Advertisement

ಹಾಲು ಹಲ್ಲುಗಳ ಪ್ರಾಮುಖ್ಯತೆ

04:38 PM Jan 11, 2020 | Sriram |

“ಹಾಲು ಹಲ್ಲು’ ಎಂಬುದಾಗಿ ಕರೆಯಲ್ಪಡುವ ಎಳೆ ಹಲ್ಲುಗಳು ಶಿಶು ಜನಿಸಿದ ಸುಮಾರು ಆರು ತಿಂಗಳುಗಳಿಂದ ಒಂದು ವರ್ಷದೊಳಗೆ ‌ ಒಸಡಿನಲ್ಲಿ ಮೂಡಲಾರಂಭಿಸುತ್ತವೆ. ಹಾಲು ಹಲ್ಲುಗಳು ಮೂಡುವ ಸಂದರ್ಭದಲ್ಲಿ ನೋವು ಇರಬಹುದು. ಎಳೆಯ, ಮೃದು ವಸಡುಗಳ ನೋವಿನ ಉಪಶಮನಕ್ಕೆ ಚೀಪುವ ರಿಂಗ್‌ಗಳು, ಶುದ್ಧ ಬೆರಳುಗಳು ಇತ್ಯಾದಿ ಸಹಕಾರಿ. ಹಾಲು ಹಲ್ಲು ನಿಧಾನವಾಗಿ ಮೂಡುತ್ತದೆ, ಮೊದಲಿಗೆ ಬಾಯಿಯ ಮುಂಭಾಗದ ಹಲ್ಲು ಕಾಣಿಸಿಕೊಳ್ಳುತ್ತದೆ. ಮೂರು ವರ್ಷ ವಯಸ್ಸಾಗುವಾಗ ಬಹುತೇಕ ಎಲ್ಲ ಮಕ್ಕಳಲ್ಲಿ 20 ಹಾಲು ಹಲ್ಲುಗಳ ಪಂಕ್ತಿ ಸಂಪೂರ್ಣವಾಗಿ ಮೂಡಿರುತ್ತದೆ. ಭವಿಷ್ಯದಲ್ಲಿ ಶಿಶುವಿನ ಬಾಯಿಯ ಆರೋಗ್ಯಕ್ಕೆ ಈ ಹಾಲು ಹಲ್ಲುಗಳಿಂದೇನೂ ಪ್ರಯೋಜನವಿಲ್ಲ ಎಂಬುದು ಸಾಮಾನ್ಯವಾಗಿ ಜನರಲ್ಲಿರುವ ತಪ್ಪು ಕಲ್ಪನೆ. ನಿಮ್ಮ ಮಗುವಿನ ಹಾಲು ಹಲ್ಲುಗಳು ಕ್ರಮೇಣ ಬಿದ್ದು ಹೋಗುತ್ತವೆ ಎಂಬುದು ಅವುಗಳನ್ನು ನಿರ್ಲಕ್ಷಿಸಲು ಸಕಾರಣವಲ್ಲ.

