ಕೋಟೇಶ್ವರ:ಸರ್ವೋಚ್ಚ ನ್ಯಾಯಾಲಯದ ತೀರ್ಪು ಉದ್ಯಮದ ಮೇಲೆ ಭಾರೀ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಬಹಳಷ್ಟು ಲೆಕ್ಕಾಚಾರ ಹಾಕುತ್ತಿರುವ ಕುಂದಾಪುರ ತಾಲೂಕಿನ 92 ಮದ್ಯ ಮಾರಾಟ ವ್ಯಾಪಾರಸ್ಥರಿಗೆ ನೋಟಿಸು ಜಾರಿಯಾಗಿದ್ದು ಮಾರ್ಚ್ 31ರೊಳಗೆ ಸ್ಥಳಾಂತರಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ 7 ದಿನದೊಳಗೆ ಆಕ್ಷೇಪಣಾ ಪತ್ರ ಸಲ್ಲಿಸಬೇಕೆಂಬ ಆದೇಶವು ಅವರನ್ನು ಪೇಚಿಗೆ ಸಿಲುಕಿಸಿದ್ದು ಇನ್ನಷ್ಟು ಆತಂಕದ ವಾತಾವರಣ ನಿರ್ಮಿಸಿದೆ.
ಉಚ್ಚ ನ್ಯಾಯಾಲಯದ ಆದೇಶದಲ್ಲಿ “ಲಿಕ್ಕರ್ ವೆಂಡ್ಸ್’ ಪದ ಬಳಕೆಯಾಗಿರುವುದು ವೈನ್‌ಶಾಪ್‌ಗ್ಳಿಗೆ ಮಾತ್ರ ಅನ್ವಯವೋ ವೈನ್ ಶಾಪ್‌ಸಹಿತ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೂ ಈ ಆದೇಶ ಅನ್ವಯವಾಗುವುದೋ ಎಂಬ ಗೊಂದಲವು ಮದ್ಯ ವ್ಯಾಪಾರಸ್ಥರಲ್ಲಿ ಗಲಿಬಿಲಿ ಉಂಟುಮಾಡಿದೆ. ಕರ್ನಾಟಕ ಸಹಿತ ಇತರ ರಾಜ್ಯಗಳ ಅಸೋಸಿಯೇಶನ್ ಅವರು ಮೇಲ್ಮನವಿ ಸಲ್ಲಿಸಿದ್ದರೂ ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ ಯಾವ ಮಾನದಂಡ ಬಳಸಲಾಗಿದೆ ಅನ್ನುವುದು ಇನ್ನೂ ಪ್ರಶ್ನಾರ್ಥಕವಾಗಿಯೇ ಉಳಿಸಿದೆ.
ಉದ್ಯೋಗ ಕಳೆದುಕೊಳ್ಳುವ ಭೀತಿ ಯಲ್ಲಿ ಸಿಬಂದಿ: ಹಲವಾರು ವರ್ಷ ಗಳಿಂದ ವೈನ್‌ಶಾಪ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಜೀವನೋಪಾಯಕ್ಕಾಗಿ ಉದ್ಯೋಗ ಮಾಡುತ್ತಿರುವ ಬಡಕುಟುಂಬದ ಉದ್ಯೋಗಿಗಳು ನ್ಯಾಯಾಲಯದ ಆದೇಶವು ಊರ್ಜಿತವಾದಲ್ಲಿ ತಮ್ಮ ಮುಂದಿನ ಬದುಕು ಏನು ಎಂಬ ಪ್ರಶ್ನೆಯಲ್ಲಿರುವ ಈ ದಿಸೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಮದ್ಯ ಮಾರಾಟ ಸನ್ನದುಗಳನ್ನು 500 ಮೀಟರ್ ದೂರ ವ್ಯಾಪ್ತಿಯಿಂದ ರಿಯಾಯತಿಗೊಳಿಸಿ ಒಂದಿಷ್ಟು ಔದಾರ್ಯ ತೋರಿಸಿದಲ್ಲಿ ತಮ್ಮ ಬದುಕು ಹಸನಾಗುವುದು ಎಂದಿರುತ್ತಾರೆ.
