Advertisement

ಸುಧಾರಣೆ ಕಾಣಲಿ ವಾಸ್ತುಶಿಲ್ಪ ವೈಭವ

03:28 PM Aug 08, 2017 | |

ವಿಜಯಪುರ: ವಿಜಯಪುರದ ವಾಸ್ತುಶಿಲ್ಪದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಕೆಲಸ ನಡೆಯಬೇಕಿದೆ. ಜೊತೆಗೆ ಇದರಲ್ಲಿ ಇನ್ನೂ ಸುಧಾರಣೆ ಕಾಣಬೇಕಿದೆ ಎಂದು ಪ್ರಾಚ್ಯವಸ್ತು ಇಲಾಖೆ ವಿಶ್ರಾಂತ ನಿರ್ದೇಶಕ ಡಾ| ಎಸ್‌.ವಿ.ಪಿ. ಹಳಕಟ್ಟಿ ಹೇಳಿದರು.

Advertisement

ನಗರದ ಬಿಎಲ್‌ಡಿಇ ಸಂಸ್ಥೆ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದ ವಾಸ್ತುಶಿಲ್ಪ ವಿಭಾಗದಲ್ಲಿ ಪ್ರಾರಂಭಿಸಲಾದ ಉನ್ನತಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಶ್ರೀಮಂತ ವಾಸ್ತುಶಿಲ್ಪಕ್ಕೆ ವಿಶ್ವದಲ್ಲೇ ಮಾನ್ಯತೆ ಪಡೆದಿದ್ದು, ಜಾಗತಿಕ ವಾಸ್ತು ತಜ್ಞರು ಪಾರಂಪರಿಕ ನಮ್ಮ ನೆಲದ ತಂತ್ರಜ್ಞಾನದ ಕುರಿತು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಣ್ಣಿಸಿದರು.

ವಿಜಯಪುರ ಜಿಲ್ಲೆಯ ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ವಾಸ್ತುಶಿಲ್ಪದ ಹಾಗೂ ಭವ್ಯ ಐತಿಹಾಸಿಕ ಸ್ಮಾರಕಗಳೇ ಇಲ್ಲಿನ ವಾಸ್ತುಶಿಲ್ಪದ ಶ್ರೀಮಂತ ವೈಭವ ಸಾರುತ್ತವೆ. ನಗರೀಕರಣದಿಂದಾಗಿ ಐತಿಹಾಸಿಕ ಪರಂಪರೆ ಬಿಂಬಿಸುವ ಕಟ್ಟಡಗಳು ತಮ್ಮ ವೈಶಿಷ್ಟತೆ ಕಳೆದುಕೊಳ್ಳುತ್ತಿರುವುದು ಖೇದದ ಸಂಗತಿ. ಪಾರಂಪರಿಕ ಸ್ಮಾರಕಗಳು ಮರೆಯಾದರೆ ಐತಿಹಾಸಿಕ ಶ್ರೀಮಂತ ವಾಸ್ತು ಗತವೈಭವಕ್ಕೂ ಕುತ್ತು ಬರಲಿದೆ ಎಂದು ಕಿಡಿ ಕಾರಿದರು. ವಿಶ್ವ ಪರಂಪರೆ ಪಟ್ಟಿಯಲ್ಲಿ ವಿಜಯಪುರದ ಸೇರ್ಪಡೆಗೆ ಸಂಬಂಧಿಸಿದಂತೆ ಸಾಧಕ- ಬಾಧಕಗಳೇನು, ಪೂರ್ವ ತಯಾರಿಗಳೇನು ಎಂಬ ಮಹತ್ವ ಸಂಗತಿಗಳ ಕುರಿತು ಸಮಗ್ರ ಚಿಂತನ-ಮಂಥನ ನಡೆಯಬೇಕಿದೆ. ಇದಕ್ಕಾಗಿ ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.

ವಾಸ್ತುಶಿಲ್ಪ ವಿಭಾಗದ ವಿ.ಪಿ. ಟಂಕಸಾಲಿ ಪ್ರಾಸ್ತಾವಿಕ ಮಾತನಾಡಿದರು.ವಿಭಾಗದ ನೂತನವಾಗಿ ಪ್ರಾರಂಭಿಸಲಾಗಿರುವ ಕೇಂದ್ರದ ಕಾರ್ಯಉದ್ದೇಶ,
ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ವಿಷಯದ ಕುರಿತು ವಿವರಿಸಿದರು. ಕಾರ್ಯಗಾರದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಿದರು. ವಿಚಾರಗೋಷ್ಠಿ, ಶಿಬಿರಗಳು, ಕಿರು ತರಬೇತಿ ಕಾರ್ಯಾಗಾರಗಳ ಆಯೋಜನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಇದೇ ಸಂದರ್ಭದಲ್ಲಿ ಚರ್ಚೆ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next