ಮಡಿಕೇರಿ: ರಾಜ್ಯ ಸಹಕಾರ ಬ್ಯಾಂಕ್‌ಗಳು ಗ್ರಾಮೀಣ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ಮಾನ್ಯತೆ ಪಡೆದಿದ್ದು, ಸಹಕಾರ ಬ್ಯಾಂಕ್‌ಗಳು ಸಮಾಜದ ಅಭಿವೃದ್ಧಿಗೆ ಮತ್ತಷ್ಟು ಯೋಜನೆ ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಎನ್.ಗಂಗಣ್ಣ ಅವರು ಸಲಹೆ ಮಾಡಿದ್ದಾರೆ.
ರಾಜ್ಯ ಸಹಕಾರ ಮಹಾ ಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಹೋಟೆಲ್ ಕೂರ್ಗ್ ಇಂಟರ್ ನ್ಯಾಷನಲ್‌ನಲ್ಲಿ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರಿಗೆ ಗುರುವಾರ ನಡೆದ ರಾಜ್ಯ ಮಟ್ಟದ ವಿಶೇಷ ತರಬೇತಿ ಉಪನ್ಯಾಸ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರು ಮತ್ತು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷರಾದ ಎ.ಕೆ.ಮನುಮುತ್ತಪ್ಪ ಅವರು ಮಾತನಾಡಿ ಜಿಲ್ಲೆಯ ಸಹಕಾರ ಬ್ಯಾಂಕ್‌ಗಳು ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ. ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್‌ನ ನಿರಾತರಿಗೆ ಪರಿಹಾರ ನೀಡಿದೆ. ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸಿದೆ ಎಂದರು.
ರಾಜ್ಯ ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕ ಶಶಿಧರ ಎಲೆ ಅವರು ಸಹಕಾರಿ ಸಂಘಗಳಲ್ಲಿ ಪರಿಣಾಮಕಾರಿ ಆಡಳಿತ ಮತ್ತು ನಿರ್ವಹಣೆಯ ಕುರಿತು ಉಪನ್ಯಾಸ ನೀಡಿದರು.
ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷರಾದ ಎನ್.ಗಂಗಣ್ಣ ಮತ್ತು ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾದ ಬಾಂಡ್ ಗಣಪತಿ ಅವರನ್ನಿ ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ.ಅಚ್ಚಯ್ಯ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಸ್.ಪಿ. ನಿಂಗಪ್ಪ, ಪ್ರೇಮಾ ಸೋಮಯ್ಯ, ಬಿ.ಎ.ರಮೇಶ್ ಚಂಗಪ್ಪ, ಎಚ್.ಎನ್.ರಾಮಚಂದ್ರ, ಕೆ.ಎಸ್.ಗಣಪತಿ, ಪಿ.ಜಿ.ನಂಜುಂಡ, ಎನ್.ಎ.ರವಿ ಬಸಪ್ಪ, ಕೆ.ಎಂ.ತಮ್ಮಯ್ಯ, ಕನ್ನಂಡ ಸಂಪತ್, ಪಿ.ಮನು ರಾಮಚಂದ್ರ, ಸಿ.ಕೃಷ್ಣ ಗಣಪತಿ, ಬಿ.ವಿ.ಟಿ. ಮಣಿಪಾಲದ ಯೋಜನಾಧಿಕಾರಿ ಪಿ.ಅರುಣ್. ಇತರರು ಇದ್ದರು. ಜಿಲ್ಲಾ ಸಹಕಾರ ಯೂನಿಯನ್ ಸಿಇಒ ಯೋಗೇಂದ್ರ ನಾಯಕ್ ಅವರು ನಿರೂಪಿಸಿದರು, ಆರ್.ಮಂಜುಳಾ ಪ್ರಾರ್ಥಿಸಿದರು, ಕೊಡಪಾಲ ಗಣಪತಿ ಸ್ವಾಗತಿಸಿದರು, ರವಿ ಬಸಪ್ಪ ವಂದಿಸಿದರು.
“ಉತ್ತಮ ಕೆಲಸ’
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ಮಾತನಾಡಿ ಸಹಕಾರಿ ಬ್ಯಾಂಕ್‌ಗಳು ಜಿಲ್ಲೆಯಾದ್ಯಂತ ಹಲವಾರು ಉತ್ತಮ ಕೆಲಸ ನಡೆಸುತ್ತಿದೆ. ಜಿಲ್ಲೆಯ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ. ಜಿಲ್ಲೆಯ ವಿವಿಧ ಬ್ಯಾಂಕ್‌ಗಳೊಂದಿಗೆ ಉತ್ತಮ ಭಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.