Advertisement

ಅಕ್ರಮ ಖಾತೆ ಮಾಡಿದವರಿಗೆ ಜೈಲು ಶಿಕ್ಷೆ

02:23 PM Sep 02, 2020 | Suhan S |

ಕೆ.ಆರ್‌.ನಗರ: ಪಟ್ಟಣದ ವ್ಯಾಪ್ತಿಯ ಸರ್ಕಾರಿ ಜಾಗ ಮತ್ತು ಮೂಲ ನಿವೇಶನದಾರರ ನಿವೇಶನಗಳನ್ನು ಅಕ್ರಮ ಖಾತೆ ಮಾಡಿ, ಬೇರೆವರಿಗೆ ನೋಂದಣಿ ಮಾಡಿದ್ದಲ್ಲಿ ಖಾತೆ ಮಾಡಿದ ಅಧಿಕಾರಿ ಹಾಗೂ ಖಾತೆದಾರ ಇಬ್ಬರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಶಾಸಕ ಸಾ.ರಾ.ಮಹೇಶ್‌ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಸುಮಾರು 2 ಸಾವಿರ ಮಂದಿ ಆಶ್ರಯ ನಿವೇಶನದ ಫ‌ಲಾನುಭವಿಗಳಿದ್ದು, ಕೆಲವು ಸದಸ್ಯರು ಮತ್ತು ಅಧಿಕಾರಿಗಳು ಹಣದ ಆಸೆಗಾಗಿ ನಕಲಿ ಹಕ್ಕುಪತ್ರಗಳನ್ನು ಸೃಷ್ಟಿಸಿ ಬೇರೆಯವರಿಗೆ ಪರಭಾರೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಇದರಿಂದ ಕಡತಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ದಾಖಲೆ ಪುಸ್ತಕ ತಿದ್ದುಪಡಿ: ಈ ಹಿಂದೆ ಕೆಲವು ಪುರಸಭಾ ಸದಸ್ಯರು ನಡೆಸಿದ್ದಾರೆ ಎನ್ನಲಾಗಿರುವ ಅಕ್ರಮ ಖಾತೆಯಲ್ಲಿ ಮೂಲ ನಿವೇಶನದಾರರನ್ನು ಕೈ ಬಿಟ್ಟು ಇತರರಿಗೆ ಖಾತೆ ಮಾಡಿರುವ ದೂರುಗಳಿದೆ. ಇದರ ಜತೆಗೆ ಪುರಸಭೆಯಲ್ಲಿರುವ ನನ್ನ ಕಚೇರಿಯಲ್ಲಿ ರಾತ್ರಿ ವೇಳೆಯಲ್ಲಿ ದಾಖಲೆ ಪುಸ್ತಕ ತಿದ್ದುತ್ತಾರೆ ಎಂದು ದೂರುಗಳು ಕೇಳಿ ಬಂದಿದೆ. ಇದರಿಂದ ಕಚೇರಿಗೆ ಬೀಗ ಹಾಕಿಸಿದ್ದೆ ಎಂದು ತಿಳಿಸಿದರು. ಸಾರ್ವಜನಿಕರ ಖಾತೆ ವರ್ಗಾವಣೆಗೆ ತೊಂದರೆಯಾಗುತ್ತಿದೆ ಎಂಬ ಮನವಿ ಮೇರೆಗೆ ಬೀಗದ ಕೀಯನ್ನು ಅಧಿಕಾರಿಗಳಿಗೆ ನೀಡುತ್ತಿದ್ದು, ಮುಂದೆ ಯಾವುದೇ ಲೋಪ ದೋಷಗಳು ನಡೆದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದರು.

ಅಧಿಕಾರಿಗಳ ತಂಡ ರಚನೆ: ಈ ಹಿಂದೆ ನಿಯಮಾನುಸಾರ ಹಂಚಿಕೆ ಮಾಡಿರುವ 2 ಸಾವಿರ ಆಶ್ರಯ ನಿವೇಶನಗಳನ್ನು ಮೂಲ ಫ‌ಲಾನುಭವಿಗಳ ಹೆಸರಿಗೆ ಖಾತೆ ಮಾಡಲು ಪ್ರಾಮಾಣಿಕ ಅಧಿಕಾರಿಗಳ ತಂಡವನ್ನು ರಚಿಸಲಿದ್ದು, ಅದರಲ್ಲಿ ಉಪ ತಹಶೀಲ್ದಾರರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಿ, ಸದರಿ ಸಮಿತಿಯಲ್ಲಿ ಪುರಸಭಾ ಮುಖ್ಯಾಧಿಕಾರಿ, ಪೊಲೀಸ್‌ ಇಲಾಖೆ ಒಬ್ಬ ಅಧಿಕಾರಿಯನ್ನು ನೇಮಕ ಮಾಡಿ, ಆನಂತರ ನನ್ನ ಆಪ್ತಸಹಾಯಕ ಮತ್ತು ಪುರಸಭೆಯ ಗಣಕಯಂತ್ರಾಧಿಕಾರಿ ಮೂಲಕ ತನಿಖೆ ನಡೆಸಿ ಮೂಲ ಹಕ್ಕುಪತ್ರದಾರರಿಗೆ ಖಾತೆ ಮಾಡುವ ಜವಾಬ್ದಾರಿ ವಹಿಸಲಾಗಿದೆ ಎಂದರು.

ತಹಶೀಲ್ದಾರ್‌ ಎಂ.ಮಂಜುಳ, ತಾಪಂ ಇಒ ಎಂ.ಎಸ್‌.ರಮೇಶ್‌, ಪುರಸಭಾ ಸದಸ್ಯರಾದ ಸಂತೋಷ್‌ಗೌಡ, ಕೆ.ಪಿ.ಪ್ರಭುಶಂಕರ್‌, ಕೆ.ಎಲ್‌.ಜಗದೀಶ್‌, ಕೆ.ಜಿ.ಸುಬ್ರಮಣ್ಯ, ನಟರಾಜು, ಸೈಯದ್‌ಸಿದ್ದಿಕ್‌, ಸರೋಜ ಮಾದಯ್ಯ, ಮಂಜುಳಾ, ಮುಖ್ಯಾಧಿಕಾರಿ ಕೆ.ಶಿವಣ್ಣ, ಸಿಪಿಐ ಪಿ.ಕೆ.ರಾಜು, ಪಿಎಸ್‌ಐ ವಿ.ಚೇತನ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next