Advertisement

ಆರೋಗ್ಯ ಸೇವೆಗಳು ಆಂದೋಲನ ಮಾದರಿ ಅನುಷ್ಠಾನವಾಗಲಿ

09:05 PM Jun 03, 2019 | Team Udayavani |

ಹಾಸನ: ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನಹರಿಸಿ, ಶುಚಿತ್ವದ ಕುರಿತು ಇತರರಿಗೂ ತಿಳಿಸಿಕೊಡುವ ಮೂಲಕ ಆರೋಗ್ಯದಾಯಕ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಸಲಹೆ ನೀಡಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ವಲ್ಲಭಾಯಿ ರಸ್ತೆಯಲ್ಲಿರುವ ಎಂ. ಕೃಷ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಸಂರಕ್ಷಣೆಯ ಕುರಿತು ಸರ್ಕಾರವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳು ಆಂದೋಲನದ ರೀತಿಯಲ್ಲಿ ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ವಚ್ಛತೆಯ ಅರಿವು ಮೂಡಿಸಿ: ಅತಿಸಾರ ಭೇದಿಯ ಸಂದರ್ಭದಲ್ಲಿ ಒಆರ್‌ಎಸ್‌ ಮತ್ತು ಜಿಂಕ್‌ ಮಾತ್ರೆಗಳ ಬಳಕೆಯ ಬಗ್ಗೆ ಪ್ರತಿ ಶಾಲೆ ಹಾಗೂ ಅಂಗನವಾಡಿಗಳ ಮಕ್ಕಳಿಗೆ ಮಾಹಿತಿ ನೀಡಬೇಕು ಮತ್ತು ಸ್ವಚ್ಛತೆ ಹಾಗೂ ಆರೋಗ್ಯ ಕಾಳಜಿ, ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ನಿರ್ದೇಶನ ನೀಡಿದರು.

ನೀರಿನ ಟ್ಯಾಂಕ್‌ ಶುಚಿಗೊಳಿಸಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌, ಸರ್ಕಾರಿ ಆಸ್ಪತ್ರೆಗಳು, ಶಾಲೆಗಳು, ಹಾಸ್ಟೆಲ್‌ಗ‌ಳಲ್ಲಿ ನೀರಿನ ಟ್ಯಾಂಕರ್‌ಗಳು ಶುದ್ಧವಾಗಿರಬೇಕು ಶುದ್ಧ ನೀರಿನ ಬಳಕೆಯ ಜೊತೆಗೆ ಅತಿಸಾರ ಭೇದಿಯ ಸಂದರ್ಭದಲ್ಲಿ ಒಆರ್‌ಎಸ್‌ ಹಾಗೂ ಜಿಂಕ್‌ ಮಾತ್ರೆಗಳನ್ನು ಬಳಸಿಕೊಂಡು ಆರೋಗ್ಯ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.

Advertisement

ಜಿಲ್ಲಾ ಆರ್‌.ಸಿ.ಎಚ್‌ ಅಧಿಕಾರಿ ಡಾ.ಜನಾರ್ದನ್‌ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವತಿಯಿಂದ 5 ವರ್ಷದ ಒಳಗಿನ ಮಕ್ಕಳಿರುವ ಮನೆಗಳಿಗೆ ಭೇಟಿ ನೀಡಿ ಶುಚಿತ್ವದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕೈ ತೊಳೆಯುವ ವಿಧಾನಗಳನ್ನು ತಿಳಿಸಿಕೊಡಬೇಕು ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ‌ ಡಾ.ಕೃಷ್ಣಮೂರ್ತಿ ಅವರು ಮಾತನಾಡಿ, ಒಆರ್‌ಎಸ್‌ ಸಾವಿರಾರು ಜೀವಗಳನ್ನು ಉಳಿಸಿದೆ. ಆದ್ದರಿಂದ ಈ ಔಷಧಿಯು ಆಸ್ಪತ್ರೆಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ಸಿಗುವಂತಾಗಬೇಕು ಈ ಮೂಲಕ ಇಂತಹ ಕಾಯಿಲೆಗಳನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಜಿಲ್ಲಾಧಿಕಾರಿಗಳಿಂದ ಒಆರ್‌ಎಸ್‌ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು, ಅಲ್ಲದೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿಗಳ ತಂಡದಿಂದ ಕೈ ತೊಳೆಯುವ ಪ್ರಾತ್ಯಕ್ಷಿಕೆ ನೀಡಲಾಯಿತು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ರಾಜ್‌ಗೊಪಾಲ್‌, ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್‌, ಎಂ.ಕೃಷ್ಣ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ವಿಜಯಕುಮಾರಿ, ಕಾರ್ಯಕ್ರಮ ಅಧಿಕಾರಿ‌ ಡಾ.ಹೇಮಲತಾ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next