Advertisement

ಭಾವಪೂರ್ಣ ಆತ್ರೇಯೀ ಕೃಷ್ಣಾ ಗಾನಾಮೃತ

05:32 PM Nov 07, 2019 | mahesh |

ರಂಜನಿ ಸಂಗೀತ ಸಭಾ ಎಲಿಮಲೆ, ಸುಳ್ಯ ಇದರ ಆಶ್ರಯದಲ್ಲಿ ಇತ್ತೀಚೆಗೆ ಚೊಕ್ಕಾಡಿಯ ಶ್ರೀರಾಮ ದೇವಾಲಯದಲ್ಲಿ ಆಯೋಜಿಸಿದ್ದ ನವರಾತ್ರಿ ವೈಭವಂನಲ್ಲಿ ಕು| ಆತ್ರೇಯೀ ಕೆ. ಕೃಷ್ಣಾ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಉತ್ತಮ ಕಂಠಸಿರಿ, ಶುದ್ಧ ಪಾಠಾಂತರ, ಮನೋಧರ್ಮಯುಕ್ತ ಶಿಸ್ತುಬದ್ಧ ನಿರೂಪಣೆ, ಭಾವತುಂಬಿ ತಾನೂ ಸಂಗೀತದಲ್ಲಿ ಮಿಂದೇಳುತ್ತಾ, ಪಕ್ಕವಾದ್ಯದವರನ್ನೂ ಸಮರ್ಥವಾಗಿ ಬಳಸಿಕೊಂಡು ಸುಮಾರು ಮೂರೂವರೆ ಗಂಟೆಗಳ ಕಾಲ ಶೋತೃವೃಂದವನ್ನು ಹಿಡಿದಿಟ್ಟುಕೊಂಡು ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಕಛೇರಿ ನೀಡಿದರು. ಕಾಂಭೋಜಿರಾಗದ ಮೈಸೂರು ವಾಸುದೇವಾಚಾರ್ಯರ ಲಂಭೋದರಂನಿಂದ ಆರಂಭಗೊಂಡ ಕಛೇರಿಯಲ್ಲಿ ಮಾಯಾಮಾಳವಗೌಳ ರಾಗದ ಮೇರುಸಮಾನ, ಸಿಂಹೇಂದ್ರಮಧ್ಯಮರಾಗದ ಬಹು ಪ್ರಸಿದ್ಧ ನಿನ್ನೆ ನಮ್ಮಿತಿನಯ್ನಾ ಶ್ರೀರಾಮ ಕೃತಿ ಅನಾವರಣಗೊಂಡ ಬಗೆಯಂತೂ ಆಲಾಪನೆ ಮತ್ತು ಸ್ವರಪ್ರಸ್ತಾರಗಳಲ್ಲಿ ಮೇಳೈಸಿ ರಾಗದ ಕುರಿತ ಹಿಡಿತ ಮತ್ತು ಶುದ್ಧತೆಯ ಪ್ರತೀಕವಾಗಿತ್ತು. ಸುರುಟಿಯಲ್ಲಿ ಮೂಡಿದ ಶ್ರೀ ವೆಂಕಟಗಿರೀಶ ಮಾ ಲೋಕಯೇ, ರೀತಿಗೌಳದಲ್ಲಿ ಒಡಮೂಡಿದ ಜನನಿ ನಿನ್ನುವಿನಾ ಕೃತಿಗಳು ನಾದಸೌಖ್ಯದಲ್ಲಿ ಮನಮುಟ್ಟುವಂತಿತ್ತು.

