Advertisement

ಖಾಸಗಿ ವೈದ್ಯಕೀಯ ವಿಧೇಯಕಕ್ಕೆ ಅಂಕಿತ

06:05 AM Jan 06, 2018 | |

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಉದ್ದೇಶದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ದೊರೆತಿದೆ.

Advertisement

ಸರ್ಕಾರ ಮತ್ತು ಖಾಸಗಿ ವೈದ್ಯ ಸಂಸ್ಥೆಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್‌ ಅವರು ಹಠಕ್ಕೆ ಬಿದ್ದು ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆದಿದ್ದ ಮಹತ್ವಾಕಾಂಕ್ಷಿ ವಿಧೇಯಕಕ್ಕೆ ರಾಜ್ಯಪಾಲ ವಜೂಭಾಯ್‌ ವಾಲಾ ಗುರುವಾರ ಒಪ್ಪಿಗೆ ನೀಡಿದ್ದಾರೆ.

ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಒಪ್ಪಿದ ರೂಪದಲ್ಲಿರುವ ವಿಧೇಯಕಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದು, ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರಡು ರೂಪಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಿದೆ. ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ಕಾಯ್ದೆ ಜಾರಿಗೆ ಬರಲಿದೆ. ರಾಜ್ಯಪಾಲರ ಅಂಕಿತ ದೊರೆತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್‌, ನನ್ನ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಇದೊಂದು ಸುದಿನ ಎಂದು ಬಣ್ಣಿಸಿದ್ದಾರೆ.

ಏನಾಗಿತ್ತು?
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕಕ್ಕೆ ಮೊದಲಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಆಕ್ಷೇಪ ವ್ಯಕ್ತವಾಗಿ ಜಂಟಿ ಸಲಹಾ ಸಮಿತಿಗೆ ವಹಿಸಲಾಗಿತ್ತು. ನಂತರ ಸಮಿತಿಯ ವರದಿ ಆಧರಿಸಿ ವಿಧೇಯಕ ಅಂತಿಮಗೊಳಿಸಲಾಗಿತ್ತಾದರೂ ಜೈಲು ಶಿಕ್ಷೆ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ಇದೇ ವಿಚಾರದಲ್ಲಿ ಖಾಸಗಿ ವೈದ್ಯರು ಮುಷ್ಕರ ನಡೆಸಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಘಟನೆಯ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದ ನಂತರ ಅಧಿವೇಶನದಲ್ಲಿ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿತ್ತು.

Advertisement

ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಕರ್ತವ್ಯ ನಿರ್ಲಕ್ಷ್ಯ ಅಥವಾ ಲೋಪ ಎಸಗಿದ ವೈದ್ಯರಿಗೆ ಜೈಲು ಶಿಕ್ಷೆಯ ಪ್ರಸ್ತಾಪ ಕೈ ಬಿಡಲಾಗಿತ್ತು. ದಂಡದ ಮೊತ್ತ ಹೆಚ್ಚಿಸಲಾಗಿತ್ತು. ವಿಧಾನಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸ್ವತಂತ್ರ ಆಯೋಗ ರಚಿಸುವುದಾಗಿ ಪ್ರಕಟಿಸಿದ್ದರು.

ವಿಧೇಯಕದಲ್ಲಿರುವ ಪ್ರಮುಖಾಂಶಗಳು
*ಸರ್ಕಾರಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸ್ವತಂತ್ರ ಆಯೋಗ ರಚನೆ ನಿರ್ಧಾರ
* ವೈದ್ಯರ ನಿರ್ಲಕ್ಷ್ಯಕ್ಕೆ ಜೈಲುಶಿಕ್ಷೆ ಇಲ್ಲ, ದಂಡದ ಮೊತ್ತ ಹೆಚ್ಚಳ
* ನೋಂದಣಿ ಇಲ್ಲದಿದ್ದರೆ ಮತ್ತು ನಕಲಿ ವೈದ್ಯರಿಗೆ ದಂಡ ಮತ್ತು ಶಿಕ್ಷೆ
* ನೋಂದಣಿ ಜತೆಗೆ ಕುಂದುಕೊರತೆ ನಿವಾರಣಾ ಪ್ರಾಧಿಕಾರ
* ವೈದ್ಯರ ನಿರ್ಲಕ್ಷ್ಯ ಆರೋಪದ ಬಗ್ಗೆ ಕೆಎಂಸಿ ವರದಿ ಬಳಿಕ ಕ್ರಮ
* ಶುಲ್ಕ ಭರಿಸದಿದ್ದರೆ ಮೃತದೇಹ ಕೊಡುವುದು ಕಡ್ಡಾಯ, ಹಣ ನಂತರ ಪಾವತಿ

Advertisement

Udayavani is now on Telegram. Click here to join our channel and stay updated with the latest news.

Next