Advertisement

ಉಪವಾಸ ವ್ರತ ಆಚರಣೆ ಮಾಡುವುದರ ಮಹತ್ವ, ಪ್ರಯೋಜನಗಳು  

04:37 PM Sep 26, 2022 | ಕಾವ್ಯಶ್ರೀ |

ಉಪವಾಸ ವ್ರತ ಮಾಡುವುದರಿಂದ ನಾನಾ ರೀತಿಯ ಪ್ರಯೋಜನಗಳಿವೆ. ಸಾಮಾನ್ಯರ ದೃಷ್ಟಿಯಲ್ಲಿ ಉಪವಾಸ ಎಂದರೆ ಉಪಹಾರ ಸೇವನೆ. ಊಟದ ಬದಲು ಉಪಹಾರವನ್ನೇ ಎರಡು ಪಟ್ಟು ಸೇವಿಸಿರುತ್ತೇವೆ. ಪ್ರತಿಯೊಂದು ಧರ್ಮದ ಜನರು ತಮ್ಮ ನಂಬಿಕೆ ಮತ್ತು ಸಂಪ್ರದಾಯಗಳ ಪ್ರಕಾರ ಉಪವಾಸ ಆಚರಿಸುತ್ತಾರೆ.

Advertisement

ಹಿಂದು, ಮುಸ್ಲಿಂ, ಕ್ರೈಸ್ತ, ಜೈನ, ಪಾರ್ಸಿ ಎಲ್ಲ ಮತ ಬಾಂಧವರಲ್ಲಿ ಉಪವಾಸ ಒಂದು ಧಾರ್ಮಿಕ ಆಚರಣೆಯ ಮಹತ್ವ ಪಡೆದುಕೊಂಡಿದೆ. ಉಪವಾಸಕ್ಕೆ ಆಧ್ಯಾತ್ಮಿಕ ಹಿನ್ನೆಲೆಯೂ ಬೆಸೆದುಕೊಂಡಿದೆ. ಹಿಂದೂ ಧರ್ಮದಲ್ಲಿ ವಿವಿಧ ವಿಶೇಷ ದಿನಗಳು, ಹಬ್ಬ ಸೇರಿದಂತೆ ಇತರೆ ಸಮಯದಲ್ಲಿ ಉಪವಾಸದ ಆಚರಣೆ ಮಾಡಲಾಗುತ್ತದೆ. ಉಪವಾಸದ ವೇಳೆ ಅನೇಕ ನಿಯಮಗಳು ಇದೆ. ವೈಜ್ಞಾನಿಕ, ಆರೋಗ್ಯ ದೃಷ್ಟಿಯಿಂದಲೂ ಉಪವಾಸ ಮಾಡುವುದು ಒಳ್ಳೆಯ ಅಭ್ಯಾಸ.

ನಾವು ದಿನಕ್ಕೆ 3 ಬಾರಿ ಆಹಾರ ಸೇವನೆ ಮಾಡುವುದರಿಂದ ಹೊಟ್ಟೆಯಿಂದ ಆರಂಭವಾಗಿ ದೊಡ್ಡ ಕರುಳಿನವರೆಗೂ ನಿರಂತವಾಗಿ ಜೀರ್ಣ ಕ್ರಿಯೆ ನಡೆಯುತ್ತಿರುತ್ತದೆ. ಉಪವಾಸ ಮಾಡುವುದರಿಂದ ಜೀರ್ಣಾಂಗಗಳಿಗೆ ವಿಶ್ರಾಂತಿ ದೊರೆಯುತ್ತದೆ.

‘ಲಂಘನಂ ಪರಮೌಷಧಂʼ ಎಂದರೆ ಉಪವಾಸ ಅನೇಕ ಕಾಯಿಲೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಜ್ವರ, ಅಜೀರ್ಣವಾದಾಗ ಒಂದು ದಿನ ಉಪವಾಸ ಮಾಡಿದರೆ ದೇಹ ತನ್ನನ್ನು ತಾನೇ ಸರಿಪಡಿಸಿಕೊಳ್ಳುತ್ತದೆ. ದೇಹ ಒಂದು ನಿಸರ್ಗ ರೂಪುಗೊಳಿಸಿದ ಯಂತ್ರ. ಆ ಯಂತ್ರಕ್ಕೆ ಸಣ್ಣ ಪುಟ್ಟ ತೊಂದರೆಗಳು ಉಂಟಾದಾಗ ಉಪವಾಸದ ಮೂಲಕ ಸರಿಪಡಿಸಿಕೊಳ್ಳಬಹುದು. ಆರೋಗ್ಯವಂತರು 15 ದಿನಗಳಿಗೊಮ್ಮೆ ಸಂಪೂರ್ಣ ಉಪವಾಸ ಮಾಡುವುದು ಒಳ್ಳೆಯದು. ನೀರನ್ನು ಮಾತ್ರ ಕುಡಿಯಬೇಕು. ಇದರಿಂದ ಶರೀರಕ್ಕೆ ದೃಢತೆ ಬರುತ್ತದೆ. ದೇಹದಲ್ಲಿನ ವಿಷಕಾರಿ ವಸ್ತುಗಳು ಹೊರಹೋಗುವುದಲ್ಲದೆ ಕೊಬ್ಬು ಕೂಡ ಕರಗುತ್ತದೆ. ವಾರಕ್ಕೊಂದು ಬಾರಿ ಅರ್ಧ ದಿನ ಉಪವಾಸ ಅಂದರೆ ಒಂದು ಹೊತ್ತಿನ ಉಪವಾಸ ಮಾಡುವುದು ಒಳ್ಳೆಯದು.

