ಶಹಾಬಾದ: ಬಿಜೆಪಿಯ ಯಾವ ನಾಯಕರು ಬಂದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ನಾವೇನು ಪರ್ಸೆಟೇಜ್ ತಗೋತಿವಾ? ಅಕ್ರಮ ಮರಳು ಸಾಗಾಣಿಕೆ ಮಾಡ್ತೀವಾ? ಅಟ್ರಾಸಿಟಿ ಕೇಸು ಹಾಕಿಸುತ್ತೇವಾ? ಯಾವ ಕಾರಣಕ್ಕೆ ಸೋಲಿಸುತ್ತಾರೆ? ಬಿಜೆಪಿಯವರಿಗೆ ಒಂದೇ ಒಂದು ಅಭ್ಯರ್ಥಿ ಸಿಗುತ್ತಿಲ್ಲ. ಅಂತವರು ನನ್ನನ್ನು ಸೋಲಿಸುತ್ತಾರಾ? ಎಂದು ಮಾಜಿ ಸಚಿವ, ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಮಂಗಳವಾರ ಶಂಕರವಾಡಿ ಗ್ರಾಮದಲ್ಲಿ ಅಂದಾಜು 12ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಡಾ|ಬಿ.ಆರ್. ಅಂಬೇಡ್ಕರ್ ಭವನಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಕೆಪಿಟಿಸಿಎಲ್, ಶಿಕ್ಷಣ ಇಲಾಖೆಯಲ್ಲಿ ಹಾಗೂ ಪಿಎಸ್‌ಐ ನೇಮಕಾತಿಯಲ್ಲಿ ನೌಕರಿಗಳನ್ನು ಲಕ್ಷಾಂತರ ಹಣ ಪಡೆದುಕೊಂಡು ಮಾರಿಕೊಂಡಿದ್ದಾರೆ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಯವರು ಭ್ರಷ್ಟಾಚಾರದ ಬಗ್ಗೆ ಮೋದಿಗೆ ಪತ್ರ ಬರೆದಿದ್ದಾರೆ. ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಎಂಎಲ್ ಸಿ ಮಾಡಿದ್ದಕ್ಕೆ ಮೆರವಣಿಗೆ ಮಾಡಿಸಿಕೊಂಡಿದ್ದಾರೆ ಎಂದು ಬಾಬುರಾವ ಚಿಂಚನಸೂರು ಅವರನ್ನು ಕುಟುಕಿದರು.
ಬಿಜೆಪಿಗರು ಟಿಕೆಟ್‌ನ್ನು ಹರಾಜಿಗಿಟ್ಟಿದ್ದಾರೆ. ಯಾರು ಜಾಸ್ತಿ ಹಣ ಕೊಡುತಾರೋ, ಬೆಂಗಳೂರಿಗೆ ಜಾಸ್ತಿ ಕರೆದುಕೊಂಡು ಹೋಗುತ್ತಾರೋ ಅವರಿಗೆ ಮಾತ್ರ ಟಿಕೇಟು ಕೊಡುತ್ತಾರೆ. ನಾನು ಇದೇ ತಾಲೂಕಿನ ಮೊಮ್ಮಗನಿದ್ದೇನೆ. ಕ್ಷೇತ್ರದ ಅಭಿವೃದ್ಧಿ ನನ್ನಿಂದ ಮಾತ್ರ ಸಾಧ್ಯ ಎಂದರು.
ಚಿತ್ತಾಪುರ ಕ್ಷೇತ್ರದ 42 ಭವನಗಳನ್ನು ರಾಜಕೀಯ ಕ್ಷುಲ್ಲಕ ಕಾರಣಕ್ಕೆ ನಿಲ್ಲಿಸಲಾಗಿದೆ ಎಂದು ಆರೋಪಿಸಿದ ಖರ್ಗೆ ಆ ಎಲ್ಲ ಯೋಜನೆಗಳನ್ನು ಜಾರಿಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಹಲವರನ್ನು ಪ್ರಿಯಾಂಕ್ ಖರ್ಗೆ ಸ್ವಾಗತಿಸಿದರು. ಮುಖಂಡರಾದ ಮಹೇಮೂದ್ ಸಾಹೇಬ್, ರಮೇಶ ಮರಗೋಳ, ಸುನೀಲ ದೊಡ್ಡಮನಿ, ತಹಶೀಲ್ದಾರ್ ಉಮಾಕಾಂತ ಹಳ್ಳೆ, ಇಒ ನೀಲಗಂಗಾ ಮತ್ತಿತರರಿದ್ದರು.