Advertisement

ಆ ನಂತರದ ಕೃತಿ ಫ‌ರಸ್‌ರಾಗದ ಪುರಂದರದಾಸರ ವೆಂಕಟರಮಣನೆ ಬಾರೋ ಲವಲವಿಕೆಯಿಂದ ಮೂಡಿಬಂದರೆ , ಮುತ್ತುಸ್ವಾಮಿ ದೀಕ್ಷಿತರ ಛಾಯಾಗೌಳ ರಾಗದ ಸರಸ್ವತ್ಯಾ ಭಗವತ್ಯಾ ಕೃತಿ ಮತ್ತೆಮತ್ತೆ ಕೇಳಬೇಕೆನ್ನಿಸುವ ನಾದಸುಖವನ್ನು ಹೊಂದಿತ್ತು. ಕಛೇರಿಯ ಪ್ರಧಾನರಾಗವಾಗಿ ಮುತ್ತುಸ್ವಾಮಿ ದೀಕ್ಷಿತರ ನವಾವರಣಕೃತಿ ಕಮಲಾಂಬಾ ಭಜರೇಯನ್ನು ಆರಿಸಿಕೊಂಡು ಘನವಾಗಿ ಪ್ರಸ್ತುತಪಡಿಸಿದರು. ವಿಸ್ತಾರವಾದ, ಶುದ್ಧ ವೈವಿಧ್ಯತೆಯನ್ನು ಹೊಂದಿದ ಆಲಾಪನೆ, ಸಾಹಿತ್ಯಸ್ಪಷ್ಟತೆಯನ್ನೊಳಗೊಂಡ ಕೃತಿನಿರೂಪಣೆ, ಪ್ರಮಾಣಬದ್ಧವಾದ ನೆರವಲ್‌, ಸ್ವರಪ್ರಸ್ತಾರಗಳಿಂದ, ತನಿ ಆವರ್ತನೆಯ ಸುಖದಿಂದ ಕಛೇರಿಯು ವಿಧ್ವತ್‌ ಪೂರ್ಣವಾಗಿ ಮೂಡಿಬಂತು. ಮುಂದೆ ಖಂಡತ್ರಿಪುಟ ತಾಳದಲ್ಲಿ ಕಾಪಿ ರಾಗದ ರಾಗಂ ತಾನಂ ಪಲ್ಲವಿ ಪ್ರಸ್ತುತಪಡಿಸಿದರು. ವಿ| ಆರ್‌.ಕೆ. ಶ್ರೀರಾಮ್‌ಕುಮಾರ್‌ ಅವರ ರಚನೆ ಪೀತಾಂಬರಧರ ಪ್ರಿಯನಾಯಿಕಾ ಪಲ್ಲವಿಯನ್ನು ಮುಂದುವರಿಸಿ ರಾಗಮಾಲಿಕೆಯಲ್ಲಿ ಮಲಯಮಾರುತ, ಹಿಂದೋಳ, ಅಮೃತವರ್ಷಿಣಿ ರಾಗಗಳನ್ನು ಪರಸ್ಪರ ಬಳಸಿಕೊಂಡು ಸಂಯೋಜಿಸಿಕೊಂಡ ಪರಿ ಗಾಯಕಿಯ ಕಲಾಪ್ರತಿಭೆಗೆ ಸಾಕ್ಷಿಯಾಯಿತು. ಅನಂತರ ಪುರಂದರದಾಸರ ರಾಮಮಂತ್ರವ ಜಪಿಸೋ ಜೋನ್‌ಪುರಿ ರಾಗದಲ್ಲಿ ಚೊಕ್ಕದಾಗಿ ಬಂದರೆ, ಪೂರ್ವಿರಾಗದ ತಿಲ್ಲಾನದ ಆಪ್ತ ಪ್ರಸ್ತುತಿಯೊಂದಿಗೆ ಕಛೇರಿ ಸಂಪನ್ನಗೊಂಡಿತು.

ವಯಲಿನ್‌ನಲ್ಲಿ ವಿ| ವೈಭವ್‌ರಮಣ ಬೆಂಗಳೂರು, ಮೃದಂಗದಲ್ಲಿ ವಿ| ನಿಕ್ಷಿತ್‌ ಟಿ.ಪುತ್ತೂರು, ಮೋರ್ಚಿಂಗ್‌ನಲ್ಲಿ ವಿ| ಬಾಲಕೃಷ್ಣ ಭಟ್‌ ಹೊಸಮನೆ ಸಹರಿಸಿದರು.

ಭಾಮಿನೀ ಚೊಕ್ಕಾಡಿ

Advertisement

Udayavani is now on Telegram. Click here to join our channel and stay updated with the latest news.

Next