Advertisement

ಅನುಚಿತ ವರ್ತನೆ: ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹ

03:51 PM Nov 20, 2019 | Team Udayavani |

ಅರಕಲಗೂಡು: ಶಾಲಾ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿಸುವ ಹನ್ಯಾಳು ಪ್ರೌಢ ಶಾಲೆಯ ದೈಹಿಕ ಶಿಕ್ಷಕ ವಿನಯ್‌ಬಾಬು ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

Advertisement

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ವೀಣಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಲಾಖಾ ಪ್ರಗತಿ ವರದಿ ಚರ್ಚೆಯ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವನಂಜೇಗೌಡ ತಮ್ಮ ಇಲಾಖಾ ವರದಿ ನೀಡಲು ಮುಂದಾದಾಗ ತಾಲೂಕು ಪಂಚಾಯಿತಿ ಸದಸ್ಯ ವೀರಾಜು ಆಕ್ಷೇಪ ವ್ಯಕ್ತಪಡಿಸಿದರು.

ತಾಲೂಕಿನ ಹನ್ಯಾಳು ಗ್ರಾಮದ ಪ್ರೌಢಶಾಲೆಯ ದೈಹಿಕ ಶಿಕ್ಷಕ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಆರೋಪವಿದೆ. ಈ ಬಗ್ಗೆ ಬಗ್ಗೆ ತಾವು ಏನು ಕ್ರಮ ಜರುಗಿಸಿದ್ದೀರಿ ಎಂದು ಪ್ರಶ್ನಿಸಿದರು.

ಡಿಡಿಪಿಐಗೆ ವರದಿ: ಇದಕ್ಕೆ ಉತ್ತರಿಸಿದ ಬಿಇಒ ಅವರು, ವಿದ್ಯಾರ್ಥಿನಿಯರು ಜಿಲ್ಲಾ ವಿದ್ಯಾರ್ಥಿ ಸಹಾಯವಾಣಿಗೆ ದೂರು ನೀಡಿದ್ದು, ಈಗಾಗಲೇ ಸಹಾಯವಾಣಿಯ ತಂಡ ಶಾಲೆಗೆ ಭೇಟಿ ನೀಡಿ ಜಿಲ್ಲಾ ಉಪನಿರ್ದೇಶಕರಿಗೆ ವರದಿ ನೀಡಿದೆ. ಆ ವರದಿಯ ಆಧಾರದ ಮೇಲೆ ಉಪನಿರ್ದೇಶಕರು ನನಗೆ ಮಾಹಿತಿಗಾಗಿ ಪತ್ರ ಬರೆದಿದ್ದಾರೆ ಎಂದರು.

ಡಿಡಿಪಿಐ ಅವರ ಪತ್ರದ ಮೇರೆಗೆ ಶಾಲೆಗೆ ಭೇಟಿ ನೀಡಿ ಶಾಲೆಯ 121 ವಿದ್ಯಾರ್ಥಿಗಳಿಂದ ಮಾಹಿತಿ ಕಲೆ ಹಾಕಿದ್ದೇನೆ. ಮಕ್ಕಳ ಮೇಲೆ ದೌರ್ಜನ್ಯ ಕಂಡುಬರುತ್ತಿದೆ. ಆದರೆ ಯಾವುದೇ ಮಕ್ಕಳು ಲಿಖೀತ ದೂರು ನೀಡಲು ಭಯಪಡುತ್ತಿದ್ದಾರೆ. ಇದೇ ವಿಷಯದ ಬಗ್ಗೆ ಇಂದು ವರದಿ ಪಡೆಯುತ್ತಿದ್ದೇನೆ ಎಂದು ಸಭೆಗೆ ತಿಳಿಸಿದರು.

Advertisement

ಅನುತ್ತೀರ್ಣಗೊಳಿಸುವ ಬೆದರಿಕೆ: ತನ್ನ ವಿರುದ್ಧ ಪೋಷಕರು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಅಂತಹವರನ್ನು ಅನುತ್ತೀರ್ಣ ಮಾಡುವ ಬೆದರಿಕೆಯನ್ನು ಶಿಕ್ಷಕರು ಹಾಕಿದ್ದಾರೆನ್ನಲಾಗಿದೆ. ಇದರಿಂದ ವಿದ್ಯಾರ್ಥಿಗಳು ದೂರು ನೀಡಲು ಮುಂದೆ ಬರುತ್ತಿಲ್ಲ. ಆದರೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಅವರನ್ನು ರಕ್ಷಣೆ ಮಾಡುವ ಯಾವುದೇ ದುರುದ್ದೇಶವಿಲ್ಲ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಭೆಗೆ ಮಾಹಿತಿ ನೀಡಿದರು.

