Advertisement

ಭೂತಾನ್‌ನಿಂದ ಅಡಿಕೆ ಆಮದು; ಧಾರಣೆ ಕುಸಿತ ಭೀತಿ; ಬೆಳೆಗಾರರಲ್ಲಿ ಆತಂಕ

11:49 PM Sep 30, 2022 | Team Udayavani |

ಪುತ್ತೂರು: ಭೂತಾನ್‌ನಿಂದ ಭಾರತಕ್ಕೆ ವಾರ್ಷಿಕವಾಗಿ 17 ಸಾವಿರ ಟನ್‌ ಹಸಿ ಅಡಿಕೆಯನ್ನು ಕನಿಷ್ಠ ಆಮದು ಬೆಲೆ ನಿರ್ಬಂಧ ಇಲ್ಲದೆ ಆಮದು ಮಾಡಿಕೊಳ್ಳಲು ಕೇಂದ್ರ ಸರಕಾರವು ಒಪ್ಪಿಗೆ ಸೂಚಿಸಿರುವುದು ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸುವ ಆತಂಕ ಎದುರಾಗಿದೆ.

Advertisement

ಕೆಲವು ತಿಂಗಳಿನಿಂದ ಧಾರಣೆಯು ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಬೆಳೆಗಾರರು ನೆಮ್ಮದಿಯಲ್ಲಿ ಇರುವಾಗಲೇ ಕೇಂದ್ರ ಸರಕಾರದ ಈ ತೀರ್ಮಾನ ನಿದ್ದೆಗೆಡಿಸಿದೆ. ಪೂರಕವೆಂಬಂತೆ ಶುಕ್ರವಾರ ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತ ಕಂಡಿದ್ದು ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 482 ರೂ. ಇದ್ದರೆ ಹಳೆ ಅಡಿಕೆಗೆ 565 ರೂ. ಇತ್ತು. ಕ್ಯಾಂಪ್ಕೋದಲ್ಲಿ ಹೊಸ ಅಡಿಕೆಗೆ 475 ರೂ., ಹಳೆ ಅಡಿಕೆಗೆ 565 ರೂ. ಇತ್ತು. ಹೊರ ಮಾರುಕಟ್ಟೆಯ ಹೊಸ ಅಡಿಕೆ ಧಾರಣೆ 500 ರೂ.ತನಕ ಏರಿಕೆ ಕಂಡಿತ್ತು.

ಏನಿದು ಆಮದು
ದೇಶೀಯ ಅಡಿಕೆಗೆ ಮನ್ನಣೆ ಸಿಗಬೇಕೆಂಬ ದೃಷ್ಟಿಯಲ್ಲಿ ವಿದೇಶದಿಂದ ಭಾರತಕ್ಕೆ ಆಮದಾಗುವ ಅಡಿಕೆಗೆ ಪ್ರತಿ ಕೆ.ಜಿ.ಗೆ 251 ರೂ. ಕನಿಷ್ಠ ಆಮದು ಬೆಲೆ ನಿಗದಿ ಪಡಿಸಲಾಗಿತ್ತು. ಆದರೆ ಈ ನಿಯಮ ಉಲ್ಲಂಘಿಸಿ ಭೂತಾನ್‌ನಿಂದ ಆಮದು ಬೆಲೆ ವಿಧಿಸದೆ ಅಡಿಕೆ ಆಮದಿಗೆ ನಿರ್ಧರಿಸಲಾಗಿದೆ. ಇದು ಹಲವು ಅಡ್ಡ ಪರಿಣಾಮ ಸೃಷ್ಟಿಸುವ ಭೀತಿ ಉಂಟಾಗಿದೆ. ಈ ಹಿಂದೆ ದಕ್ಷಿಣ ಏಷ್ಯಾ ಉಚಿತ ವ್ಯಾಪಾರ ಒಪ್ಪಂದ ಹಿನ್ನೆಲೆಯಲ್ಲಿ ಅಡಿಕೆ ಆಮದಿಗೆ ಸರಕಾರ ಒಪ್ಪಿಗೆ ನೀಡಿದ ಪರಿಣಾಮ ಅಡಿಕೆ ಮಾರುಕಟ್ಟೆಯಲ್ಲಿ ದೇಶೀಯ ಅಡಿಕೆ ಧಾರಣೆ ಪಾತಾಳಕ್ಕೆ ಕುಸಿದಿತ್ತು. ಅಂತಹ ಸ್ಥಿತಿ ಮತ್ತೊಮ್ಮೆ ಉಂಟಾಗುವ ಆತಂಕ ಬೆಳೆಗಾರರದ್ದು.