ಉಪವಾಸದಿಂದ ದೇಹದ ಆರೋಗ್ಯಕ್ಕೂ ಅನೇಕ ಲಾಭಗಳಿವೆ. ಆ ಲಾಭಗಳೇನು?

Advertisement

ತೂಕ ನಷ್ಟ:

ತೂಕ ಕಳೆದುಕೊಳ್ಳಲು ಉಪವಾಸ ಉತ್ತಮ ಮಾರ್ಗವಾಗಿದೆ. ಹೆಚ್ಚುತ್ತಿರುವ ಕೊಬ್ಬನ್ನು ಕಡಿಮೆ ಮಾಡಲು ಉಪವಾಸ ಸಹಾಯ ಮಾಡುತ್ತದೆ. ಘನ ಪದಾರ್ಥಗಳ ಬದಲಿಗೆ ಪಾನೀಯಗಳನ್ನು ಸೇವಿಸುವುದರಿಂದ ತೂಕ ಇಳಿಕೆಯಾಗಲಿದೆ.

ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು:

ಒಂದು ಸಂಶೋಧನೆಯ ಪ್ರಕಾರ, ಶೇಕಡಾ 62.33 ರಷ್ಟು ಜನರಿಗೆ ಉಪವಾಸದ ಸಮಯದಲ್ಲಿ ಅಜೀರ್ಣದ ಸಮಸ್ಯೆ ಕಾಣಿಸಲಿಲ್ಲ. ಶೇ 27ರಷ್ಟು ಜನರ ಅಜೀರ್ಣ ಸಮಸ್ಯೆಯೂ ಇದರಿಂದಾಗಿ ವಾಸಿಯಾಗಿದೆ. ಅಷ್ಟೇ ಅಲ್ಲ ಉಪವಾಸವು ಕೊಲೆಸ್ಟ್ರಾಲ್ ಅನ್ನೂ ನಿಯಂತ್ರಣದಲ್ಲಿಡುತ್ತದೆ ಎನ್ನುತ್ತಾರೆ ತಜ್ಞರು.

ಚರ್ಮದ ಹೊಳಪು:

ವ್ಯಕ್ತಿಯು ಸೇವಿಸುವ ಆಹಾರ ಮತ್ತು ಪಾನೀಯ ಆತನ ಚರ್ಮದ ಬಣ್ಣವನ್ನು ಸೂಚಿಸುತ್ತದೆ. ಕರಿದ ಮಸಾಲೆಯುಕ್ತ ಆಹಾರವು ಚರ್ಮದ ಹೊಳಪನ್ನು ಕಸಿದುಕೊಳ್ಳುತ್ತದೆ. ಮೊಡವೆಗಳಂತಹ ಸಮಸ್ಯೆಗಳಿಗೂ ಕಾರಣವಾಗಬಹುದು. ಉಪವಾಸದ ಸಮಯದಲ್ಲಿ ದೇಹದಲ್ಲಿನ ವಿಷಕಾರಿ ಅಂಶಗಳು ಹೊರ ಬಂದು ಕಳೆದುಹೋದ ತ್ವಚೆಯ ಹೊಳಪು ಮರಳಿ ತರುತ್ತದೆ.

ಉಪವಾಸ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳದಿದ್ದರೆ, ಉಪವಾಸ ಪಾಲನೆ ಕೂಡ ವಿಫಲವಾಗಬಹುದು. ಉಪವಾಸ ಸಮಯದಲ್ಲಿ ಗಮನಿಸಬೇಕಾದ ಅಂಶ:

ಮೊದಲು ಉಪವಾಸವನ್ನು ಯಾವಾಗ ಮಾಡಬೇಕು, ಯಾವ ಉದ್ಧೇಶಕ್ಕಾಗಿ ಮಾಡಬೇಕು ಎಂಬುದು ಮುಖ್ಯ. ನಿರ್ಣಯವಿಲ್ಲದ ಉಪವಾಸ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.

ಮೊದಲ ಬಾರಿಗೆ ಉಪವಾಸ ಮಾಡುವ ಜನರು ಕಡಿಮೆ ಅಥವಾ ಕಡಿಮೆ ಅವಧಿಯ ಉಪವಾಸದಿಂದ ಪ್ರಾರಂಭಿಸಬೇಕು.