ನ್ಯಾಯಾಲಯದ ಆದೇಶದಂತೆ ಅಬಕಾರಿ ಇಲಾಖೆಯು ಕುಂದಾಪುರ ತಾಲೂಕಿನ ಎಲ್ಲ ಮದ್ಯಮಾರಾಟಗಾರರಿಗೆ ನೋಟಿಸು ನೀಡಿದ್ದು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯ 400 ಮೀಟರ್ ವ್ಯಾಪ್ತಿ ಒಳಗಿರುವ ಮದ್ಯದಂಗಡಿಯವರಿಗೆ ಭಯದ ವಾತಾವರಣ ಸೃಷ್ಟಿಸಿದೆ. ಎಂ.ಡಿ.ಆರ್. (ಮೇಜರ್ ಡಿಸ್ಟ್ರಿಕ್ಟ್ ರೋಡ್) ನಲ್ಲಿರುವ ಮದ್ಯದಂಗಡಿಯವರಿಗೆ ಈ ಕಾನೂನು ಅನ್ವಯ ವಾಗುವುದಿಲ್ಲದಿರುವುದರಿಂದ ಅಂತಹ ಮುಖ್ಯ ರಸ್ತೆಯಲ್ಲಿರುವ ಮದ್ಯದ ವ್ಯಾಪಾರಿಗಳು ಸದ್ಯಕ್ಕೆ ಬದುಕಿದೆಯಾ ಬಡ ಜೀವ ಎಂದು ನಿಟ್ಟುಸಿರು ಬಿಡುವಂತಾಗಿದೆ.
ಕುಂದಾಪುರ ತಾಲೂಕಿನ 101 ಗ್ರಾಮದಲ್ಲಿ ಇರುವ ಸುಮಾರು 92 ಬಾರ್ ಹಾಗೂ ವೈನ್‌ಶಾಪ್‌ಗ್ಳಿಗೆ ನೋಟಿಸಿನ ಬಿಸಿ ಮುಟ್ಟಿದ್ದು ವ್ಯಾಪಾರಿಗಳು ಗೊಂದಲಕ್ಕೀಡಾಗಿದ್ದಾರೆ. ಕುಂದಾಪುರ ಪೇಟೆಯೊಳಗಿನ 2 ಮದ್ಯದಂಗಡಿ ಹಾಗೂ 3 ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಈ ಕಾನೂನು ಅನ್ವಯ ವಾಗದಿರುವುದರಿಂದ ಅಲ್ಲಿನ ವ್ಯಾಪಾರಿ ಗಳು ಸದ್ಯಕ್ಕೆ ಬಚಾವಾಗಿದ್ದಾರೆ. ಒಟ್ಟಾರೆ ಕುಂದಾಪುರ ತಾಲೂಕಿನಲ್ಲಿರುವ 92 ಮದ್ಯ ಮಾರಾಟ ಸನ್ನದುಗಳನ್ನು ಮಾರ್ಚ್ 31 ರ ಒಳಗೆ 500 ಮೀಟರ್ ದೂರದಿಂದ ಹೊರಕ್ಕೆ ಸ್ಥಳಾಂತರಿಸಬೇಕೆಂಬ ಆದೇಶವು ಈ ಭಾಗದ ಮದ್ಯ ವ್ಯಾಪಾರಸ್ಥರು ಹಾಗೂ ಮದ್ಯವ್ಯಸನಿಗಳಿಗೆ ನಿದ್ರೆ ಬಾರದ ರಾತ್ರಿ ಯಾಗಿ ಪರಿಣಮಿಸಿದೆ.
– ಡಾ| ಸುಧಾಕರ ನಂಬಿಯಾರ್