ಚಾಮರಾಜನಗರ: 18 ವರ್ಷ ತುಂಬಿದ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ. ಬಸವರಾಜ ಮನವಿ ಮಾಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆ ಕುರಿತು ಎಷ್ಟೇ ಅಭಿಯಾನ, ಅರಿವು ಕಾರ್ಯಕ್ರಮ ನಡೆದರೂ ಯಾವುದೇ ಚುನಾವಣೆಯಲ್ಲಿಯೂ ಶೇ. 100ಕ್ಕೆ 100 ಮತದಾನ ನಡೆದಿಲ್ಲ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಶೇಕಡಾವಾರು ಮತದಾನ ಗಮನಿಸಿದಾಗ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತದಾನ ದಾಖಲಾದರೆ, ವಿದ್ಯಾವಂತರಿರುವ ನಗರ ಪ್ರದೇಶಗಳಲ್ಲಿ ಮತದಾನ ಕಡಿಮೆ ಪ್ರಮಾಣದಲ್ಲಿದೆ ಎಂದು ವಿಷಾದಿಸಿದರು.
ನೋಂದಣಿಗೆ ಉತ್ತೇಜಿಸಿ: ಮತದಾನವನ್ನು ವಿದ್ಯಾವಂತರು, ಯುವಜನತೆ ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರಿಗಳು, ನೌಕರರು ಸಹ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅನುಕೂಲ ಮಾಡಿಕೊಡಬೇಕು. ಚುನಾವಣಾ ಶಾಖೆಯಲ್ಲಿ ಕಾರ್ಯನಿರ್ವಹಿಸುವವರು ಪೂರ್ಣ ಜ್ಞಾನ ಹೊಂದಿರಬೇಕು. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳ್ಳುವ ಯುವಕರು, ಜನಸಾಮಾನ್ಯರಿಗೆ ಸೂಕ್ತ ಮಾಹಿತಿ ನೀಡಿ ಹೆಸರು ನೋಂದಾಯಿಸಿಕೊಳ್ಳಲು ಉತ್ತೇಜಿಸಬೇಕು ಎಂದರು.
ದೇಶದ ಗಮನ: ಹುಣಸೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಗುಬ್ಬಿಗೂಡು ರಮೇಶ್ ಮಾತನಾಡಿ, ಮತದಾರರು ಮತದಾನ ಸಂದರ್ಭದಲ್ಲಿ ಯಾವುದೇ ಅಮಿಷಗಳಿಗೆ ಒಳಗಾಗಬಾರದು. ಮತದಾನ ಪವಿತ್ರವಾದದ್ದು. ಕಡ್ಡಾಯ ಮತದಾನದಿಂದ ದೇಶದ ರಾಜಕೀಯ ಅಸ್ಥಿರತೆಯನ್ನು ಹೋಗಲಾಡಿಸಲು ಸಾಧ್ಯವಾಗಲಿದೆ. ಒಂದು ಮತದ ಮಹತ್ವದಿಂದ ಚಾಮರಾಜನಗರ ಜಿಲ್ಲೆ ಇಡೀ ದೇಶದ ಗಮನ ಸೆಳೆದಿತ್ತು ಎಂದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆರ್. ಧ್ರುವನಾರಾಯಣ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದನ್ನು ಇದೇ ವೇಳೆ ಸ್ಮರಿಸಿದರು. ಜಿಪಂ ಸಿಇಒ ಡಾ. ಕೆ. ಹರೀಶ್‌ಕುಮಾರ್ ಮಾತನಾಡಿ, ಜಗತ್ತಿನಲ್ಲೇ ಭಾರತ ಪರಿಪೂರ್ಣ, ಪ್ರಬುದ್ಧ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವುದು ನಮ್ಮ ಹೆಮ್ಮೆ. ಮತದಾನ ಸಂಶಯದಿಂದ ಕೂಡಿರದೇ ನಂಬಿಕೆಯ ಪ್ರಕ್ರಿಯೆಯಾಗಬೇಕು. ನೈತಿಕ ಮತದಾನದ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರೂ ಅರಿತು ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದ ಪ್ರಯುಕ್ತ ನಡೆದ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಯುವ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಮತ್ತು ವಿಕಲಚೇತನರಿಗೆ ಬ್ರೈಲ್ ಲಿಪಿ ಮೂಲಕ ಮತದಾನ ಮಾಡಲು ಗುರುತಿನಚೀಟಿ ವಿತರಿಸಲಾಯಿತು. ಮತ್ತು ಕಳೆದ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.