Advertisement

ಶಿಶುವಿನ ಒಟ್ಟಾರೆ ಆರೋಗ್ಯ, ಬೆಳವಣಿಗೆ ಮತ್ತು ಕಲ್ಯಾಣದಲ್ಲಿ ಹಾಲು ಹಲ್ಲುಗಳು ಪ್ರಮುಖ ಪಾತ್ರವನ್ನು ಹೊಂದಿವೆ. ಮಾತುಗಳ ಸರಿಯಾದ ಉಚ್ಚಾರಕ್ಕೆ ಸಹಕರಿಸುವುದು, ಮಗು ಮಾತನಾಡಲು ಕಲಿಯುವಾಗ ನಾಲಗೆ ಅಡ್ಡಿಯಾಗದಂತೆ ತಡೆಯುವುದು, ಚೆನ್ನಾಗಿ ಜಗಿಯುವ ಅಭ್ಯಾಸ ರೂಢಿಯಾಗುವುದು, ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗೆ ಸಹಕರಿಸುವುದು, ಮುಖ ಮತ್ತು ಒಟ್ಟಾರೆ ಸೌಂದರ್ಯಕ್ಕೆ ಕೊಡುಗೆ ನೀಡುವುದು, ಆತ್ಮವಿಶ್ವಾಸದ ನಗು, ಧನಾತ್ಮಕ ಸಾಮಾಜಿಕ ಸಂವಹನಕ್ಕೆ ಪೂರಕವಾಗಿರುವುದು – ಇವೆಲ್ಲ ಹಾಲು ಹಲ್ಲುಗಳ ಉಪಯೋಗಗಳು. ಇದಲ್ಲದೆ, ಭವಿಷ್ಯದಲ್ಲಿ ಮೂಡಲಿರುವ ಶಾಶ್ವತ ಹಲ್ಲುಗಳ ಸರಿಯಾದ ಜೋಡಣೆಗಾಗಿ ಹಾಲು ಹಲ್ಲುಗಳು ಬಾಯಿಯಲ್ಲಿ ಸ್ಥಳಾವಕಾಶವನ್ನು ರೂಪಿಸಿಕೊಡುತ್ತವೆ, ದವಡೆಯ ಬೆಳವಣಿಗೆಗೆ ಪೂರಕವಾಗಿ ಸಹಕರಿಸುತ್ತವೆ.

ಹಾಲು ಹಲ್ಲುಗಳು ಹುಳುಕಾಗುವುದು ಒಂದು ಸೋಂಕು ಮತ್ತು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಶೀಘ್ರವಾಗಿ ಹರಡಬಲ್ಲ ಅನಾರೋಗ್ಯ ಸ್ಥಿತಿಯಾಗಿದೆ. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಒದಗಿಸದೆ ಇದ್ದಲ್ಲಿ ಇದು ನೋವು, ಕಿರಿಕಿರಿ, ಗಂಭೀರ ಸೋಂಕು, ಹಾಲು ಹಲ್ಲುಗಳು ಸಂಪೂರ್ಣ ನಾಶವಾಗುವ ಸವೆತಕ್ಕೆ ಕಾರಣವಾಗಬಹುದು. ಹಾಲು ಹಲ್ಲು ಅವಧಿಗಿಂತ ಮುನ್ನವೇ ನಷ್ಟವಾಗಿ, ಆ ಖಾಲಿ ಸ್ಥಳವು ಕಾಯ್ದಿಡದೆ ಇದ್ದಲ್ಲಿ ಸಮೀಪದ ಬೇರೆ ಹಾಲು ಹಲ್ಲುಗಳು ಅತ್ತ ಬಾಗುವ ಮೂಲಕ ಭವಿಷ್ಯದಲ್ಲಿ ಮೂಡುವ ಶಾಶ್ವತ ಹಲ್ಲಿಗೆ ಸ್ಥಳಾವಕಾಶ ಇಲ್ಲದಂತಾಗಬಹುದು. ಇದರಿಂದ ಖಾಯಂ ಹಲ್ಲುಗಳು ಒತ್ತೂತ್ತಾಗಿ ಅಥವಾ ಓರೆಕೋರೆಯಾಗಿ ಬೆಳೆಯಬಹುದು. ಆದ್ದರಿಂದ ಹಾಲು ಹಲ್ಲು ಅವಧಿಪೂರ್ವ ನಷ್ಟವಾದ ಮಗುವಿಗೆ ಆ ಖಾಲಿ ಜಾಗವನ್ನು ಕಾಯ್ದಿಡಲು ಅಗತ್ಯವಾದ ಸಾಧನವನ್ನು ದಂತ ವೈದ್ಯರು ಅಳವಡಿಸಬೇಕಾಗಬಹುದು.

