Advertisement
ರಾಂಚಿಯಲ್ಲಿ ರವಿವಾರ ನಡೆದ ವಿಪಕ್ಷಗಳ ಇಂಡಿಯಾ ಒಕ್ಕೂಟದ “ಉಲ್ಗುಳನ್ ನ್ಯಾಯ್’ ರ್‍ಯಾಲಿಯಲ್ಲಿ ಮಾತನಾಡಿದ ಖರ್ಗೆ, “ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಸೊರೇನ್‌ಗೆ “ಭಯ ಹುಟ್ಟಿಸುವ’ ಎಲ್ಲ ಪ್ರಯತ್ನವನ್ನೂ ಮಾಡಿತು. ಆದರೆ ಸೊರೇನ್ ಒಬ್ಬ ದಿಟ್ಟ ವ್ಯಕ್ತಿ. ಬಿಜೆಪಿ ಮುಂದೆ ಮಂಡಿಯೂರುವ ಬದಲು ಜೈಲಿಗೆ ಹೋದರೂ ಚಿಂತೆಯಿಲ್ಲ ಎಂದು ನಿರ್ಧರಿಸಿದರು. ಈ ರೀತಿ ಬುಡಕಟ್ಟು ಜನಾಂಗೀಯರಿಗೆ ಭಯ ಹುಟ್ಟಿಸುವ ಕೆಲಸ ಮುಂದುವರಿಸಿದರೆ ಬಿಜೆಪಿ ಸಂಪೂರ್ಣ ನಿರ್ಮೂಲನೆಯಾಗಲಿದೆ’ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ಮಧ್ಯಪ್ರದೇಶದ ಸಾತ್ನಾದಲ್ಲಿ ಚುನಾವಣ ರ್ಯಾಲಿಯಲ್ಲಿ ಮಾತನಾಡಿದ್ದ ಖರ್ಗೆ, “ಮೋದಿ-ಶಾ ಸರಕಾರ್ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಪ್ರಜಾಪ್ರಭುತ್ವವು ಕೊನೆಯಾಗುತ್ತದೆ’ ಎಂದು ಆರೋಪಿಸಿದ್ದಾರೆ.
Related Articles
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ದಿಢೀರ್ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ರಾಂಚಿಯ ಮೆಗಾ ರ್‍ಯಾಲಿಗೆ ಅವರು ಗೈರಾಗಿದ್ದರು. ಅವರ ಬದಲಾಗಿ ಖರ್ಗೆ ಅವರೇ ರ್‍ಯಾಲಿ ಉದ್ದೇಶಿಸಿ ಭಾಷಣ ಮಾಡಿದರು.
Advertisement
ಮೋದಿಯವರು ದೇಶಕ್ಕೆ ಕೊಟ್ಟಿದ್ದು ಬೆಲೆಯೇರಿಕೆ, ನಿರುದ್ಯೋಗ, ಬಡತನದ ಕೊಡುಗೆ. ಅವರು ಸುಳ್ಳುಗಳ ಫ್ಯಾಕ್ಟರಿ, ಸುಳ್ಳಿನ ಉತ್ಪಾದಕ, ಸಗಟು ಮಾರಾಟಗಾರ ಮತ್ತು ವಿತರಕ. ಈ ಸರ್ವಾಧಿಕಾರಿಗೆ ನಿರ್ಗಮನದ ಬಾಗಿಲು ತೋರಿಸುವ ಸಮಯ ಬಂದಿದೆ.ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ ನನ್ನ ಪತಿಯನ್ನು ಜೈಲಿನಲ್ಲೇ ಕೊಲ್ಲಲು ಯತ್ನ: ಸುನೀತಾ
