ಗದಗ: ನೇಕಾರರಿಗೆ ಗುಂಪು ವಿಮಾ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಬೇಕು ಮತ್ತು ವಿಶೇಷ ಘಟಕ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅನುಸರಿಸುತ್ತಿರುವ ವಿಳಂಬ ಧೋರಣೆ ಖಂಡಿಸಿ ಬಿಜೆಪಿ ನೇಕಾರ ಪ್ರಕೋಷ್ಠ ಜಿಲ್ಲಾ ಘಟಕದ ಸದಸ್ಯರು ಗುರುವಾರ ಬೆಟಗೇರಿಯಲ್ಲಿ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಕುರಿತು ಸ್ಥಳೀಯ ಅಧಿಕಾರಿಗಳ ಮೂಲಕ ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿ, ರಾಜ್ಯ ಮತ್ತು ಕೇಂದ್ರ ಸರಕಾರಗಳು ನೇಕಾರರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಗಾಗಿ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿವೆ. ಆದರೆ, ಅವುಗಳ ಅರ್ಹರಿಗೆ ತಲುಪುತ್ತಿಲ್ಲ. ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಯೋಜನೆಯ ಲಾಭ ಫಲಾನುಭವಿಗಳ ಕೈಸೇರುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
2011-12ರಿಂದ ಈವರೆಗೆ ವಿಶೇಷ ಘಟಕ ಯೋಜನೆ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅಕ್ರಮವಾಗಿ ಸ್ಥಿತಿವಂತರು ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಕೆಲವರು ಹಳೆಯ ಮಗ್ಗಗಳನ್ನು ತೋರಿಸಿ, ಯೋಜನೆಯಡಿ ದೊರೆಯುವ ಆರ್ಥಿಕ ನೆರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಯೋಜನೆಯಡಿ ದೊರೆಯುವ ಮಗ್ಗಗಳನ್ನು ಮಾರಾಟ ಮಾಡಿ, ಹಳೆ ಮಗ್ಗಳನ್ನೇ ತೋರಿಸುವವರ ಸಂಖ್ಯೆಯೂ ಕಡಿಮೆಯಿಲ್ಲ. ವಿದ್ಯುತ್ ಮಗ್ಗಗಳಿಗೆ ಸಿರಿಯಲ್ ನಂಬರ್ ಇಲ್ಲದ ಕಾರಣ ಈ ರೀತಿಯ ಅಕ್ರಮಗಳಿಗೆ ತಡೆ ಇಲ್ಲದಂತಾಗಿದೆ. ಇಂಥ ಅಕ್ರಮಗಳನ್ನು ತಡೆಯುವಲ್ಲಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ನೇಕಾರರ ಗುಂಪು ವಿಮಾ ಯೋಜನೆಯಡಿ ನೇಕಾರರ ಮಕ್ಕಳಿಗೆ ಶಿಷ್ಯ ವೇತನ ದೊರೆಯುತ್ತಿಲ್ಲ. ವಿಮಾ ಕಂತುಗಳನ್ನು ಬಾಕಿಯಿಲ್ಲದಂತೆ ಪಾವತಿಸಿದರೂ, 2-3 ವರ್ಷಗಳಿಂದ ಮಕ್ಕಳಿಗೆ ಶಿಷ್ಯ ವೇತನ ಬಿಡುಗಡೆಯಾಗಿಲ್ಲ ಎಂದು ಅಳಲು ತೋಡಿಕೊಂಡರು.
ಪ್ರಸಕ್ತ ಸಾಲಿನಲ್ಲಿ ವಿಮಾ ಯೋಜನೆಯನ್ನು ಅವೈಜ್ಞಾನಿಕವಾಗಿ ತಿದ್ದುಪಡಿ ಮಾಡಲಾಗಿದೆ. ವಿಮೆಗೆ ನಿಗದಿಗೊಳಿಸಿದ್ದ ವಯೋಮಿತಿಯನ್ನು 60 ರಿಂದ 50ಕ್ಕೆ ಮಿತಿಗೊಳಿಸಿದ್ದು, ನೇಕಾರರ ಮಕ್ಕಳ ವಿದ್ಯಾಭ್ಯಾಸದ ಪ್ರೋತ್ಸಾಹ ಧನವನ್ನು ರದ್ದುಗೊಳಿಸಲಾಗಿದೆ. ಪರಿಷ್ಕರ ಯೋಜನೆಯಿಂದ ಯಾವುದೇ ನೇಕರಾರರಿಗೆ ಅನುಕೂಲತೆಯಿಲ್ಲ ಎಂದು ಕಿಡಿಕಾರಿದ ಪ್ರತಿಭಟನಾಕಾರರು, ಈ ಕೂಡಲೇ ಪರಿಷ್ಕೃತ ಯೋಜನೆಯನ್ನು ಕೈಬಿಟ್ಟು, ಹಿಂದಿನ ಯೋಜನೆಯನ್ನೇ ಯಥಾ ಪ್ರಕಾರ ಮುಂದುವರಿಸಬೇಕು. ನೇಕಾರರ ವಸತಿ ಯೋಜನೆಯನ್ನು ಸಮಪರ್ಕ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಬಿಜೆಪಿ ಪ್ರಕೋಷ್ಠ ಶಹರ ಅಧ್ಯಕ್ಷ ದೇವಪ್ಪ ಗೋಟೂರ, ಜಿಲ್ಲಾ ಸಹ ಸಂಚಾಲಕ ರವಿಕುಮಾರ ಗಂಜಿ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.