Advertisement

ಕಡಲ್ಕೊರೆತ ತಡೆಗೆ “ಟ್ರಾಂಚ್‌-2′ಅನುಷ್ಠಾನ

11:51 PM Oct 06, 2019 | Sriram |

ಮಂಗಳೂರು: ಕರಾವಳಿಯ 300 ಕಿ.ಮೀ. ವ್ಯಾಪ್ತಿಯಲ್ಲಿ ಕಡಲ್ಕೊರೆತ ತಡೆಗೆ ಎಡಿಬಿ ನೆರವಿನಲ್ಲಿ “ಸುಸ್ಥಿರ ಕರಾವಳಿ ಸಂರಕ್ಷಣೆ ಮತ್ತು ನಿರ್ವಹಣ ಹೂಡಿಕೆ’ (ಟ್ರಾಂಚ್‌-1) ಯೋಜನೆ ಪೂರ್ಣಗೊಂಡಿದ್ದು, 620.20 ಕೋ.ರೂ. ವೆಚ್ಚದಲ್ಲಿ ಟ್ರಾಂಚ್‌-2 ಯೋಜನೆ ಪ್ರಗತಿಯಲ್ಲಿದೆ.

Advertisement

ರೀಫ್‌ ನಿರ್ಮಿಸಿದ ಕಾರಣ ಉಳ್ಳಾಲದ ಕೆಲವೆಡೆ ಕಡಲ್ಕೊರೆತ ಕಡಿಮೆಯಾಗಿದೆ. ಆದರೆ ಮುಕ್ಕಚ್ಚೇರಿ ಮತ್ತು ಸೋಮೇಶ್ವರಗಳಲ್ಲಿ ಈ ವರ್ಷ ತೀವ್ರ ವಾಗಿತ್ತು. ಇದಕ್ಕಾಗಿ ಟ್ರಾಂಚ್‌-2 ಅಡಿಯಲ್ಲಿ ಸೋಮೇಶ್ವರದಲ್ಲಿ 26.33 ಕೋ.ರೂ. ವೆಚ್ಚದಲ್ಲಿ 10 ಇನ್‌ಶೋರ್‌ ಬರ್ಮ್ಗಳ ನಿರ್ಮಾಣ, 104.82 ಕೋ.ರೂ. ವೆಚ್ಚದಲ್ಲಿ ಎರಡು ರೀಫ್ಗಳ ನಿರ್ಮಾಣ ಮತ್ತು ಮುಕ್ಕಚ್ಚೇರಿಯಲ್ಲಿ 22.08 ಕೋ.ರೂ. ವೆಚ್ಚದಲ್ಲಿ ಕಡಲ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ.
ಟ್ರಾಂಚ್‌ 2 ಯೋಜನೆಯಲ್ಲಿ ಎರ್ಮಾಳು ತೆಂಕದಲ್ಲಿ ತಡೆಗೋಡೆ, ಉದ್ಯಾವರದಲ್ಲಿ 35 ಗ್ರಾಯನ್‌ ನಿರ್ಮಾಣ, ಕೋಡಿಬೆಂಗ್ರೆಯಲ್ಲಿ 4.1 ಕಿ.ಮೀ. ತಡೆಗೋಡೆ, ಕೋಡಿ ಕನ್ಯಾನದಲ್ಲಿ ಡ್ನೂನ್‌ ನಿರ್ಮಾಣ ಮತ್ತು ಸಸಿ ನೆಡುವುದು, ಮರವಂತೆಯಲ್ಲಿ 24 ಗ್ರಾಯನ್‌ಗಳ ನಿರ್ಮಾಣ ಮತ್ತು ಸಮುದಾಯ ಉಪಯೋಜನೆಯಾಗಿ ಬೈಲೂರು ತಂಬೆಬೀಲ, ಮಂಕಿ, ಧಾರೇಶ್ವರ, ಕಡ್ಲೆ ಬಿರ್‌ ಕೋಡಿ ಮತ್ತು ಗಂಗೆ ಕೊಳ್ಳಿಯಲ್ಲಿ ಡ್ನೂನ್‌ ನಿರ್ಮಾಣ ಹಾಗೂ ಸಸಿ ನೆಡುವ ಯೋಜನೆ ಸೇರಿವೆ. ಸದ್ಯ ಈ ಎಲ್ಲ ಕಾಮಗಾರಿಗಳು ಆರಂಭವಾಗಿದ್ದು, 231.52 ಕೋ.ರೂ. ವೆಚ್ಚವಾಗಿದೆ.

