Advertisement

ಸ್ತನಪಾನ ಮಹತ್ವ ನಿಮಗೆಷ್ಟು ಗೊತ್ತು

04:32 PM Jul 02, 2019 | keerthan |

ಹಾಲು ಹಣ್ಣಿಗಿಂತ ಜೇನು ತುಪ್ಪಕ್ಕಿಂತ
ವಾಲಾಡಿ ಬೆಳೆಯ ರಸ ಬಾಳೆ ಹಣ್ಣಿಗಿಂತ
ತಾಯವ್ವ ನಿನ್ನಾಲು ಕಡುರುಚಿ

Advertisement

ಈ ಜಾನಪದ ತ್ರಿಪದಿ ಕಡು ಸತ್ಯ ಎಲ್ಲರಿಗೂ ಗೊತ್ತಿರುವ ವಿಷಯ. ನವಜಾತು ಶಿಶುವಿಗೆ ತಾಯಿಯ ಹಾಲು ಅವಶ್ಯಕ. ಅದು ಅಮೃತವೂ ಹೌದು. ಅದಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲ. ಏಕೆಂದರೆ ಅದು ಪೌಷ್ಟಿಕ, ಸಂಪೂರ್ಣ ಸುರಕ್ಷಿತ, ಮತ್ತು ಸರಳವಾಗಿ ಜೀರ್ಣವಾಗುವ ಆಹಾರ ಅದು ತಾಯಿ ಮತ್ತು ಮಗು ಇಬ್ಬರ ಆರೋಗ್ಯವನ್ನು ಹೆಚ್ಚಿಸುತ್ತದೆ.

ತಾಯಿ ಹಾಲಿನಲ್ಲಿ ಏನೇನಿರುತ್ತದೆ
ತಾಯಿ ಹಾಲಿನಲ್ಲಿ ಮಗುವಿಗೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು ತಕ್ಕ ಪ್ರಮಾಣದಲ್ಲಿರುತ್ತವೆ. ಕಾರ್ಬೋಹೈಡ್ರೇಟ್‌ಗಳು, ಪ್ರೋಟಿನುಗಳು, ಮೇದಸ್ಸು , ಜೀವಸತ್ವಗಳು, ಲವಣಾಂಶ , ರೋಗನಿರೋಧಕ ಅಂಶಗಳು ಮತ್ತು ಮುಖ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ(87%) ನೀರಿನಾಂಶವಿರುತ್ತದೆ. ಇವೆಲ್ಲಾ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತವೆ.

ಮಗುವಿಗೆ ಲಾಭಗಳು
*ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಅವಶ್ಯಕ.
* ವಾಂತಿಭೇದಿ, ಮಲಬದ್ಧತೆ, ಅಲರ್ಜಿ, ಕಿವಿ ಸೋರುವಿಕೆ, ಪುಪ್ಪುಸದ ರೋಗಗಳನ್ನು ತಡೆಗಟ್ಟುತ್ತದೆ.
* ಮಗು ಬೇಗನೆ ನಡಿಗೆ ಕಲಿಯಲು ಸಹಾಯಕ.
* ಇಂಥ ಮಕ್ಕಳಲ್ಲಿ ಹೆಚ್ಚಿನ ಐಕ್ಯು(ಬುದ್ದಿಮಟ್ಟ) ಕಂಡು ಬಂದಿದೆ.
* ಭವಿಷ್ಯದಲ್ಲಿ ರಕ್ತದ ಕ್ಯಾನ್ಸರ್‌, ಸಕ್ಕರೆ ರೋಗ, ರಕ್ತದೊತ್ತಡ ಮತ್ತು ಬೊಜ್ಜುತನ ಬರದಂತೆ ನೋಡಿಕೊಳ್ಳುತ್ತದೆ.

