Advertisement

ಇ-ಮಾನಸಿಕ ಆರೋಗ್ಯ’ದ ಪ್ರಾಮುಖ್ಯ

02:57 PM Oct 25, 2020 | Suhan S |

ಕಳೆದ ಕೆಲವು ದಶಕಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನಗಳು ತಮ್ಮ ವೈವಿಧ್ಯಮಯ ಅನ್ವಯಿಕ (ಆ್ಯಪ್ಲಿಕೇಶನ್‌)ಗಳ ಮೂಲಕ ನಮ್ಮ ಜೀವನದ ವಿವಿಧ ಆಯಾಮಗಳಲ್ಲಿ ಪ್ರವೇಶ ಪಡೆದಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಹಲವಾರು ರೀತಿಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಂಥವುಗಳಲ್ಲಿ ದಾಖಲೆಗಳನ್ನು ಕಾಪಿಡುವುದು, ಮಾಹಿತಿಗಳನ್ನು ಜನಸಾಮಾನ್ಯರಿಗೆ ಒದಗಿಸುವುದು ಸೇರಿವೆ. ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚುತ್ತಿರುವುದು ಮತ್ತು ಜನರು ಡಿಜಿಟಲ್‌ ಆಗಿ ಹೆಚ್ಚು ಅಕ್ಷರಸ್ಥರಾಗುತ್ತಿರುವುದನ್ನು ಗಮನಿಸಿದರೆ, ಇ-ಆರೋಗ್ಯ ಸೇವೆಯು ಬಹುಮುಖ್ಯ ಪಾತ್ರವನ್ನು ನಿರ್ವಹಿಸಲಿರುವುದು ಮತ್ತು ಭಾರತೀಯರಿಗೆ ಅದರಲ್ಲೂ ಗ್ರಾಮೀಣ ಭಾಗದಲ್ಲಿಯ ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿರುವುದು ಅರಿವಿಗೆ ಬರುತ್ತದೆ.

Advertisement

ಕೋವಿಡ್‌-19 ಸೋಂಕು ರೋಗದ ಪ್ರಸರಣವು ಹೆಚ್ಚುತ್ತಿದ್ದು, ಅದು ಆರೋಗ್ಯ ಸೇವಾ ಕ್ಷೇತ್ರ ಮತ್ತು ಅದರ ಸಂಪನ್ಮೂಲಗಳ ಮೇಲೆ ಹೊಸ ಹೊಸ ಸವಾಲುಗಳನ್ನು ಇರಿಸುತ್ತಿದೆ. ಪ್ರಯಾಣಕ್ಕೆ ನಿರ್ಬಂಧಗಳು ಮತ್ತು ಸಾಮಾಜಿಕ ಅಂತರದಂತಹ ಮುನ್ನೆಚ್ಚರಿಕೆ ಕ್ರಮಗಳು ಸದ್ಯಕ್ಕಂತೂ ಹಿಂದೆಗೆಯುವ ಲಕ್ಷಣಗಳು ಇಲ್ಲವಾಗಿದ್ದು, ಇವು ಜನರ ಆರೋಗ್ಯ ಸೇವಾ ಅಗತ್ಯಗಳನ್ನು ತತ್‌ಕ್ಷಣಕ್ಕೆ ಪೂರೈಸಿಕೊಳ್ಳುವುದಕ್ಕೆ ಸಾಕಷ್ಟು ಅಡೆತಡೆಗಳನ್ನು ಒಡ್ಡಿವೆ ಮಾನಸಿಕ ಅನಾರೋಗ್ಯಗಳನ್ನು ಹೊಂದಿರುವವರಿಗೂ ಈ ಬದಲಾವಣೆಯು ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದೆ.

ಸದ್ಯದ ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಜಾಗತಿಕವಾಗಿ ಸ್ವೀಕರಿಸಿಕೊಳ್ಳಲಾಗಿರುವ ಒಂದು ಕ್ರಮವೆಂದರೆ, ಲಘು ಅನಾರೋಗ್ಯಗಳು, ಸಮಸ್ಯೆಗಳಿಗೆ ಇ-ಸಮಾಲೋಚನೆ ಅಥವಾ ಇ-ಕನ್ಸಲ್ಟೆಶನ್‌ ಜಾರಿಗೆ ತಂದಿರುವುದು. ನಿಸ್ಸಂಶಯವಾಗಿ ಇದು ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಅಗತ್ಯವಾದ ಆರೈಕೆ-ಸಮಾಲೋಚನೆಯ ನಡುವೆ ಸೇತುವೆ ಬೆಸೆಯಲು ಕಾರಣವಾಗಿದೆ. ಇತರ ಅನಾರೋಗ್ಯಗಳಿಗೆ ಹೋಲಿಸಿದಲ್ಲಿ ಮಾನಸಿಕ ಅನಾರೋಗ್ಯ ವಿಚಾರಗಳಲ್ಲಿ ದೈಹಿಕ ಪರೀಕ್ಷೆಯ ಅಗತ್ಯವು ಕಡಿಮೆಯಾಗಿದ್ದು, “ಇ-ಮಾನಸಿಕ ಆರೋಗ್ಯ’ ಅಥವಾ “ಇ-ಮೆಂಟಲ್‌ ಹೆಲ್ತ್‌’ ಪರಿಹಾರವು ಆರೋಗ್ಯ ಸೇವಾ ಪೂರೈಕೆದಾರರಿಗೂ ಗ್ರಾಹಕರಿಗೂ ಉತ್ತಮ ಆಯ್ಕೆಯಾಗಿ ಒದಗಿಬಂದಿದೆ.

ಪ್ರಸ್ತುತ ಕೋವಿಡ್‌ -19 ಸಾಂಕ್ರಾಮಿಕವು ಆರೋಗ್ಯ ಸೇವೆಗಳನ್ನು ಡಿಜಿಟಲ್‌ ಸ್ವರೂಪದಲ್ಲಿ ಸ್ವೀಕರಿಸಲು ಅಗತ್ಯವಾದ ಸನ್ನಿವೇಶವನ್ನು ನಿರ್ಮಿಸಿಕೊಟ್ಟಿದೆ. ಸಾಂಕ್ರಾಮಿಕೋತ್ತರ ಕಾಲಘಟ್ಟದಲ್ಲಿಯೂ ಭಾರತದಂತಹ ದೇಶದ ಸೇವಾರಹಿತ ಪ್ರದೇಶಗಳಿಗೆ ಆರೋಗ್ಯ ಸೇವೆಯನ್ನು ಒದಗಿಸುವುದಕ್ಕೆ ತಂತ್ರಜ್ಞಾನದ ಅಳವಡಿಕೆಯು ಸಹಾಯ ಮಾಡಬಹುದು ಎಂಬ ಭರವಸೆಯನ್ನು ಈ ಬೆಳವಣಿಗೆಯು ಸ್ಪಷ್ಟಪಡಿಸಿದೆ.

 

Advertisement

ಡಾ| ಕೃತಿಶ್ರೀ ಸೋಮಣ್ಣ

ಕನ್ಸಲ್ಟಂಟ್‌ ಸೈಕಿಯಾಟ್ರಿಸ್ಟ್‌

ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next