ದಾವಣಗೆರೆ: ಸೋಮವಾರ ಮಂಡನೆಯಾಗಿರುವ ಮಹಾನಗರಪಾಲಿಕೆ ಬಜೆಟ್‌ನಲ್ಲಿನ ಅನೇಕ ಅಂಶಗಳು ಕಾರ್ಯರೂಪಕ್ಕೆ ಬರುವ ವಿಶ್ವಾಸವೂ ಇಲ್ಲ. ಬರುವುದೂ ಇಲ್ಲ ಎಂದು ನಗರಪಾಲಿಕೆಯ 33ನೇ ವಾರ್ಡ್ ಬಿಜೆಪಿ ಸದಸ್ಯ ಡಿ.ಕೆ. ಕುಮಾರ್ ಹೇಳಿದ್ದಾರೆ.
ಕಳೆದ ವರ್ಷದ ಬಜೆಟ್‌ನಲ್ಲಿರುವ ಅನೇಕ ಅಂಶಗಳನ್ನು ಈ ಬಾರಿಯೂ ಸೇರಿಸಲಾಗಿದೆ. ಕಳೆದ ಸಾಲಿನ ಬಜೆಟ್‌ನಲ್ಲಿನ ಅಂಶಗಳೇ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. 2-3 ನೇ ತರಗತಿಯ ಮಕ್ಕಳಂತೆ ಮೇಯರ್ ಬಜೆಟ್ ಓದಿದರೆ ಹೊರತು ಯಾವ ರೀತಿ ಬಜೆಟ್‌ನ ಅಂಶಗಳನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂಬುದನ್ನೇ ಹೇಳಲಿಲ್ಲ,
ಕಳೆದ ಬಾರಿಯ ಬಜೆಟ್‌ನಲ್ಲಿನ ಎಷ್ಟು ಘೋಷಣೆ ಕಾರ್ಯರೂಪಕ್ಕೆ ಬಂದಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು. 33ನೇ ವಾರ್ಡ್‌ಗೆ ನಾಲ್ಕು ವರ್ಷದಲ್ಲಿ 1.75 ಕೋಟಿ ಅನುದಾನ ನೀಡಲಾಗಿದೆ. ಇತರೆ ವಾರ್ಡ್‌ನಲ್ಲಿ 20-25 ಕೋಟಿ ಅನುದಾನದ ಕೆಲಸ ಮಾಡಿಸಲಾಗಿದೆ.
ಸೋಮವಾರ ಬಜೆಟ್ ಸಭೆಯಲ್ಲಿ ನನ್ನ ವಾರ್ಡ್‌ನ ಸಮಸ್ಯೆ ಬಗ್ಗೆ ಮಾತನಾಡಲು ಜಿಲ್ಲಾ ಉಸ್ತುವಾರಿ ಸಚಿವರು ಅವಕಾಶವನ್ನೇ ನೀಡಲಿಲ್ಲ. ಯಾರೊಬ್ಬರೂ ಗಮನ ನೀಡಲೇ ಇಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು. ಕುಡಿಯುವ ನೀರಿನ ಸಮಸ್ಯೆ ಇದೆ. ಬಜೆಟ್‌ನಲ್ಲಿ 24+7 ಮಾದರಿ ನೀರು ಸರಬರಾಜು ಪ್ರಸ್ತಾಪನೆ ಮಾಡಲಾಗಿದೆ.
ದಿನದ 24 ಗಂಟೆ ನೀರು ಕೊಡುವ ಮುನ್ನ ಈಗ ದಿನಕ್ಕೆ ಒಂದು ಗಂಟೆಯಾದರೂ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಬೇಕು. ಪಾಲಿಕೆಯಲ್ಲಿ 2 ಟ್ಯಾಂಕರ್ ಮಾತ್ರ ಇವೆ. 25-30 ಟ್ಯಾಂಕರ್ ಬಾಡಿಗೆ ತೆಗೆದುಕೊಂಡು ದಿನಕ್ಕೆ 3 ಸಾವಿರ ನೀಡಲಾಗುತ್ತಿದೆ. ಆ ಟ್ಯಾಂಕರ್ ಎಲ್ಲಿ ನೀರು ಹಾಕುತ್ತವೆ ಎಂಬುದಕ್ಕೆ ಲೆಕ್ಕವೇ ಇಲ್ಲ.
ಇನ್ನು ಧೂಳುಮುಕ್ತ ದಾವಣಗೆರೆ ನಿರ್ಮಾಣದ ಬಗ್ಗೆ ಹೇಳುತ್ತಾರೆ. ಪೌರ ಕಾರ್ಮಿಕರಿಗೆ 3-4 ತಿಂಗಳಿನಿಂದ ವೇತನವನ್ನೇ ಕೊಟ್ಟಿಲ್ಲ. ಸಕ್ಕಿಂಗ್, ಜೆಟ್ಟಿಂಗ್ ಮೆಷಿನ್ ದುರಸ್ತಿ ಪಡಿಸದೇ ಇದ್ದವರು ಹೊಸ ಮೆಷಿನ್ ಖರೀದಿಸುವ ಬಗ್ಗೆ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಸಿ. ಶ್ರೀನಿವಾಸ್ ಮಾತನಾಡಿ, ಪಾಲಿಕೆಯ ಈ ಸಾಲಿನ ಬಜೆಟ್ ಪೊಳ್ಳು.
ಅನೇಕ ಅಂಶಗಳು ಕಾರ್ಯರೂಪಕ್ಕೆ ಬರುವುದೇ ಇಲ್ಲ. ನಗರಪಾಲಿಕೆಯಲ್ಲಿ ಈವರೆಗೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು. ಪ್ರಧಾನ ಕಾರ್ಯದರ್ಶಿ ಶಿವನಗೌಡ ಪಾಟೀಲ್, ಗುರುರಾಜ್, ಶ್ರೀಕಾಂತ್ ನೀಲಗುಂದ, ರಾಜು, ವೀರೇಶ್, ಧನುಶ್‌ರೆಡ್ಡಿ ಇದ್ದರು.