ತಾಯಿಗೇನಪ್ಪ ಲಾಭ
* ಸ್ತನಪಾನ ತಾಯಿ ಮತ್ತು ಮಗು ಇಬ್ಬರ ನಡುವೆ ಬಾಂಧವ್ಯ ಬೆಳೆಸುತ್ತದೆ. ತಾಯಿಗಾಗುವುದು ಮಾನಸಿಕ ತೃಪ್ತಿ ಈ ದೈವದತ್ತ ಕೊಡುಗೆಯಿಂದ.
* ಬಾಣಂತಿಯಲ್ಲಿ ರಕ್ತಸ್ರಾವ ಕಡಿಮೆಗೊಳಿಸಿ ಗರ್ಭಾಶಯವನ್ನು ಸ ದೃಢಗೊಳಿಸಿ ಅದನ್ನು ಸಹಜ ಸ್ಥಿತಿಗೆ ತರಲು ಸಹಾಯ ಮಾಡುತ್ತದೆ.
* ಕೊಬ್ಬಿನಾಂಶ ಕರಗಿಸಲು ಮತ್ತು ಬೊಜ್ಜು ಇಳಿಸಲು ಸಹಾಯಕಾರಿ.
* ಗರ್ಭನಿರೋಧಕ ಕಾರ್ಯ ಮೊದಲು 6 ತಿಂಗಳು
* ಎದೆ ಹಾಲಿನಿಂದ ಗಂಟಾಗಿ ನೋವಾಗೋ ಸಾಧ್ಯತೆ ಕಡಿಮೆ.
* ಮುಂದೆ ಸ್ತನದ ಮತ್ತು ಅಂಡಾಶಯದ ಕ್ಯಾನ್ಸರ್‌ ಸಂಭವ ತಗ್ಗುತ್ತದೆ.