“ಬಿಜೆಪಿ ನನ್ನ ಪತಿಯನ್ನು ಕೊಲ್ಲಲು ಸಂಚು ರೂಪಿಸಿದೆ. ಇದೇ ಕಾರಣಕ್ಕಾಗಿ ಜೈಲಿನಲ್ಲಿ ಅವರಿಗೆ ಇನ್ಸುಲಿನ್ ನಿರಾಕರಿಸಲಾಗುತ್ತಿದೆ’ ಎಂದು ದಿಲ್ಲಿ ಅಬಕಾರಿ ನೀತಿ ಹಗರಣ ಸಂಬಂಧ ಜೈಲಿನಲ್ಲಿರುವ ಸಿಎಂ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಆರೋಪಿಸಿದ್ದಾರೆ. ರಾಂಚಿಯ ರ್ಯಾಲಿಯಲ್ಲಿ ಮಾತನಾಡಿದ ಅವರು, “ನನ್ನ ಪತಿಯನ್ನು ಕೊಲ್ಲುವುದೇ ಬಿಜೆಪಿಯ ಉದ್ದೇಶ. ಸಕ್ಕರೆ ಕಾಯಿಲೆ ಇರುವ ಕೇಜ್ರಿವಾಲ್ ಅವರು 12 ವರ್ಷಗಳಿಂದ ಇನ್ಸುಲಿನ್ ಪಡೆ ಯುತ್ತಿದ್ದಾರೆ. ನಿತ್ಯ ಅವರಿಗೆ 50 ಯುನಿಟ್ ಇನ್ಸುಲಿನ್ ಅಗತ್ಯವಿದೆ. ಆದರೆ, ಜೈಲಲ್ಲಿ ಅವರಿಗೆ ಇನ್ಸುಲಿನ್ ನಿರಾಕರಿಸಲಾಗುತ್ತಿದೆ. ಜನರಿಗಾಗಿ ಸೇವೆ ಸಲ್ಲಿಸಿದ ಅವರನ್ನು ಯಾವುದೇ ಆರೋಪ ಸಾಬೀತಾಗದೇ ಜೈಲಿನಲ್ಲಿರಿಸಿದ್ದಾರೆ. ವಿಪಕ್ಷಗಳ ಇಂಡಿಯಾ ಒಕ್ಕೂಟವು ಬಿಜೆಪಿ ಸರ್ವಾಧಿಕಾರದ ವಿರುದ್ಧ ಹೋರಾಡಿ, ಗೆಲ್ಲಲಿದೆ’ ಎಂದಿದ್ದಾರೆ. ಕೇಜ್ರಿ, ಸೊರೇನ್ ಹೆಸರಲ್ಲಿ ಖಾಲಿ ಕುರ್ಚಿ!
ಇಂಡಿಯಾ ಒಕ್ಕೂಟದ ರ್ಯಾಲಿ ವೇಳೆ ವೇದಿಕೆಯಲ್ಲಿ “ಎರಡು ಖಾಲಿ ಕುರ್ಚಿ’ಗಳನ್ನು ಇರಿಸಲಾಗಿತ್ತು. ಈ ಖಾಲಿ ಕುರ್ಚಿಗಳಲ್ಲಿ ಜೈಲಲ್ಲಿರುವ ದಿಲ್ಲಿ ಸಿಎಂ ಕೇಜ್ರಿವಾಲ್ ಮತ್ತು ಝಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಅವರ ಹೆಸರು ಬರೆಯಲಾಗಿತ್ತು. ಅಲ್ಲದೇ ರ್ಯಾಲಿಯಲ್ಲಿ ಸೇರಿದ್ದ ಬಹುತೇಕ ಕಾರ್ಯಕರ್ತರು “ಹೇಮಂತ್ ಸೊರೇನ್ ಅವರ ಚಿತ್ರವಿರುವ ಮುಖವಾಡ’ವನ್ನು ಧರಿಸಿ ಕುಳಿತಿದ್ದು ಕಂಡುಬಂತು. “ಜೈಲ್ ಕಾ ತಾಲಾ ಟೂಟೇಗಾ, ಹೇಮಂತ್ ಸೊರೇನ್ ಚೂಟೇಗಾ’ (ಜೈಲಿನ ಬೀಗ ತೆರೆಯುತ್ತದೆ, ಹೇಮಂತ್ ಸೊರೇನ್ ಬಿಡುಗಡೆಯಾಗುತ್ತಾರೆ), ಝಾರ್ಖಂಡ್ ಜೂಕೇಗಾ ನಹೀಂ (ಝಾರ್ಖಂಡ್ ಯಾರಿಗೂ ಮಣಿಯುವುದಿಲ್ಲ) ಎಂಬ ಘೋಷಣೆಗಳೂ ಮೊಳಗಿದವು.