Advertisement

ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಅನುಷ್ಠಾನ

12:50 PM Nov 23, 2018 | |

ಕಲಬುರಗಿ: ಪ್ರಾಥಮಿಕ ಶಾಲೆ ಮಟ್ಟದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಿಸಲಾದ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಕೈಗೊಳ್ಳಬೇಕೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್‌ ತಿಳಿಸಿದರು.

Advertisement

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಕೈಗೊಂಡು ಮಾತನಾಡಿ, ಟಾಟಾ ಟ್ರಸ್ಟ್‌ ಹಾಗೂ ಇಂಡಿಯಾ ಲಿಟ್ರಸಿ ಪ್ರೊಜೆಕ್ಟ್ ವತಿಯಿಂದ ಕಲಬುರಗಿ ವಿಭಾಗದಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಈ ಸಂಸ್ಥೆಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಮನಾಂತರವಾಗಿ ತಮ್ಮ ಚಟುವಟಿಕೆಗಳನ್ನು ಹಮ್ಮಿಕೊಳ್ಳದೇ ಎಲ್ಲ ಚಟುವಟಿಕೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಭಾಗಿಗಳನ್ನಾಗಿಸಿ ಜವಾಬ್ದಾರಿ ನೀಡಬೇಕು ಎಂದರು.

ಅಂಗನವಾಡಿ ಮಕ್ಕಳಿಗೆ ಶಾಲಾ ಪೂರ್ವ ಚಟುವಟಿಕೆ ಪ್ರಾರಂಭಿಸಲು ಅನುಕೂಲವಾಗುವ ಹಾಗೆ ಅಂಗನವಾಡಿ ಕಾರ್ಯಕರ್ತೆಯರ ಸಾಮರ್ಥ್ಯ ಅಭಿವೃದ್ಧಿಗಾಗಿ ತರಬೇತಿ ಕೈಗೊಳ್ಳುವುದು ಅವಶ್ಯಕವಾಗಿದೆ. ಈಗಾಗಲೇ ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಯ ಕೂಕನೂರ ತಾಲೂಕಿನಲ್ಲಿರುವ ಅಂಗನವಾಡಿ ತರಬೇತಿ ಕೇಂದ್ರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
 
ಈ ಕೇಂದ್ರಗಳಲ್ಲಿ ಅಂಗನವಾಡಿ ಮೇಲ್ವಿಚಾರಕರು, ಅಧಿಕಾರಿಗಳಿಗೂ ತರಬೇತಿ ನೀಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಎಲ್ಲ ಜಿಲ್ಲೆಗಳಲ್ಲಿ ಅಂಗನವಾಡಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲು ಮಂಜೂರಾತಿ ನೀಡಿದರೆ ಎಲ್ಲ ಜಿಲ್ಲೆಗಳಲ್ಲಿ ತರಬೇತಿಗಳನ್ನು ಪ್ರಾರಂಭಿಸಲಾಗುವುದು ಎಂದರು.
 
ತರಬೇತಿ ಪಡೆದ ಅಂಗನವಾಡಿ ಕಾರ್ಯಕರ್ತೆಯರು ಮಾದರಿ ಅಂಗನವಾಡಿ ಕೇಂದ್ರಗಳನ್ನು ರಚಿಸುವ ಮೂಲಕ ಮಕ್ಕಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಚಟುವಟಿಕೆ ಹಮ್ಮಿಕೊಳ್ಳಬೇಕು. ಶಾಲಾ ಪೂರ್ವದಲ್ಲಿಯೇ ಮಕ್ಕಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದರಿಂದ ಒಂದನೇ ತರಗತಿಯಲ್ಲಿ ದಾಖಲಾಗುವ ಮಕ್ಕಳ ಕಲಿಕಾ ಸಾಮರ್ಥ್ಯ ಬೇರೆ ಮಕ್ಕಳಿಗಿಂತ ಭಿನ್ನವಾಗಿರಬೇಕು.

ಈಗಾಗಲೇ ಸೇಡಂನಲ್ಲಿ ಪ್ರಾಯೋಗಿಕವಾಗಿ ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಿಸಿರುವ ಶಾಲಾ ಪೂರ್ವ ಕಲಿಕಾ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮದಿಂದ ಈ ವ್ಯತ್ಯಾಸ ಕಂಡು ಬಂದಿದ್ದರೆ ಈ ಯೋಜನೆಯನ್ನು ಎಲ್ಲ ತಾಲೂಕು, ಜಿಲ್ಲೆಗಳಿಗೆ ವಿಸ್ತರಿಸಲು ಅನುಕೂಲವಾಗುವುದು. ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ಅನುಷ್ಠಾನ ಸಂಸ್ಥೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳ ತರಬೇತಿಗಾಗಿ ವೇಳಾಪಟ್ಟಿಯನ್ನು ರೂಪಿಸಬೇಕು. 

