ತಲಪಾಡಿ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ನಾಲ್ಕುವರೆ ವರ್ಷಗಳಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತರುವ ಕಾರ್ಯ ಮಾಡಿದ್ದು, ಇನ್ನೊಂದು ಬಾರಿ ಅಧಿಕಾರಕ್ಕೆ ಬಂದರೆ ಜನಪರ ಕಾನೂನು ಗಳನ್ನು ಅನುಷ್ಠಾನ ಮಾಡಲಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು. ಅವರು ತಲಪಾಡಿ ಕೆ.ಸಿ. ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು.
20 ವರ್ಷಗಳಿಂದ ಜನರ ಒಕ್ಕೊರಲ ಬೇಡಿಕೆಯಾಗಿದ್ದ ಹಕ್ಕುಪತ್ರ ವಿತರಣೆಯನ್ನು ರಾಜ್ಯಾದ್ಯಂತ ಕೈಗೊಳ್ಳಲಾಗಿದೆ. ಈ ಮೂಲಕ ಬಡವರು ಸ್ವಂತ ಮನೆಯಲ್ಲಿ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. 2,700 ಕೋಟಿ ಅನುದಾನ ಅಲ್ಪಸಂಖ್ಯಾಕರ ಕಲ್ಯಾಣಕ್ಕಾಗಿ ಸರಕಾರ ನೀಡುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸುವ ಯೋಜನೆಯನ್ನು ಸರಕಾರ ರೂಪಿಸಿದೆ. ಫಲಾನುಭವಿಗಳಿಗೆ ಸರಿಯಾಗಿ ರೇಶನ್ ದೊರಕುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ರೇಶನ್ ಕಾರ್ಡ್‌ನಲ್ಲಿ ಕೂಪನ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ 10 ಲಕ್ಷ ಬೋಗಸ್ ರೇಶನ್ ಕಾರ್ಡುಗಳನ್ನು ಪತ್ತೆ ಹಚ್ಚಿ ರದ್ದುಪಡಿಸಲಾಗಿದೆ ಎಂದರು.
ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಸದಸ್ಯರಾದ ಸುರೇಖಾ ಚಂದ್ರಹಾಸ್, ಸಿದ್ದೀಖ್ ಕೊಳಂಗೆರೆ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಆರ್. ಉಳ್ಳಾಲ್, ತಲಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೆಟ್ಟಿ, ಯು.ಬಿ. ಸಲೀಂ, ಟಿ.ಎಸ್. ನಿಸಾರ್, ಅಬ್ದುಲ್ ರವೂಫ್ ಉಪಸ್ಥಿತರಿದ್ದರು. ತಾ.ಪಂ. ಮಾಜಿ ಸದಸ್ಯ ಮುಸ್ತಾಫ ಹರೇಕಳ ಪ್ರಸ್ತಾವನೆಗೈದರು.
135 ಕೋಟಿ ರೂ. ಪ್ರಸ್ತಾವನೆ
ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಶಾಶ್ವತ ಯೋಜನೆಯ ನೀಲನಕ್ಷೆ ತಯಾರಿಸಲಾಗಿದ್ದು, ಸರಕಾರದ ಮುಂದೆ ಸಲ್ಲಿಸಲಾಗಿದೆ. ಚುನಾವಣೆ ಬಳಿಕ ಆಯ್ಕೆಯಾದಲ್ಲಿ ಅದನ್ನು ಜಾರಿಗೊಳಿಸುವುದು ನಿಶ್ಚಿತವಾಗಿದೆ. ತಲಪಾಡಿ ಗ್ರಾಮದ ಕಿನ್ಯಾ ಫಲಾಹ್ ಶಾಲೆಯಿಂದ ಪಿಲಿಕೂರು ರಸ್ತೆ, ಹೊಸನಗರ ರಸ್ತೆ, ಮುಳ್ಳುಗುಡ್ಡೆ, ದೇವಿಪುರ , ಕೆಳಗಿನ ತಲಪಾಡಿ, ಮೇಲಿನ ತಲಪಾಡಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ.
–
ಯು.ಟಿ. ಖಾದರ್ , ಸಚಿವರು