Advertisement

ಪಂಚಾಯತ್‌ ಕಾರ್ಯವೈಖರಿ ವಿರುದ್ಧ ಡಿಸಿಗೆ ಗ್ರಾಮಸ್ಥರ ದೂರು

01:20 AM Sep 26, 2018 | Karthik A |

ಅಜೆಕಾರು: ಶಿರ್ಲಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸೂರ್ಯಂತೊಕ್ಲು ಬಳಿಯ ಬಸ್ಸು ತಂಗುದಾಣ ಕಟ್ಟಡವನ್ನೇ ತ್ಯಾಜ್ಯ ನಿರ್ವಹಣೆ ಘಟಕವನ್ನಾಗಿ ಶಿರ್ಲಾಲು ಗ್ರಾ.ಪಂ. ಆಡಳಿತ ಪರಿವರ್ತಿಸಿದ್ದು ಇದರ ವಿರುದ್ಧ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದಶಕಗಳ ಹಿಂದೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ಸು ತಂಗುದಾಣ ಹಾಗೂ ಇದಕ್ಕೆ ಹೊಂದಿಕೊಂಡಂತೆ ಪಂಚಾಯತ್‌ಗೆ ಆದಾಯ ಬರುವ ನಿಟ್ಟಿನಲ್ಲಿ ಅಂಗಡಿ ನಿರ್ಮಿಸಲಾಗಿದ್ದು ಇದೀಗ ಪಂಚಾಯತ್‌ ಆಡಳಿತವು ತ್ಯಾಜ್ಯ ನಿರ್ವಹಣೆ ಘಟಕವನ್ನಾಗಿ ಪರಿವರ್ತಿಸಿ ದುರುಪಯೋಗ ಪಡಿಸಿಕೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ಈ ಬಸ್ಸುತಂಗುದಾಣಕ್ಕೆ ಹೊಂದಿ ಕೊಂಡೇ ಶಿರ್ಲಾಲು ಉಪಆರೋಗ್ಯ ಕೇಂದ್ರವಿದ್ದು ಇದೀಗ ತ್ಯಾಜ್ಯ ನಿರ್ವಹಣೆ ಘಟಕ ಮಾಡುವುದರಿಂದ ಆರೋಗ್ಯ ಕೇಂದ್ರಕ್ಕೆ ಬರುವ ಸ್ಥಳೀಯರಿಗೆ ಅನಾನುಕೂಲವಾಗಲಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಭಾಗದಲ್ಲಿ ನೂರಾರು ಮನೆಗಳಿದ್ದು ಪ್ರಯಾಣ ಸಂದರ್ಭ ಸ್ಥಳೀಯರು ಈ ಬಸ್ಸುತಂಗುದಾಣವನ್ನೇ ಅವಲಂಬಿಸಿದ್ದಾರೆ. ಅಲ್ಲದೇ ಈ ಬಸ್ಸುತಂಗುದಾಣದ ಸುತ್ತಮುತ್ತ ಜನವಸತಿ ಪ್ರದೇಶವಾಗಿದ್ದು ಕೆಲವೇ ಮೀಟರ್‌ ಅಂತರದಲ್ಲಿ ಅಂಗನ ವಾಡಿ ಕೇಂದ್ರ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದ್ದು ತ್ಯಾಜ್ಯ ನಿರ್ವಹಣೆ ಘಟಕ ಮಾಡುವುದರಿಂದ ಬಹಳಷ್ಟು ಅನಾನುಕೂಲವಾಗಲಿದೆ ಎಂಬುದು ಗ್ರಾಮಸ್ಥರ ವಾದ.