ಉಪವಾಸದ ವೇಳೆ ದೇಹದ ಜೊತೆಗೆ ಮನಸ್ಸಿನ ಸಂಯಮವೂ ಅಗತ್ಯ. ಉಪವಾಸ ಮಾಡುವಾಗ, ಯಾವುದೇ ಇಷ್ಟಪಟ್ಟ ತಿಂಡಿ ಕಂಡೊಡನೆ ಅದನ್ನು ಸ್ವೀಕರಿಸುವ ಮನೋಭಾವ ಇರಬಾರದು.

ಉಪವಾಸದ ಸಮಯದಲ್ಲಿ ಲಘುವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು.

ವ್ರತ ಎಂದರೆ ದೇವರಿಗೆ ಸ್ವಲ್ಪ ಸಮಯವನ್ನು ಮೀಸಲಿಡುವುದು ಆಗಿರುವುದರಿಂದ ಉಪವಾಸದ ಸಮಯದಲ್ಲಿ ದೇವರನ್ನು ಮಾತ್ರ ಸ್ಮರಿಸಬೇಕು. ಉಪವಾಸದ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ತಪ್ಪು ಆಲೋಚನೆಗಳನ್ನು ತರಬಾರದು.

ಉಪವಾಸ ಸಮಯದಲ್ಲಿ ಕೋಪಗೊಳ್ಳಬಾರದು, ಕೋಪದಲ್ಲಿದ್ದ ಸಮಯದಲ್ಲಿ ನಿಂದನೀಯ ಪದಗಳು ಬಾಯಿಯಿಂದ ಹೊರಬರಬಹುದು. ಇದರಿಂದಾಗಿ ಸಂಪೂರ್ಣ ಉಪವಾಸವು ವಿಫಲಗೊಳ್ಳುತ್ತದೆ.

ಉಪವಾಸದ ಸಮಯದಲ್ಲಿ ಬ್ರಹ್ಮಚರ್ಯವನ್ನು ಪಾಲಿಸುವುದು ಬಹಳ ಮುಖ್ಯ ಮಹಿಳೆಯರು ಋತುಚಕ್ರದ ಸಮಯದಲ್ಲಿ ಉಪವಾಸ ಮಾಡಬಾರದು. ಇದು ದೈಹಿಕ ಮತ್ತು ಮಾನಸಿಕವಾಗಿ ಒಳ್ಳೆಯದಲ್ಲ.

ಅನಾರೋಗ್ಯ, ಗರ್ಭಧಾರಣೆ ಅಥವಾ ಸಾಮರ್ಥ್ಯದ ಕೊರತೆ ಇರುವ ಸಂದರ್ಭದಲ್ಲಿ ಉಪವಾಸ ಮಾಡಬಾರದು ಎಂಬುದು ತಜ್ಞರ ಸಲಹೆ.

ಹೊಟ್ಟೆಯ ತೊಂದರೆಯಿಂದ ಬಳಲುವವರು, ಮೂತ್ರ ಪಿಂಡದ ರೋಗಿಗಳು, ಲಿವರ್ ತೊಂದರೆಯಿಂದ ಇರುವವರು, ಚರ್ಮರೋಗದಿಂದ ಬಳಲುವವರಿಗೆ ಉಪವಾಸ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ.

ಆದರೆ ಸಕ್ಕರೆ ಕಾಯಿಲೆ, ಕ್ಷಯ ರೋಗಿಗಳು, ನರದೌರ್ಬಲ್ಯವಿರುವವರು, ಹೃದ್ರೋಗಿಗಳು, ಕಡಿಮೆ ರಕ್ತದ ಒತ್ತಡ ಇರುವವರು ಉಪವಾಸ ಮಾಡುವುದು ಬೇಡ. ಸಂಪೂರ್ಣ ಉಪವಾಸ ಮಾಡಲು ಸಾಧ್ಯವಿಲ್ಲದವರು ಹಣ್ಣಿನರಸ, ಎಳನೀರು, ಗಂಜಿಯಂತಹ ದ್ರವಗಳನ್ನು ಸೇವಿಸಬಹುದು.ಉಪವಾಸವನ್ನು ಮುರಿದ ತಕ್ಷಣ ಘನ ಅಥವಾ ಜೀರ್ಣಕ್ರಿಯೆಗೆ ಕಷ್ಟಕರ ಎನಿಸುವ ಆಹಾರವನ್ನು ಸೇವಿಸಬೇಡಿ.

ಉಪವಾಸ ಒಳ್ಳೆಯದೆಂದು ಅತಿಯಾಗಿ ಮಾಡಬಾರದು. ಅತಿಯಾದ ಉಪವಾಸ ಮಾಡುವುದರಿಂದ ಬಾಯಿ ವಾಸನೆ, ಮೈ ಕೈನೋವು, ಬಾಯಿ ರುಚಿ ಇಲ್ಲದಿರುವುದು, ಹೊಟ್ಟೆನೋವು, ಸುಸ್ತು, ತಲೆಸುತ್ತು ಉಂಟಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next