Advertisement

ಮಿಥ್ಯ: ತಾಯಿಯ ಸೌಂದರ್ಯ ಕಡಿಮೆಯಾಗುತ್ತದೆ.
ಸತ್ಯ: ಇಲ್ಲ ಕಾಂತಿ ಹೆಚ್ಚುತ್ತದೆ. ಸೌಂದರ್ಯದ ಮೇಲೆ ಪರಿಣಾಮ ಬೀರುವಂಥ ಬೇರೆ ಕಾರಣಗಳೂ ಇವೆ- ವಯಸ್ಸು, ಜೀನ್ಸ್‌ ಆಹಾರ ಮುಂತಾದವುಗಳು.
ಮಿಥ್ಯ: ಮೊದಲ ಹಾಲು ಕೆಟ್ಟದ್ದು, ಶುದ್ಧವಿರುವುದಿಲ್ಲ, ಅದನ್ನು ಹಿಂಡಿ ಚೆಲ್ಲಬೇಕು.
ಸತ್ಯ: ತಪ್ಪು ಮೊದಲು ಹಾಲು-ಇದು ಹಳದಿ ದ್ರವ-ಕೊಲೊಸ್ಟ್ರಮ್‌, ಇದಕ್ಕೆ ಸೊಂಕುಗಳಿಂದ ರಕ್ಷಿಸುವ ಶಕ್ತಿಯಿದೆ. ಇದು ರೋಗನಿರೋಧಕ ಲಸಿಕೆ, ಹುಟ್ಟಿದ ದಿನ ಕೊಡುವ ಚುಚ್ಚುಮದ್ದು ಇದ್ದ ಹಾಗೆ.
ಮಿಥ್ಯ: ಮೊದಲ ಎರಡು ದಿನ ಹಾಲೇ ಬರುವುದಿಲ್ಲ, ಅದಕ್ಕೆ ಮೊಲೆ ಹಚ್ಚಬೇಡಿ, ಮೇಲಿನ ಹಾಲು ಕೊಡಿ.
ಸತ್ಯ: ಇದು ತಪ್ಪು. ಹುಟ್ಟಿದ 20-60 ನಿಮಿಷ ಮಗು ಅತ್ಯಂತ ಚಟುವಟಿಕೆಯಿಂದ ಇರುತ್ತದೆ. ಮಗುವಿನ ಹೀರುವಿಕೆಯ ಪ್ರಕ್ರಿಯೆಯೂ ಹೆಚ್ಚಿರುತ್ತದೆ. ಹೀಗಾಗಿ ಎಷ್ಟು ಬೇಗ ಕುಡಿಸಲು ಪ್ರಾರಂಭಿಸುತ್ತೀರೋ ಅಷ್ಟು ಬೇಗ ತಾಯಿ-ಮಗುವಿನ ಮಧ್ಯೆ ಸಂರ್ಪಕವೇರ್ಪಟ್ಟು ಹಾಲು ಉತ್ಪತ್ತಿಯಾಗಿ, ಸರಾಗವಾಗಿ ಹರಿಯುವುದನ್ನು ಪ್ರಚೋದಿಸುತ್ತದೆ.
ಮಿಥ್ಯ: ಮಗುವಿಗೆ ಮೇಲಿಂದ ಮೇಲೆ ಜೇನುತುಪ್ಪ, ನೀರು, ಸಕ್ಕರೆ ನೀರು ಕುಡಿಸ್ತಾ ಇರಬೇಕು.
ಸತ್ಯ: ತಪ್ಪು, ತಾಯಿ ಹಾಲಲ್ಲಿ ನೀರಿನಾಂಶ ಹೆಚ್ಚಗಿರುವುರಿಂದ ನೀರು ಕುಡಿಸುವ ಅವಶ್ಯಕತೆ ಇರುವುದಿಲ್ಲ, ಮಗುವಿಗೆ ಬೇಕಾಗುವಷ್ಟು ಸಕ್ಕರೆ, ಸಸಾರಜನಕ, ಮೇದಸ್ಸು ಇರುವುದರಿಂದ ಬೇರೇನೂ ಕೊಡುವ ಅಗತ್ಯವಿಲ್ಲ.
ಮಿಥ್ಯ: ಗಂಡು ಮಗುವಿನ ತಾಯಿ ನೀರು ಹೆಚ್ಚು ಕುಡಿಯಬಾರದು, ಮಗುವಿಗೆ ಹೊಟ್ಟೆ ನೋವಾಗುತ್ತೆ
ಸತ್ಯ: ತಪ್ಪು. ನೀರು ಸಾಕಷ್ಟು ಕುಡಿಯಬೇಕು, 2-3ಲೀಟರ್‌ ತಾಯಿಯ ಹಾಲುತ್ಪತ್ತಿಗೆ ನೀರಿನಾಂಶ ಮುಖ್ಯ.
ಮಿಥ್ಯ: ತಾಯಿಗೆ ಜ್ವರ ಬಂದಾಗ ಮೊಲೆಯ ಸೋಂಕಿರುವಾಗ ಹಾಲು ಕುಡಿಸಬಾರದು
