ಶಾಲೆ, ಬ್ರಿಗೇಡ್ ರಸ್ತೆ, ವಿಂಡ್ಸರ್ ಮ್ಯಾನರ್ ವೃತ್ತ, ರಾಜ್‌ರಾಮ್ ಮೋಹನ್ ರಾಯ್ ರಸ್ತೆ, ಲಾಲ್‌ಬಾಗ್, ಮಿಲ್ಲರ್ ರಸ್ತೆ, ಬಸವೇಶ್ವರ ವೃತ್ತ, ಎಂ.ಜಿ.ರಸ್ತೆ, ಹಳೆ ಮದ್ರಾಸ್ ರಸ್ತೆ, ಪೊಲೀಸ್ ತಿಮ್ಮಯ್ಯ ವೃತ್ತ, ಶಾಂತಿನಗರ, ಅನಿಲ್ ಕುಂಬ್ಳೆ ವೃತ್ತ, ಸೇರಿದಂತೆ 19 ಕಡೆ ಪೊಲೀಸ್ ಚೌಕಿ ನಿರ್ಮಿಸಲಾಗಿದೆ.