Advertisement
ನದಿಗಳೆಂದರೆ ಅದು ಕೇವಲ ನೀರಿನ ಹರಿವು ಅಲ್ಲ, ಈ ನಾಡಿನ ಭದ್ರತೆಯ ನರನಾಡಿಗಳು, ಜೀವನಾಡಿಗಳು. ನದಿಗಳಿಗೆ ಜಾತಿ, ಮತ, ಪಂಗಡ ಎಂಬುದೇನಿಲ್ಲ. ಅದು ದೇವಸ್ಥಾನದ ಪಕ್ಕದಲ್ಲಿ, ಮಸೀದಿಯ ಪಕ್ಕದಲ್ಲಿ, ಚರ್ಚ್ ಪಕ್ಕದಲ್ಲಿ ಹರಿಯುತ್ತದೆ. ಆದರೆ ಇಂದು ನದಿಗಳ ಫಲಾನುಭವಿಗಳೇ ಆದವರು, ಪೂಜ್ಯ ಭಾವನೆಯಿಂದ ನೋಡಬೇಕಾದ ನದಿಗಳಿಗೆ ತ್ಯಾಜ್ಯ ಎಸೆದು ಬಿಡುತ್ತಾರೆ. ನದಿಗಳ ನಡುವೆ ವ್ಯಾಜ್ಯಗಳನ್ನು ಸೃಷ್ಟಿಸುತ್ತಾರೆ. ( ಕಾವೇರಿ, ಮುನ್ನ ಪೆರಿಯಾರ್, ಮಹದಾಯಿ, ನರ್ಮದಾ, ಕೃಷ್ಣಾ ) ಇಂದು ಮಹಾನಗರಗಳಲ್ಲಿ ಟ್ಯಾಪ್ ತಿರುಗಿಸಿದಾಗ ನೀರು ಬರುತ್ತದೆ. ಆದರೆ ಈ ನೀರಿನ ಇನ್ನೊಂದು ಭಾಗವನ್ನು ಕಂಡರೆ…?! ಅಂದರೆ ಕುಡಿಯುವ ನೀರಿನ ಹೊಳೆಗಳನ್ನು ನಾವೇ ಮಲಿನಗೊಳಿಸಿ, ಹೊಲಸು ನೀರನ್ನು ನಾವೇ ಬಳಸಿಕೊಳ್ಳುವುದೆಂದರೆ ಮನುಜ ಸಾಮ್ರಾಜ್ಯ ಎಷ್ಟು ಬುದ್ಧಿವಂತ ಎಂದು ಯೋಚಿಸಬೇಕಾಗುತ್ತದೆ.
Related Articles
Advertisement
ಯಾಕೆ ಮಳೆ ಕಡಿಮೆಯಾಗುತ್ತಿದೆ? ಯಾಕೆ ಈ ಸಮೃದ್ಧ ನಾಡು ಬರದ ನಾಡಾಗುತ್ತಿದೆ? ಎಂದು ಯೋಚಿಸಿದರೆ ಇದೆಲ್ಲಕ್ಕೂ ನಾವೇ ಕಾರಣ ಅನ್ನಿಸುತ್ತದೆ. ನಮ್ಮಸುಖದ ಬದುಕಿಗೆ ಎಷ್ಟೊಂದು ನದಿ, ತೊರೆ, ಝರಿಗಳನ್ನು ಮಲಿನ ಮಾಡಿಬಿಟ್ಟಿದ್ದೇವೆ, ಎಷ್ಟು ನದೀ ಮೂಲಗಳ ಅಡವಿಯನ್ನು ಕತ್ತರಿಸಿಬಿಟ್ಟಿದ್ದೇವೆ. ಹರಿಯಬೇಕಾಗಿರುವ ಎಷ್ಟೊಂದು ನದಿಗಳನ್ನು ಆಣೆಕಟ್ಟು ಕಟ್ಟಿ ತಡೆ ಹಿಡಿದಿದ್ದೇವೆ. ತ್ಯಾಜ್ಯ, ಕಸ ಎಸೆದು ಎಷ್ಟೊಂದು ನೀರನ್ನು ವಿಷಮಯ ಮಾಡಿದ್ದೇವೆ. ಇಷ್ಟೆಲ್ಲಾ ಆದ ಮೇಲಾದರೂ ಪ್ರಕೃತಿ ಸಂರಕ್ಷಣೆಯ ಬಗ್ಗೆ ಯೋಚಿಸಿದ್ದೀವಾ? ನದಿ ತಿರುವು, ನದಿ ಜೋಡಣೆ ಎಂಬ ಅವೈಜ್ಞಾನಿಕ ಯೋಜನೆಗಳ ಕುರಿತು ಪ್ರಶ್ನಿಸಿದ್ದೀವಾ? ತಡೆದಿದ್ದೀವಾ? ಇಲ್ಲ. ನದಿಗಳ ಸಂರಕ್ಷಣೆಯ ಕೆಲವು ಪ್ರಶ್ನೆಗಳಿಗೆ ಉತ್ತರಗಳೇ ಇರುವುದಿಲ್ಲ, ಕೆಲವು ಉತ್ತರಗಳಿಗೆ ಪ್ರಶ್ನೆಗಳೇ ಸರಿ ಹೊಂದುವುದಿಲ್ಲ ಅಂತ ಆಗಿದೆ. ನಮ್ಮನ್ನಾಳುವ ರಾಜಕೀಯ ವ್ಯವಸ್ಥೆ ನದಿ, ಕೆರೆ, ಕಾಲುವೆ, ಸಮುದ್ರ ಎಲ್ಲವನ್ನೂ “ಅಭಿವೃದ್ಧಿ’ ಎಂಬ ನೆಪದಲ್ಲಿ ಹಂತಹಂತವಾಗಿ ನಾಶ ಮಾಡುತ್ತಾ ಬರುತ್ತಿದೆ. ಆದರೂ ನಾವು ಅಂಥವರಿಗೆ ಮತ ನೀಡಿ ಮತಿಹೀನರಾಗುತ್ತಿದ್ದೇವೆ. ಇಂದು ಮಳೆ ಕಡಿಮೆಯಾಗಿ ಬರಗಾಲದ ಕಡೆ ಸಾಗುತ್ತಿರುವುದಕ್ಕೆ, ಅತಿವೃಷ್ಟಿ, ಅನಾವೃಷ್ಟಿಯಾಗುವುದಕ್ಕೆ, ಪ್ರಾಕೃತಿಕ ದುರಂತಗಳು ಆಗುವುದಕ್ಕೆ ನಾವು ಮತ್ತು ನಮ್ಮನ್ನಾಳುವ ವ್ಯವಸ್ಥೆಯೇ ಕಾರಣ ಹೊರತು ಪ್ರಕೃತಿಯಲ್ಲ.
ನದಿಯೂ ಸೊರಗುತ್ತದೆ:
ಆದರೆ ಇಂದು ಪಶ್ಚಿಮ ಘಟ್ಟದ ಮಳೆ ಕಾಡು, ನದೀ ಮೂಲದ ಸೂಕ್ಷ್ಮಪ್ರದೇಶಗಳಲ್ಲಿ ಮಾನವ ಚಟುವಟಿಕೆ ಮಿತಿ ಮೀರಿದೆ. ಅರಣ್ಯ ಅತಿಕ್ರಮಣ, ಗಣಿಗಾರಿಕೆ, ಜಲ ವಿದ್ಯುತ್ ಯೋಜನೆ, ಅಕ್ರಮ ರೆಸಾರ್ಟು, ಟಿಂಬರ್ ಮಾಫಿಯಾ, ಕಾಂಕ್ರೀಟ್ ರಸ್ತೆ ನಿರ್ಮಾಣ, ನದಿ ತಿರುವು, ಮಾನವ ನಿರ್ಮಿತ ಕಾಡ್ಗಿಚ್ಚು… ಹೀಗೇ ವಿವಿಧ ಕಾರಣಗಳಿಂದ ನದಿಗಳ ನೆಮ್ಮದಿಗೆ ಗೀರು ಗಾಯವಾಗುತ್ತಿದೆ. ಬೆಟ್ಟಗಳ ಒಳಗಿನ ಜಲನಾಡಿಗಳಲ್ಲಿ ನೀರು ಮಾತ್ರ ಹರಿದು ಬರಬೇಕಿತ್ತು. ಆದರೆ ಇಂದು ನದೀ ಮೂಲಗಳ ಸೂಕ್ಷ್ಮಪ್ರದೇಶಗಳಲ್ಲಿ ವಿವಿಧ ರೀತಿಯ ಕಾಮಗಾರಿ ಮಾಡಿದಾಗ ವಿಪರೀತ ಮಳೆ ನೀರಿನ ಜೊತೆ ಮೇಲ್ಗಡೆಯಿಂದ ಕಲ್ಲು, ಮಣ್ಣು, ರಾಡಿ ಹರಿದುಬಂದಾಗ ಜಲನಾಡಿಗಳು ಸ್ಫೋಟಗೊಂಡು ಭೂಕುಸಿತವಾಗುತ್ತದೆ. ಎತ್ತಿನ ಹೊಳೆ ಯೋಜನೆಗೆ ಬೆಟ್ಟಗಳ ಒಳಗಿನ ಬಂಡೆಗಳನ್ನು ಡೈನಮೈಟ್ ಮೂಲಕ ನ್ಪೋಟಿಸಿದಾಗ ಬೆಟ್ಟಗಳು ಕಂಪನವಾಗಿ ಮಣ್ಣಿನ ಮೇಲ್ಮೆ„ಪದರ ಮತ್ತು ಒಳಮೈ ಪದರಗಳು ಕುಸಿದು ನೀರು ಸಹಜವಾಗಿ ಹರಿಯಬೇಕಾದಲ್ಲಿ ತಡೆಯಾಗಿ, ಅದರ ವಿರುದ್ಧ ಎÇÉೋ ಹರಿದು ಹೋಗಿ ಜಲ ಪ್ರವಾಹ, ಭೂಕುಸಿತ ಉಂಟಾಗುತ್ತದೆ. ಹೀಗಾದಾಗ ಮಳೆಯ ನೀರು ಬೆಟ್ಟಗಳ ಒಳಗಿನ ಶಿಲಾ ಪದರಗಳಲ್ಲಿ ಶೇಖರಣೆ ಆಗದೇ ನದಿ ಬಡಕಲಾಗುತ್ತದೆ. ನದಿಗೆ ಈ ರೀತಿಯ ಏಟು ಬಿದ್ದರೆ ಮುಂದಿನ ಮಳೆಗಾಲದಲ್ಲಿ ನೀರಿನ ವ್ಯತ್ಯಯ ಆಗಿ ಮಳೆ ಬಂದರೂ ಅಂತರ್ಜಲ ಕಡಿಮೆಯಾಗಿ ಬರಗಾಲಕ್ಕೆ ಕಾರಣವಾಗುತ್ತದೆ.
ಒಂದು ಬೃಹತ್ ನಗರ ಕುಸಿದುಬಿದ್ದರೆ ಅಂತಹ ನೂರಾರು ನಗರಗಳನ್ನು ಮರು ನಿರ್ಮಾಣ ಮಾಡಬಹುದು. ಅಂತಹ ಟೆಕ್ನಾಲಜಿ ನಮ್ಮಲ್ಲಿದೆ. ಆದರೆ ಒಂದು ನದೀ ಮೂಲ, ಮಳೆಕಾಡಿನಂತಹ ಸೂಕ್ಷ್ಮ ಪ್ರದೇಶ ಅಳಿದು ಹೋದರೆ ಮತ್ತೆ ಅದನ್ನು ಮರು ಸ್ಥಾಪಿಸಲು ಯಾವ ಟೆಕ್ನಾಲಜಿಯೂ ನಮ್ಮಲ್ಲಿ ಇಲ್ಲ. ನದಿಗಳು ನಮ್ಮ ಬದುಕಿನ ಜೀವನಾಡಿಗಳು, ಅವು ಅಳಿದುಹೋದರೆ ನಾವು ವಿಪರೀತ ತೊಂದರೆಗೆ ಒಳಗಾಗುತ್ತೇವೆ ಎಂಬುದನ್ನು ತಿಳಿದುಕೊಂಡು, ಅವುಗಳ ಸಂರಕ್ಷಣೆಗೆ ಮುಂದಾಗದೇ ಇದ್ದರೆ, ನಮ್ಮಮಕ್ಕಳಿಗೆ ನಾವು ನೀರು ಕೊಡಲಾಗದೇ ಕಣ್ಣೀರನ್ನು ಕೊಡಬೇಕಾಗುತ್ತದೆ.
-ದಿನೇಶ್ ಹೊಳ್ಳ