ಸತ್ಯ: ತಪ್ಪು ಕಲ್ಪನೆ ಜ್ವರ ಬಂದಾಗಲೂ ಕೂಡ ಕುಡಿಸಬಹುದು, ತಾಯಿ ಕೆಮ್ಮು-ಶೀನುವಾಗ ಮಗುವಿಗೆ ತಾಕದ ಹಾಗೆ ನೋಡಿಕೊಳ್ಳಬೇಕು. ತಾಯಿ ತುಂಬಾ ಬಳಲುತ್ತಿದ್ದರೆ, ಮನೆಯಲ್ಲಿರುವ ಸಹಾಯಕರು ಮೊಲೆ ಹಿಂಡಿ ಹಾಲು ಕುಡಿಸಬಹುದು.ಇನ್ನು ಬಿರುಕಾಲ ಮೊಲೆ ಮೂಗು(ಕ್ರಾಕ್ಡ್ ನಿಪ್ಪಲ್‌) ಹಾಲು ಗಂಟು ಮೊಲೆಯ ಇನೆ³ಕ್ಷನ್‌ (ಮ್ಯಾಸ್ಟೈಟಿಸ್‌ ಅಬ್ಬೆಸ್‌) ಆದಾಗ ಆ ಕಡೆ ಮೊಲೆಯಿಂದ ತಾತ್ಕಾಲಿಕವಾಗಿ ಹಾಲುಣಿಸುವುದು ನಿಲ್ಲಿಸಬೇಕು. ಚಿಕಿತ್ಸೆಯಾಗಿ ವಾಸಿಯಾದ ನಂತರ ಮತ್ತೆ ಹಾಲುಣಿಸಬಹುದು.ಟೈಫಾಯಿಡ್‌, ಮಲೇರಿಯಾ, ಟಿ.ಬಿ. ಜಾಂಡೀಸ್‌,
ಕುಷ್ಟ ರೋಗ, ಮೊಲೆಯ ಕ್ಯಾನ್ಸರ್‌, ಎಚ್‌.ಐ.ವಿ. ಇದ್ದಾಗಲೂ ಕೂಡಾ ಹಾಲು ಕುಡಿಸಬಹುದು. ಎಚ್‌ಐವಿ ಸೋಂಕು ಬರುತ್ತದೆ. ತಾಯಿಂದ ಮಗುವಿಗೆ ಹೆಚ್ಚಾಗಿ ಜನನದ ಸಮಯದಲ್ಲಿ, ಹಾಲಿನಿಂದ ಬರುವುದು ಕಡಿಮೆ ಕಂಡು ಬಂದಿದೆ. ಹಾಲು ಕೊಡದಿದ್ದಾಗ ಶಿಶು ವಾಂತಿ,ಭೇದಿ ಮತ್ತು ಇತರ ಸೊಂಕುಗಳಿಂದ ಮರಣ ಹೊಂದುವ ಸಾಧ್ಯತೆ ಕಂಡು ಬಂದಿದೆ.ಹಾಲು ಕುಡಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಮಿಥ್ಯ: ಕೆಲಸಕ್ಕೆ ಹೋಗುವ ತಾಯಂದಿರು ಹಾಲು ಕುಡಿಸಲಾಗುವುದಿಲ್ಲ.
ಸತ್ಯ: ಇಲ್ಲ, ಕೆಲಸಕ್ಕೆ ಹೋಗುವ ತಾಯಂದಿರು ಹಾಲು ಸ್ವತ್ಛವಾದ ಬಟ್ಟಲಲ್ಲಿ ಹಿಂಡಿಡಬಹುದು, ಹಿಂಡಿದ ಹಾಲು ಸುಮಾರು 8 ಗಂಟೆಗಳ ಕಾಲ ಫ್ರೀಡ್ಜ್ ಹೊರಗಡೆ ಇಡಬಹುದು.
ಮಿಥ್ಯ: ಹಾಲು ಕುಡಿಸುವುದರಿಂದ ಗರ್ಭನಿರೋಧಕ ಕಾರ್ಯ ಸಂಪೂರ್ಣವಿರುತ್ತದೆ, ಬೇರೆ ಗರ್ಭನಿರೋಧಕ ಮಾತ್ರೆ/ಸಾಧನ ಬೇಕಾಗುವದಿಲ್ಲ.
ಸತ್ಯ: ಸ್ತನಪಾನ ಸಂಪೂರ್ಣವಾಗಿ ಅಂದರೆ ಸತತವಾಗಿ ಹಗಲು-ರಾತ್ರಿ ಮಾಡಿಸುವುದರಿಂದ 6 ತಿಂಗಳ ವರೆಗೆ ಗರ್ಭ ನಿರೋಧಕ ಕಾರ್ಯ ಇರುತ್ತದೆ. ಅದಾಗದೇ ಹೋದಲ್ಲಿ ತಾಯಿಗೆ ಋತುಸ್ರಾವವಾಗದೇ ಗರ್ಭ ನಿಲ್ಲುವ ಸಾಧ್ಯತೆ ಇದೆ. ಅದಕ್ಕಾಗಿ ಬೇರೆ ಗರ್ಭನಿರೋಧಕ ಸಾಧನ ವೈದ್ಯರನ್ನು ಕೇಳಿ ಉಪಯೋಗಿಸಬೇಕು.
ಹಾಲು ಕುಡಿಸುವ