ಆಮದು ಹಾಗೂ ಪರಿಣಾಮ
ಭೂತಾನ್‌ ದೇಶದಲ್ಲಿ ಬಂದರುಗಳಿ ಲ್ಲದಿರುವುದರಿಂದ ಅಡಿಕೆಯನ್ನು ಭೂಮಾರ್ಗದಿಂದ ತಂದ ಬಳಿಕ ಪಶ್ಚಿಮ ಬಂಗಾಲದ ಜಯಗಾಂವ್‌ ಬಂದರಿನಿಂದ ಆಮದು ಮಾಡಿಕೊಳ್ಳಬೇಕು. ಇದರಿಂದ ಸಾಗಣೆ ವೆಚ್ಚ ಹೆಚ್ಚಾಗುತ್ತದೆ ಅನ್ನುವ ವಾದ ಇದೆ. ತಜ್ಞರ ಪ್ರಕಾರ ಭೂತಾನ್‌ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಅಡಿಕೆ ಬೆಳೆ ಬೆಳೆಯಲು ಪ್ರಾರಂಭಿಸಿದ್ದು ಅಲ್ಲಿನ ಅಡಿಕೆ ಗುಣಮಟ್ಟದಿಂದ ಕೂಡಿಲ್ಲ. ಒಂದು ಕ್ವಿಂಟಾಲ್‌ ಹಸಿ ಅಡಿಕೆಯಲ್ಲಿ ಕಾಲು ಭಾಗಕ್ಕಿಂತಲೂ ಕಡಿಮೆ ಒಣ ಅಡಿಕೆ ಸಿಗುವುದರಿಂದ ಮಾರುಕಟ್ಟೆಯಲ್ಲಿ ಪರಿಣಾಮ ಬೀರಲಾರದು ಎನ್ನುವ ಅಭಿಪ್ರಾಯವೂ ಇದೆ.

ಭೂತಾನ್‌ನಿಂದ ಹಸಿ ಅಡಿಕೆ ಆಮದಿಗೆ ಅನುಮತಿ ನೀಡಿದ್ದು ಇದರಿಂದ ಕರ್ನಾಟಕ ಮತ್ತು ಕೇರಳ ರಾಜ್ಯದ ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯ ಇಲ್ಲ. ಇದು ಅಡಿಕೆ ದರದ ಸ್ಥಿರತೆಗೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ಇದರಿಂದ ದೇಶೀಯ ಗುಣಮಟ್ಟದ ಚಾಲಿ ಅಡಿಕೆಗೆ ಯಾವುದೇ ತೊಂದರೆ ಇಲ್ಲ. ಈ ಅಧಿಸೂಚನೆಯ ಅನುಷ್ಠಾನದಿಂದ ದೇಶೀಯ ಮಾರುಕಟ್ಟೆಗೆ ಯಾವುದೇ ತೊಂದರೆ ಇಲ್ಲದಿದ್ದರೂ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯಂತೆ ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರದ ಸಮಗ್ರ ನೀತಿಗೆ ವ್ಯತಿರಿಕ್ತ ಪರಿಣಾಮ ಬೀರುವ ಕುರಿತು ವಾಣಿಜ್ಯ ಸಚಿವರ ಗಮನಕ್ಕೆ ತರಲಾಗಿದೆ.
– ಕಿಶೋರ್‌ ಕುಮಾರ್‌ ಕೊಡ್ಗಿ, ಕ್ಯಾಂಪ್ಕೋ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next