ಸೇಡಂ: ಜಮೀನು ವಿವಾದ ಸಂಬಂಧ ಮಹಿಳೆಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿಗಳನ್ನು ಬುಧವಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ದಿನೇಶ ನಾಗೇಂದ್ರಪ್ಪ ಎನ್ನುವನನ್ನು ಮಂಗಳವಾರ ಬಂಧಿಸಿ, ನಂತರ ಶಸ್ತ್ರಾಸ್ತ ಬಚ್ಚಿಟ್ಟಿದ್ದನ್ನು ಪರೀಕ್ಷಿಸುವ ವೇಳೆ ಹಲ್ಲೆ ನಡೆಸಿದಾಗ ಗುಂಡಿನ ದಾಳಿ ನಡೆಸಲಾಗಿತ್ತು. ಕೊಲೆಗೆ ಸಹಕರಿಸಿದ ಈತನ ಸಹೋದರ ಸತೀಶನನ್ನು ಕಾರಾಗೃಹಕ್ಕೆ ಅಟ್ಟಲಾಗಿದೆ.
ಕೊಲೆಗೆ ನಡೆದಿತ್ತು ಸಂಚು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಸಂಬಂಧಿ ಶರಬಾವತಿಯನ್ನು ಕೊಲೆ ಮಾಡಲು ಎರಡು ವಾರಗಳಿಂದ ದಿನೇಶ ಹಾಗೂ ಸತೀಶ ಸಂಚು ರೂಪಿಸಿದ್ದರು. ಇದಕ್ಕಾಗಿಯೇ ಪ್ರತಿ ರವಿವಾರವೂ ಸಂತೆಗೆ ಆಗಮಿಸಿ ಪ್ರಯತ್ನಿಸಿ ವಿಫಲವಾಗಿದ್ದರು. ರವಿವಾರವೂ ಹೀಗೆ ಆದಾಗ, ಬೇಸತ್ತ ದಿನೇಶ ಜನಜಂಗುಳಿ ಮಧ್ಯೆಯೇ ಕೊಲೆ ಮಾಡಿದ್ದ. ನಂತರ ಗ್ರಾಮದ ಸಮೀಪವಿರುವ ಬ್ರಿಡ್ಜ್ ಕೆಳಗೆ ಕೊಲೆಗೆ ಬಳಸಿದ್ದ ತಲವಾರ್ ಅವಿತಿಟ್ಟು, ಕಲಬುರಗಿಗೆ ಹೋಗಿದ್ದ.
ಪೊಲೀಸ ಕಾರ್ಯ ಶ್ಲಾಘನೀಯ: ಕೊಲೆ ಮಾಡಿದ ನಂತರ ಕಲಬುರಗಿಗೆ ಪಯಣ ಬೆಳೆಸಿದ ದಿನೇಶ ತನ್ನ ಹಳೆ ಗೆಳೆಯರೊಂದಿಗೆ ಸಂಪರ್ಕ ಸಾಧಿಸಿದ್ದ. ಕೆಲವರಿಂದ ಖರ್ಚಿಗೆ ಹಣ ಕೇಳಿದ್ದ. ತನ್ನ ಮೊಬೈಲ್‌ನ್ನು ಮನೆಯಲ್ಲೇ ಬಿಟ್ಟು ಹೋಗಿದ್ದ. ಇದೇ ವೇಳೆ ದಾರಿಹೋಕರ ಮೊಬೈಲ್ ಪಡೆದು ಗೆಳೆಯರಿಂದ ಸಹಾಯಕ್ಕೆ ಅಂಗಲಾಚಿದ್ದ. ಇದರಿಂದ ಈತನನ್ನು ಬಂಧಿಸುವುದು ಕಷ್ಟಸಾಧ್ಯವಾಗಿತ್ತು.
ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸುಶೀಲಕುಮಾರ, ಪಿಸಿಗಳಾದ ಮಾರುತಿ, ವಿಠuಲರೆಡ್ಡಿ, ಅಲ್ಲಾಭಕ್ಷ, ಮಲ್ಕಪ್ಪ ತಂಡ ಆರೋಪಿಯ ಹಳೆಯ ಗೆಳೆಯರ ಸಂಪರ್ಕ ಸಾಧಿಸಿದ್ದರು. ಆಗ ಆರೋಪಿ ಮುಂಬೈಗೆ ತೆರಳಲು ಸಿದ್ಧತೆ ನಡೆಸಿರುವುದು ತಿಳಿದುಬಂದಿತ್ತು. ಆಗ ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಪೊಲೀಸರು ಕಾಯ್ದು ಕುಳಿತಿದ್ದರು. ಈ ಕುರಿತು ಸುಳಿವು ದೊರೆತ ದಿನೇಶ ಕಲಬುರಗಿಯಲ್ಲೇ ಉಳಿದಿದ್ದ. ನಂತರ ಹೊಟೇಲವೊಂದರಲ್ಲಿ ಉಪಹಾರ ಸೇವಿಸುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದ.