ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ನಲ್ಲಿ ಹಳೇ ಮೈಸೂರು ಭಾಗದ ಕೆಲವೇ ಜಿಲ್ಲೆಗಳಿಗೆ ಕೊಡುಗೆ ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿದ್ದರಿಂದ ಈ ಬಾರಿ ಹಳೇ ಮೈಸೂರು ಭಾಗದ ಎಲ್ಲ ಜಿಲ್ಲೆಗಳಿಗೂ ಬಜೆಟ್‌ನಲ್ಲಿ ಪ್ರಾಮುಖ್ಯತೆ ಕಲ್ಪಿಸಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ನಲ್ಲಿ ಜೆಡಿಎಸ್ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗಕ್ಕೆ ಭರಪೂರ ಕೊಡುಗೆಗಳನ್ನು ನೀಡಿದ್ದು, ವಿಶೇಷವಾಗಿ ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಹಣದ ಹೊಳೆ ಹರಿಸಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು ಹಾಗೂ ಹಾಲಿ ಮುಖ್ಯಮಂತ್ರಿಯವರ ತವರು ಜಿಲ್ಲೆ ಹಾಸನ ಮತ್ತು ಅವರ ಕ್ಷೇತ್ರದವಾದ ರಾಮನಗರ ಜಿಲ್ಲೆಗೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ಸಿಕ್ಕಿದೆ.
ಹಾಸನ ಜಿಲ್ಲೆಯ ಕಾಚೀನಹಳ್ಳಿ ಏತ ನೀರಾವರಿ 3ನೇ ಹಂತದ ಯೋಜನೆ 100 ಕೋಟಿ, ಒಂಟಿಗುಡ್ಡ ಏತನೀರಾವರಿಗೆ 54 ಕೋಟಿ, ಅರಕಲಗೂಡಿನ 150 ಕೆರೆಗೆ ಹೇಮೆ ನೀರು ಹರಿಸಲು 120 ಕೋಟಿ, ಅರಸೀಕೆರೆ ಕೆರೆಗಳ ಅಭಿವೃದ್ಧಿಗೆ 15 ಕೋಟಿ, ಬೇಲೂರು ಕೆರೆಗಳ ಅಭಿವೃದ್ಧಿಗೆ ಯಗಚಿ ನೀರು ಹರಿಸಲು 100 ಕೋಟಿ, ಎತ್ತಿನ ಹೊಳೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ 60 ಕೋಟಿ ರೂ. ಸಕಲೇಶಪುರ ಕುಡಿಯುವ ನೀರಿಗೆ 12 ಕೋಟಿ ರೂ. ಅನುದಾನ ನೀಡಲಾಗಿದೆ.
ಮಂಡ್ಯ ಜಿಲ್ಲೆ 2ನೇ ಹಂತದ ವಿಶ್ವೇಶ್ವರಯ್ಯ ಜಾಲ 1ನೇ ಘಟಕ ಆಧುನೀಕರಣಕ್ಕೆ 400 ಕೋಟಿ ರೂ. ಕೋಲಾರದಲ್ಲಿ ಟೊಮೆಟೋ ಸಂಸ್ಕರಣಾ ಘಟಕಕ್ಕೆ 20 ಕೋಟಿ ರೂ. ತುಮಕೂರಿನ ಸಿದ್ಧಗಂಗಾ ಮಠದ ಪ್ರಾರ್ಥನಾ ಮಂದಿರಕ್ಕೆ 5 ಕೋಟಿ, ಚಿತ್ರದುರ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳ ಕಾಮಗಾರಿಗೆ 105 ಕೋಟಿ, ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲೂಕುಗಳ ನೀರಾವರಿ ಯೋಜನೆಗೆ 100 ಕೋಟಿ ರೂ. ಅನುದಾನ ನೀಡಲಾಗಿದೆ.
ಮೈಸೂರು ಜಿಲ್ಲೆ ನಂಜನಗೂಡು ಕೆರೆಗಳಿಗೆ ಕಬಿನಿ ನೀರು ಹರಿಸಲು 80 ಕೋಟಿ, 2ನೇ ಹಂತದ ವಿಶ್ವೇಶ್ವರಯ್ಯ ಜಾಲ 1ನೇ ಘಟಕದ ಅಧುನೀಕರಣಕ್ಕೆ 400 ಕೋಟಿ. ಬೆಂಗಳೂರು ನಗರದ ಕಾವೇರಿ ನೀರು ಸರಬರಾಜು ಯೋಜನೆಗೆ 500 ಕೋಟಿ ರೂ. ಅನುದಾನ ಘೋಷಿಸಲಾಗಿದೆ.