ಪಂಚಾಯತ್‌ ವ್ಯಾಪ್ತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧ ಮಾಡುವ ಜತೆಗೆ ತ್ಯಾಜ್ಯವನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಪಂಚಾಯತ್‌ ಆಡಳಿತವು ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಮಾಡಲು ಮುಂದಾಗಿದೆ. ಆದರೆ ಜನವಸತಿ ಪ್ರದೇಶ, ಶಾಲೆ, ಅಂಗನವಾಡಿ, ಆಸ್ಪತ್ರೆ ಇರುವ ಭಾಗದಲ್ಲಿಯೇ ರಸ್ತೆಗೆ ಹೊಂದಿಕೊಂಡಂತೆ ಇರುವ ಬಸ್ಸು ತಂಗುದಾಣದಲ್ಲಿಯೇ ಘಟಕ ನಿರ್ಮಾಣ ಮಾಡಲು ಹೊರಟಿರುವ ಪಂಚಾಯತ್‌ ಆಡಳಿತದ ವಿರುದ್ಧ ಸ್ಥಳೀಯರು ಇದೀಗ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಸ್ಥಳೀಯರ ಆರೋಪ
ಪಂಚಾಯತವು ಬಸ್ಸು ತಂಗುದಾಣದಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಮಾಡುವ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರೂ ಸಹ ಬೆದರಿಕೆ ತಂತ್ರದೊಂದಿಗೆ ಘಟಕ ನಿರ್ಮಾಣ ಕಾರ್ಯ ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಂಚಾಯತವು ಜನವಿರೋಧಿ ಕೆಲಸವನ್ನು ಮಾಡುತ್ತಿದ್ದು ಸಾರ್ವಜನಿಕರ ವಿಶ್ರಾಂತಿಗಾಗಿ ನಿರ್ಮಿಸಲಾಗಿರುವ ಬಸ್ಸು ತಂಗುದಾಣವನ್ನು ಇತರ ಉದ್ದೇಶಕ್ಕಾಗಿ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ತ್ಯಾಜ್ಯ ನಿರ್ವಹಣಾ ಘಟಕವು ಜನವಸತಿ ಇಲ್ಲದ ಭಾಗದಲ್ಲಿ ನಿರ್ಮಾಣ ಮಾಡುವಂತೆ ಒತ್ತಾಯಿಸಿರುವ ಗ್ರಾಮಸ್ಥರು ಕೂಡಲೇ ಪಂಚಾಯತದ ಜನವಿರೋಧಿ ಕೆಲಸವನ್ನು ನಿಲ್ಲಿಸುವಂತೆ ಜಿ.ಪಂ., ತಾ.ಪಂ. ಹಾಗೂ ಅಜೆಕಾರು ಪೊಲೀಸ್‌ ಠಾಣೆಗೆ ಮನವಿ ಮಾಡಿದ್ದಾರೆ.

ಸ್ಥಳೀಯರ ವಿರೋಧ
ಪಂಚಾಯತ್‌ ಆಡಳಿತದ ನಿರ್ಣಯದಂತೆ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಮಾಡಲಾಗುತ್ತಿದ್ದು ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಸ್ಸು ತಂಗುದಾಣ ಬಿಟ್ಟು ಅದಕ್ಕೆ ಹೊಂದಿಕೊಂಡಂತೆ ಇರುವ ಅಂಗಡಿಕೋಣೆ ಹಾಗೂ ಹೊರಭಾಗದಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗುವುದು.
– ಸಂಗಮೇಶ ಬಣಾಕಾರ, ಪಿಡಿಒ, ಶಿರ್ಲಾಲು ಗ್ರಾ.ಪಂ.

Advertisement

ಸ್ಥಳೀಯರಿಗೆ ಸಮಸ್ಯೆಯಿಲ್ಲ
ಸರಕಾರದ ಯೋಜನೆಯಂತೆ ಪಂಚಾಯತ್‌ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಮಾಡಲಾಗುತ್ತಿದ್ದು ಈಗಾಗಲೇ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಮುಂದುವರೆಸುವಂತೆ ಸೂಚಿಸಿದ್ದಾರೆ. ಘಟಕ ನಿರ್ಮಾಣದಿಂದ ಸ್ಥಳೀಯರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.
– ರಾಜು ಎಸ್‌. ಶೆಟ್ಟಿ, ಅಧ್ಯಕ್ಷರು, ಶಿರ್ಲಾಲು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next