ವಿಧಾನ- ಸೂಚನೆಗಳು
* ಮೊಲೆಯನ್ನು ಬಿಸಿನೀರಿನಿಂದ ತೊಳೆದುಕೊಳ್ಳಬೇಕು.
* ಮೊಲೆ ಮತ್ತು ಅದರ ಹಿಂದಿನ ಕಪ್ಪು ಭಾಗ ಆದಷ್ಟು ಮಗುವಿನ ಬಾಯಿಯೊಳಗಿರಬೇಕು.
* ತಾಯಿ ಮಗುವನ್ನು ಎರಡು ಕೈಗಳಿಂದ ಅಪ್ಪಿಕೊಂಡಿರಬೇಕು. ಮಗುವಿನ ಹೊಟ್ಟೆ ತಾಯಿಯ ಹೊಟ್ಟೆಗೆ ಹತ್ತಿರಬೇಕು.
* ತಾಯಿಯ ಗಮನ ಸದಾ ಮಗುವಿನ ಮುಖದ ಕಡೆಗೆ ಇರಬೇಕು. ಮಗುವಿನ ಮೂಗು ಮೊಲೆಯಿಂದ ಬ್ಲಾಕ್‌ ಆಗದಿರೋ ಹಾಗೆ ನೋಡಿಕೊಳ್ಳಬೇಕು.
* ಮಗು ಸರಿಯಾಗಿ ಮೊಲೆ ಹಿಡಿದಿದ್ದರೆ ಅದು ಹಾಲು ಸರಾಗವಾಗಿ ಕುಡಿಯುತ್ತದೆ. ಹಾಗೂ ಅದು ನುಂಗುವಾಗ “ಕ’ ಅನ್ನು ಶಬ್ದ ಬರುತ್ತದೆ.
* ತಾಯಿ ಕುಳಿತುಕೊಂಡು ಅಥವಾ ಸಿಸೇರಿಯನ್‌ ಆದಾಗ ಮಲಗಿ ಕೂಡಾ ಹಾಲು ಕುಡಿಸಬಹುದು.