ಮಕ್ಕಳು ಎಳೆಯ ವಯಸ್ಸಿನಿಂದಲೇ ಉತ್ತಮ ಮೌಖೀಕ ಆರೋಗ್ಯ, ನೈರ್ಮಲ್ಯವನ್ನು ಕಾಯ್ದುಕೊಳ್ಳುವುದು ಅಗತ್ಯ ಮತ್ತು ಅದು ಭವಿಷ್ಯದಲ್ಲಿಯೂ ಮುಂದುವರಿಯಬೇಕು. ಸಣ್ಣದಾದ, ಮೃದುವಾದ ಬ್ರಶ್‌ನಿಂದ ಬಟಾಣಿ ಕಾಳಿನಷ್ಟು ಗಾತ್ರದ ಫ್ಲೋರೈಡ್‌ ಟೂತ್‌ಪೇಸ್ಟ್‌ ಉಪಯೋಗಿಸಿ ನಾಜೂಕಾಗಿ ಹಾಲುಹಲ್ಲುಗಳನ್ನು ಉಜ್ಜಬೇಕು. ರಾತ್ರಿ ಮತ್ತು ಬೆಳಗ್ಗೆ – ಎರಡು ಬಾರಿ ಹಲ್ಲುಜ್ಜಬೇಕು. ಹಲ್ಲುಗಳು ಮೂಡುವುದಕ್ಕೆ ಮುನ್ನ ಶುದ್ಧ ಹತ್ತಿಯ ಬಟ್ಟೆಯನ್ನು ನೀರಿನಲ್ಲಿ ತೋಯಿಸಿ ವಸಡುಗಳನ್ನು ಶುಚಿಗೊಳಿಸಬೇಕು. ಹಾಲು ಹಲ್ಲುಗಳು ಬೇಗನೆ ಹುಳುಕಾಗುತ್ತಿವೆಯೇ ಎಂಬುದನ್ನು ಗಮನಿಸಲು ನಿಯಮಿತವಾಗಿ ದಂತವೈದ್ಯರನ್ನು ಭೇಟಿಯಾಗಬೇಕು ಮಾತ್ರವಲ್ಲದೆ ಅಗತ್ಯಬಿದ್ದರೆ ಹಲ್ಲುಗಳ ಎನಾಮಲ್‌ ದೃಢಗೊಳಿಸುವುದಕ್ಕಾಗಿ ಮತ್ತು ಬೇಗನೆ ಸವೆಯುವುದು ಅಥವಾ ಹುಳುಕಾಗುವುದನ್ನು ತಪ್ಪಿಸಲು ಫ್ಲೋರೈಡ್‌ ಅಥವಾ ಸೀಲಂಟ್‌ ಅಳವಡಿಸಬೇಕಾಗುತ್ತದೆ. ಸೋಡಾದಂತಹ ಆಮ್ಲಿàಯ ಆಹಾರಗಳು, ಸಿಹಿಭರಿತ ಖಾದ್ಯಗಳನ್ನು ಮಿತವಾಗಿ ಸೇವಿಸುವಂತಹ ಆರೋಗ್ಯಯುತ ಆಹಾರ ಕ್ರಮಗಳನ್ನು ಕೂಡ ಎಳೆಯ ವಯಸ್ಸಿನಿಂದಲೇ ರೂಢಿಸಿಕೊಳ್ಳಬೇಕು.

-ಡಾ| ನಿಶು ಸಿಂಗ್ಲಾ
ಅಸೋಸಿಯೇಟ್‌ ಪ್ರೊಫೆಸರ್‌
ಪಬ್ಲಿಕ್‌ ಹೆಲ್ತ್‌ ಡೆಂಟಿಸ್ಟ್ರಿ ವಿಭಾಗ, ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ

Advertisement
Advertisement

Udayavani is now on Telegram. Click here to join our channel and stay updated with the latest news.

Next