ಒಂದು ವರ್ಷ ಬಾಕಿ!
ಟ್ರಾಂಚ್‌-1 ಮತ್ತು ಟ್ರಾಂಚ್‌- 2 ಯೋಜನೆ ಪೂರೈಸಲು ಎಡಿಬಿ 2011ರಿಂದ 2020ರ ಸೆಪ್ಟಂಬರ್‌ ವರೆಗೆ ಅವಧಿ ನೀಡಿದೆ. ಇನ್ನು ಉಳಿದಿರುವುದು 12 ತಿಂಗಳು ಮಾತ್ರ. ಅದರೊಳಗೆ ಕಾಮಗಾರಿಯನ್ನು ಪೂರ್ಣ ಗೊಳಿಸಬೇಕು. ಟ್ರಾಂಚ್‌-2 ಯೋಜನೆಗೆ ಎಡಿಬಿಯಿಂದ 448.68 ಕೋ.ರೂ. ಮತ್ತು ಕರ್ನಾಟಕ ಸರಕಾರದಿಂದ 192.07 ಕೋ.ರೂ. ಸಿಗಲಿದೆ.

ಉಳ್ಳಾಲದಲ್ಲಿ ಪೂರ್ಣ
ಉಳ್ಳಾಲದಲ್ಲಿ ಕಡಲ್ಕೊರೆತ ತಡೆಗೆ “ಟ್ರಾಂಚ್‌-1′ ಯೋಜನೆಯಡಿ 2012ರಿಂದ 246.11 ಕೋಟಿ ರೂ. ವೆಚ್ಚದಲ್ಲಿ 8 ಇನ್‌ಶೋರ್‌ ಬರ್ಮ್ ನಿರ್ಮಾಣ, ಬ್ರೇಕ್‌ ವಾಟರ್‌ ಪುನರ್‌ನಿರ್ಮಾಣ, ಉಳ್ಳಾಲದ ಕಡಲ ಮಧ್ಯದಲ್ಲಿ 2 ಆಫ್‌ಶೋರ್‌ ರೀಫ್‌ಗಳ ನಿರ್ಮಾಣ ಕೈಗೆತ್ತಿಕೊಂಡು ಕಾಮಗಾರಿ ಪೂರ್ಣಗೊಂಡಿದೆ.

3ನೇ ಹಂತಕ್ಕೂ ಯೋಚನೆ
3ನೇ ಹಂತವಾಗಿ ಮುಕ್ಕ-ಸಸಿಹಿತ್ಲು ವರೆಗಿನ 5.50 ಕಿ.ಮೀ., ಉಡುಪಿಯ ಉಚ್ಚಿಲ- ಕಾಪು, ಉಪ್ಪುಂದ-ಬಿಜೂರು ಮತ್ತು ಪಡುವರಿ-ಶಿರೂರು ವರೆಗೆ ಒಟ್ಟು 12.30 ಕಿ.ಮೀ.ಯಲ್ಲಿ ಕಾಮಗಾರಿ ಕೈಗೊಳ್ಳಲು ಬಂದರು ಇಲಾಖೆ ಗುರುತಿಸಿದೆ.

Advertisement

ಕಾಮಗಾರಿ ಪ್ರಗತಿಯಲ್ಲಿ
ಕಡಲ್ಕೊರೆತ ತಡೆಗೆ ಸಂಬಂಧಿಸಿ ಟ್ರಾಂಚ್‌-1 ಯೋಜನೆ ಪೂರ್ಣಗೊಂಡಿದೆ. ಟ್ರಾಂಚ್‌-2 ಪ್ರಗತಿಯಲ್ಲಿದ್ದು, ಮುಂದಿನ ಸೆಪ್ಟಂಬರ್‌ಗೆ ಪೂರ್ಣಗೊಳ್ಳಲಿದೆ. ಸೋಮೇಶ್ವರ, ಮುಕ್ಕಚ್ಚೇರಿ ಭಾಗದ ಕಾಮಗಾರಿಗಳು ಕೆಲವೇ ದಿನದಲ್ಲಿ ಆರಂಭವಾಗಲಿವೆ.
– ಗೋಪಾಲ್‌ ನಾೖಕ್‌
ಜಂಟಿ ನಿರ್ದೇಶಕರು, ಸುಸ್ಥಿರ ಕರಾವಳಿ ಸಂರಕ್ಷಣೆ ಹಾಗೂ ನಿರ್ವಹಣ ಹೂಡಿಕೆ ಯೋಜನೆ