ಮಕ್ಕಳಿಗೆ ಶೂ ಖರೀದಿಯಲ್ಲಿ ಗೋಲ್‌ಮಾಲ್‌: ರಾಜ್ಯ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ಶೂ ವಿತರಿಸುತ್ತಿದೆ. ಈ ಯೋಜನೆಯಲ್ಲಿ ಹಾಸನ ಜಿಲ್ಲೆಯ ಖಾಸಗಿ ಎಜೆನ್ಸಿಯವರಿಗೆ ಒಡಂಬಡಿಕೆ ಮಾಡಿಕೊಂಡು ಹಣ ದುರುಪಯೋಗ ಪಡಿಸಿಕೊಳ್ಳುತ್ತಿರುವ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ ಎಂದು ತಾಪಂ ಉಪಾಧ್ಯಕ್ಷ ನಾಗರಾಜು ಆಪಾದಿಸಿದರು. ಈ ಬಗ್ಗೆ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ತರಾಟೆ: ತಾಲೂಕಿನ ಅಂಗನವಾಡಿ ಕೇಂದ್ರ ಗಳಿಗೆ ಸರಬರಾಜು ಮಾಡುತ್ತಿರುವ ಆಹಾರ ಪದಾರ್ಥಗಳು ಕಳಪೆಯಾಗಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ಅನುಮಾನಗಳಿಗೆ ಎಡೆಮಾಡುತ್ತಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ವೀಣಾಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಶಿವಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್‌, ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುವ ಆಹಾರ ಪದಾರ್ಥಗಳು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಯಲ್ಲಿರುವ ಸಮಿತಿ ಶಿಫಾರಸಿನ ಮೇರೆಗೆ ಸರಬರಾಜಾಗುತ್ತದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಧ್ಯಕ್ಷೆ ವೀಣಾ ಶೇಂಗಾ ಬೀಜದ ಮಿಠಾಯಿ ಎಷ್ಟು ಗ್ರಾಂ ಇರಬೇಕು ಎಂದು ಪ್ರಶ್ನಿಸಿದಾಗ ಅಧಿಕಾರಿ 16 ಗ್ರಾಂ ಎಂದು ಸಭೆಗೆ ತಿಳಿಸಿದರು. ಅಂಗನವಾಡಿ ಕೇಂದ್ರದಿಂದ ಸಂಗ್ರಹಿಸಿದ್ದ ಶೇಂಗಾ ಬೀಜದ ಮಿಠಾಯಿ ಪೊಟ್ಟಣವನ್ನು ಸಭೆಯಲ್ಲಿ ಪ್ರದರ್ಶಿಸಿದ ಅಧ್ಯಕ್ಷರು ಇದು ಎಷ್ಟು ಗ್ರಾಂ ಇದೆ ಎಂದು ಸಭೆಯಲ್ಲಿ ಅಧಿಕಾರಿಯನ್ನ ಪ್ರಶ್ನಿಸಿದರು.

ಈ ಮಿಠಾಯಿಯ ಪಟ್ಟಣದ ಮೇಲೆ ಯಾವುದೇ ರೀತಿಯ ಕಂಪನಿಯ ಹೆಸರು ಮತ್ತು ಇದರ ಕಾಲಾವಧಿಯನ್ನು ನಮೂದಿಸಿಲ್ಲ. ಇಂತಹಾ ಪದಾರ್ಥವನ್ನು ಅಂಗನವಾಡಿಗಳಿಗೆ ವಿತರಣೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ. ಮಕ್ಕಳ ಆರೋಗ್ಯದ ಮೇಲೆ ಚೆಲ್ಲಾಟ ವಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಿಠಾಯಿಗೆ ದುಬಾರಿ ದರ ನಮೂದು: ಅಂಗಡಿ ಗಳಲ್ಲಿ ಈ ಮಿಠಾಯಿ 1 ರೂ.ಗೆ ಸಿಗುತ್ತದೆ. ಆದರೆ ಅಂಗನವಾಡಿ ಕೇಂದ್ರಕ್ಕೆ ವಿತರಿಸುತ್ತಿರುವ ಈ ಮಿಠಾಯಿಗೆ ಬೆಲೆ 2 ರೂ. 75 ಪೈಸೆ ನೀಡಲಾಗುತ್ತಿದೆ. ಮಕ್ಕಳಿಗೆ ನೀಡುವ ಆಹಾರ ಪದಾರ್ಥದಲ್ಲೂ ಹಣ ಹೊಡೆಯುವ ಸಂಚು ಎಷ್ಟರಮಟ್ಟಿಗೆ ಸರಿ. ಇದರಬಗ್ಗೆ ಸಭೆ ಖಂಡಿಸಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ವರದಿ ನೀಡುವಂತೆ ಆದೇಶಿಸಿದರು.

ಪಿಡಬ್ಲೂಡಿ ಎಇಇ ವಿರುದ್ಧ ಕ್ರಮಕ್ಕೆ ಶಿಫಾರಸು: ತಾಪಂ ಸಾಮಾನ್ಯ ಸಭೆಗೆ ಆಗಮಿಸದ ಎಇಇ ವಿರುದ್ಧ ಸಭೆ ಕ್ರಮಕ್ಕಾಗಿ ಶಿಫಾರಸು ಮಾಡಿ ಇಲಾಖೆಯಿಂದ ಬಂದ ಸಿಬ್ಬಂದಿಗೆ ವರದಿ ನೀಡದಂತೆ ವಾಪಸ್‌ ಕಳುಹಿಸಿದ ಘಟನೆ ನಡೆಯಿತು. ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next