ತಾಯಿಯ ಆಹಾರ
ಈ ಸಮಯದಲ್ಲಿ ತಾಯಿಗೆ ದಿನಾಲು 500ಗ್ರಾಂ ನಷ್ಟು ಹೆಚ್ಚಿನ ಶಕ್ತಿಯುತ ಆಹಾರ ಬೇಕು. 25 ಗ್ರಾಂ ನಷ್ಟು ಪೊಟಿನ್‌, 15 ಗ್ರಾಂ ಫ್ಯಾಟ್ಸ್‌ , ವಿಟಮಿನ್‌ಗಳು, ಕ್ಯಾಲ್ಸಿಯಮ್‌, ಐರನ್‌ಮುಂತಾದ ಲವಣಾಂಶಗಳು ಬೇಕಾಗುತ್ತದೆ.

ಪೌಷ್ಟಿಕ ಆಹಾರ
ಧವಸ ಧಾನ್ಯಗಳು, ಕಾಳು, ಬೇಳೆಗಳು, ಹಸಿರು ತರಕಾರಿಗಳು, ಹಣ್ಣುಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೊಟ್ಟೆ, ಮೀನು, ಮಾಂಸ, ಆಹಾರದಲ್ಲಿ ಎಲ್ಲ ವಿಟಮಿನ್‌ ಮಿನರಲ್ಸ್‌ ಪೂರೈಕೆಯಾಗುವುದಿಲ್ಲ, ಅದಕ್ಕಾಗಿ ಕ್ಯಾಲ್ಸಿಯಂ, ಐಯರ್ನ್ ಮತ್ತು ಮಲ್ಟಿ ವಿಟಮಿನ್‌ ಮಾತ್ರೆಗಳು 3 ತಿಂಗಳು ತೆಗೆದುಕೊಳ್ಳಬೇಕು.2-3 ಲೀಟರ್‌ ನೀರು ಕುಡಿಯಬೇಕು. ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು.
* ವೈದ್ಯರ ಸಲಹೆ ಇಲ್ಲದೆ ಬೇರೆ ಮಾತ್ರೆ ತೆಗೆದುಕೊಳ್ಳಬಾರದು. ಗರ್ಭನಿರೋಧಕ ಮಾತ್ರೆಗಳಿಂದ ಹಾಲು ಉತ್ಪತ್ತಿ ಕಡಿಮೆಯಾಗುತ್ತೆ. ಇದಕ್ಕಾಗಿ ವೈದ್ಯರ ಸಲಹೆ ಮೇರೆಗೆ ಚುಚ್ಚುಮದ್ದು/ಕಾಪರ್‌-ಟಿ/ಪಿಓಪಿ ಮಾತ್ರೆ ತೆಗೆದುಕೊಳ್ಳಬಹುದು. ಎರಡು ಮಕ್ಕಳಾದವರಂತೂ ಇದೇ ಸಮಯದಲ್ಲಿ ಆಪರೇಶನ್‌ ಮಾಡಿಸಿಕೊಂಡು ವಿಶ್ರಾಂತಿ ಪಡೆಯಬಹುದು.
* ಶೇಖರಿಸಿಟ್ಟ ತಾಯಿ ಹಾಲನ್ನು ಅನಾಥ ಶಿಶುಗಳಿಗೆ ಮಹಾರಾಷ್ಟ್ರ ರಾಜ್ಯದಲ್ಲಿ ಕೊಡುತ್ತಿದ್ದಾರೆ. ಇದರಿಂದ ಎಷ್ಟು ಮುಖ್ಯ ತಾಯಿ ಹಾಲು ಎನ್ನುವುದು ಅರ್ಥವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಅಗಸ್ಟ್‌ ಮೊದಲನೇ ವಾರ ವಿಶ್ವ ಸ್ತನಪಾನ ಸಪ್ತಾಹ ಎಂದು ಆಚರಿಸುತ್ತದೆ. ತಾಯಿಗೆ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳ ಮೂಲಕ ತರಬೇತಿ ಪಡೆದ ಕೆಲ ಮಹಿಳೆಯರು ಹೊಸ ತಾಯಂದಿರಿಗೆ ಸ್ತನಪಾನ ಸಲಹೆ -ಸಹಾಯ ನೀಡುತ್ತಾ¤ರೆ. ಇನ್ನು ಇಷ್ಟೆಲ್ಲ ಮಾಹಿತಿ ತಿಳಿದುಕೊಂಡು ನೀವು ನಿಮ್ಮ ಮನೆಯವರಿಗೆ ಅಕ್ಕ-ಪಕ್ಕದವರಿಗೆ, ಹೊಸತಾಯಂದಿರಿಗೆ ತಿಳಿಸಿಕೊಟ್ಟರೆ ಸಾರ್ಥಕವಾದಂತೆ ಸಂದೇಹವಿದ್ದಲ್ಲಿ ವೈದ್ಯರನ್ನು ಭೇಟಿ ಮಾಡಿ!


ಡಾ| ಜ್ಯೋತಿ ವಿಶ್ವನಾಥ ಶಿಂಧೋಳಿಮಠ

ಕನ್ಸ‌ಲ್ಟೆಂಟ್‌ ಮತ್ತು ಡೈರೆಕ್ಟರ್‌, ಸ್ತ್ರೀರೋಗ ಪ್ರಸೂತಿ ಲ್ಯಾಪರೋಸ್ಕೋಪಿಕ್‌ ಮತ್ತು ಇನ್‌ಫರ್ಟಿಲಿಟಿ ತಜ್ಞರು

Advertisement

Udayavani is now on Telegram. Click here to join our channel and stay updated with the latest news.

Next