Advertisement

ನಂತರ ಯೋಜನೆಯ ವಿವಿಧ ಹಂತಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವುದು. ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಚಟುವಟಿಕೆಗಳು ಪ್ರಾರಂಭವಾದ ಆರು ತಿಂಗಳು ಅಥವಾ ಒಂದು ವರ್ಷದ ನಂತರ ಕಾರ್ಯಕ್ರಮದ ಮೌಲ್ಯಮಾಪನ ಕೈಗೊಳ್ಳಲಾಗುವುದು ಎಂದರು. 

ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕಲಬುರಗಿ ವಿಭಾಗದ 13,332 ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಾಮರ್ಥ್ಯ ಅಭಿವೃದ್ಧಿಗಾಗಿ ವಿನೂತನ ಯೋಜನೆ ಹಮ್ಮಿಕೊಂಡಿದೆ. 

ಎಚ್‌.ಕೆ.ಆರ್‌.ಡಿ.ಬಿ. ಜಂಟಿ ನಿರ್ದೇಶಕ ಬಸವರಾಜ, ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಟಾಟಾ ಟ್ರಸ್ಟಿನ ಕಾರ್ಯನಿರ್ವಾಹಕ ನಿರ್ದೇಶಕ ಶಿವಕುಮಾರ, ಇಂಡಿಯಾ ಲಿಟ್ರಸಿ ಪ್ರೊಜೆಕ್ಟ್ವ್ಯ ವಸ್ಥಾಪಕ ರಂಗರಾಜನ್‌, ಕಲಿಕೆ ಟಾಟಾ ಟ್ರಸ್ಟ್‌ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ, ಕಮ್ಯುನಿಟಿ ಡೆವಲಪ್‌ಮೆಂಟ್‌ ಫೌಂಡೇಶನ್‌ ನಿರ್ದೇಶಕ ಅರುಣ ಸೇರಾವ್‌ ಮತ್ತಿತರರು ಪಾಲ್ಗೊಂಡಿದ್ದರು.

ವರ್ಷದಲ್ಲಿ 10 ದಿನ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಐದು ವರ್ಷಗಳ ಹಿಂದೆ ಕಲಬುರಗಿ ವಿಭಾಗದಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಪ್ರಾರಂಭಿಸಲಾಗಿತ್ತು. ಹೈಕ ಪ್ರದೇಶ ಅಭಿವೃದ್ಧಿ ಮಂಡಳಿಯು ಈ ಪ್ರಯೋಗವನ್ನು ವಿಭಾಗದ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಯೋಜನೆಯಲ್ಲಿ ಅನುಷ್ಠಾನ ಸಂಸ್ಥೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ನೀಡುವ ಮೂಲಕ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲು ಅಣಿಗೊಳಿಸಲಾಗುತ್ತದೆ. ಅಂಗನವಾಡಿ ಕೇಂದ್ರಕ್ಕೆ ಅವಶ್ಯಕವಾಗಿ ಬೇಕಾಗುವ ಕಲಿಕಾ ಸಾಮಗ್ರಿಗಳನ್ನು ನೀಡಲಾಗುತ್ತದೆ. ಮೂರು ವರ್ಷಗಳ ಯೋಜನೆ ಇದಾಗಿದ್ದು, ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗೆ ಒಂದು ವರ್ಷಕ್ಕೆ 10 ದಿನ ಸಾಮರ್ಥ್ಯ ಅಭಿವೃದ್ಧಿ ತರಬೇತಿಯನ್ನು ಮೂರು ಹಂತಗಳಲ್ಲಿ ನೀಡಲಾಗುತ್ತದೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್‌ ತಿಳಿಸಿದ್ದಾರೆ.

ಯೋಜನೆ ಕಾರ್ಯರೂಪಕ್ಕೆ ತರಲು ಟಾಟಾ ಟ್ರಸ್ಟ್‌ ಮತ್ತು ಇಂಡಿಯಾ ಲಿಟ್ರಸಿ ಪ್ರೊಜೆಕ್ಟ್ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ 3098 ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯವನ್ನು ಕಮ್ಯುನಿಟಿ ಡೆವಲಪ್‌ಮೆಂಟ್‌ ಫೌಂಡೇಶನ್‌ ಹಾಗೂ ಇಂಡಿಯಾ ಲಿಟ್ರಸಿ ಪ್ರೊಜೆಕ್ಟ್ ಕೈಗೊಳ್ಳುವುದು. ವಿಭಾಗದ ಇತರೆ ಜಿಲ್ಲೆಗಳಾದ ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳದ ಅಂಗನವಾಡಿ ಕೇಂದ್ರಗಳಲ್ಲೂ ಟಾಟಾ ಟ್ರಸ್ಟ್‌ ಕಲಿಕೆ ಹಾಗೂ ಟಾಟಾ ಟ್ರಸ್ಟ್‌
ವತಿಯಿಂದ ಈ ಯೋಜನೆ ಜಾರಿಗೆ ತರಲಾಗುವುದು.
ಸುಬೋಧ ಯಾದವ್‌, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next