ಯೋಜನೆ ಅನುಷ್ಠಾನ ಹೇಗೆ?
“ರೀಫ್’ ಅನ್ನು ಬ್ರೇಕ್‌ ವಾಟರ್‌ ಮಾದರಿಯಲ್ಲಿ ತೀರಕ್ಕೆ ಸಮಾನಾಂತರವಾಗಿ ಕಲ್ಲು ಬಳಸಿ ನಿರ್ಮಿಸಲಾಗುತ್ತದೆ. ಸೋಮೇಶ್ವರದಲ್ಲಿ ದಕ್ಷಿಣ ಮತ್ತು ಉತ್ತರ ಎರಡು ರೀಫ್ಗಳನ್ನು ತೀರದಿಂದ 600 ಮೀ. ದೂರಕ್ಕೆ ಸಮುದ್ರದಲ್ಲಿ ನಿರ್ಮಿಸಲಾಗುತ್ತದೆ. ಇದರಿಂದ ಅಲೆಗಳ ಅಬ್ಬರ ಕ್ಷೀಣಿಸುತ್ತದೆ.

“ಸೀ-ವಾಲ್‌’ ಸಾಂಪ್ರದಾಯಿಕ ತಡೆಗೋಡೆಯಲ್ಲ. ಸಾಗರ ಭೂವಿಜ್ಞಾನ ತಜ್ಞರು ನೀಡಿರುವ ವಿನ್ಯಾಸದಂತೆ ಮೊದಲಿಗೆ ಸಮುದ್ರ ತೀರದ ತಳದಲ್ಲಿ ಜಿಯೊ ಟೆಕ್ಸ್‌ಟೈಲ್‌ ಪದರ ಹಾಕಲಾಗುತ್ತದೆ. ಅದು ಜಾರದಂತೆ ಮೇಲೆ ಕಲ್ಲುಗಳನ್ನು ಅಳವಡಿಸಲಾಗುತ್ತದೆ. ಬಳಿಕ ಅಲೆಗಳು ಅಪ್ಪಳಿಸುವ ಕೋನದಲ್ಲೇ ಅದರ ಬಲ ಕಡಿಮೆಯಾಗುವ ರೀತಿಯಲ್ಲಿ ಕಲ್ಲುಗಳನ್ನು ಜೋಡಿಸಿ ಸೀ-ವಾಲ್‌ ರಚಿಸಲಾಗುತ್ತದೆ.

“ಇನ್‌ಶೋರ್‌ ಬರ್ಮ್’ ಅಂದರೆ ಸಮುದ್ರ ತೀರದಲ್ಲಿ ಜಿಯೋ ಟೆಕ್ಸ್‌ಟೈಲ್‌ ಎನ್ನುವ ವಿಶೇಷ ಬಟ್ಟೆಯಿಂದ ತಯಾರಿಸಿದ ಬ್ಯಾಗ್‌ಗಳಲ್ಲಿ ಟನ್‌ಗಟ್ಟಲೆ ಮರಳು ತುಂಬಿಸಿ ವ್ಯವಸ್ಥಿತವಾಗಿ ಜೋಡಿಸಿಡುವುದು. ಇವು ಅಲೆಗಳ ಬಲವನ್ನು ಕ್ಷೀಣಿಸುವಂತೆ ಮಾಡುತ್ತವೆ.

“ಗ್ರಾಯನ್‌’ ಅಂದರೆ ಕಡಲತೀರದಲ್ಲಿ 70 ಮೀ. ಉದ್ದಕ್ಕೆ ಕಲ್ಲಿನ ಬ್ರೇಕ್‌ವಾಟರ್‌ ನಿರ್ಮಾಣ. ಒಂದು ಭಾಗಕ್ಕೆ ಜಿಯೋ ಟೆಕ್ಸ್‌ಟೈಲ್‌ ಬ್ಯಾಗ್‌ಗಳಲ್ಲಿ ಮರಳು ತುಂಬಿ ಜೋಡಿಸಿಡಲಾಗುತ್ತದೆ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next