ಮಂಗಳೂರು: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವವರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಯೋಜನೆ(ಪಿಎಂಎನ್‌ಡಿಪಿಐ)ಯಡಿ ಪೆರಿಟೋನಿಯಲ್ ಡಯಾಲಿಸಿಸ್ ಸೌಲಭ್ಯವನ್ನು ದೇಶದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಅಧಿಕೃತವಾಗಿ ಜಾರಿಗೆ ತರಲು ಕೇಂದ್ರ ಸರಕಾರ ಮುಂದಾಗಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಂಡು ಬಳಿಕ ಸ್ಥಗಿತಗೊಂಡಿದ್ದ ಈ ಸೌಲಭ್ಯ ಮತ್ತೆ ಮರುಜೀವ ಪಡೆಯುವ ಆಶಾವಾದ ಗರಿಗೆದರಿದೆ. 2016ರಲ್ಲಿ ಈ ವ್ಯವಸ್ಥೆಯನ್ನು ರೂಪಿಸಲಾಗಿದ್ದು ಕೇಂದ್ರ ಆರೋಗ್ಯ ಸಚಿವಾಲಯ ಇದೀಗ ದೇಶದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಅನುಷ್ಠಾನಕ್ಕೆ ತರಲು ಉದ್ದೇಶಿಸಿದೆ.
ಮಂಗಳೂರಿನಲ್ಲಿ ಅನುಷ್ಠಾನಗೊಂಡಿತ್ತು
ಬಡರೋಗಿಗಳು ಮನೆಯಲ್ಲೇ ಸರಳವಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯುವಂತಾಗಲು ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್ 2014ರಲ್ಲಿ ಪೆರಿಟೋನಿಯಲ್ ಡಯಾಲಿಸಿಸ್ ವ್ಯವಸ್ಥೆಯನ್ನು ಸರಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸುವ ಯೋಜನೆ ರೂಪಿಸಿದ್ದರು. ಪ್ರಾಯೋಗಿಕ ಹಂತದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಹಾಗೂ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಜಾರಿಗೊಳಿಸಿದ್ದರು. ಮಂಗಳೂರಿನಲ್ಲಿ ಪ್ರಥಮವಾಗಿ ಪೆರಿಟೊನಿಯಲ್ ಡಯಾಲಿಸಿಸ್‌ಗೆ ಚಾಲನೆ ನೀಡಲಾಗಿತ್ತು.
ಬಿಪಿಎಲ್ ವರ್ಗದ 20 ಜನರನ್ನು ಆಯ್ಕೆ ಮಾಡಿ ಅವರಿಗೆ ಸಲಕರಣೆಗಳನ್ನು ಒದಗಿಸಲಾಗಿತ್ತು. ಆರೋಗ್ಯ ಕೋ-ಅರ್ಡಿನೇಟರ್ ರೋಗಿಗಳ ಮನೆಗೆ ತೆರಳಿ ಡಯಾಲಿಸಿಸ್ ವ್ಯವಸ್ಥೆ ಬಗ್ಗೆ ರೋಗಿಗಳಿಗೆ ಮತ್ತು ಮನೆಯವರಿಗೆ ಮಾಹಿತಿ ಹಾಗೂ ತರಬೇತಿ ನೀಡಿದ್ದರು. ಪೈಲಟ್ ಯೋಜನೆಯಲ್ಲಿ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಇದರ ಫಲಿತಾಂಶ ಹಾಗೂ ಸ್ಥಿತಿಗತಿಯನ್ನು ಅವಲೋಕಿಸಿ ರಾಜ್ಯದ ಇತರ ಕಡೆಗಳಿಗೆ ವಿಸ್ತರಿಸುವ ಯೋಜನೆ ಹೊಂದಲಾಗಿತ್ತು. ಸಾಕಷ್ಟು ರೋಗಿಗಳು ಇದರಲ್ಲಿ ಚಿಕಿತ್ಸೆ ಪಡೆಯಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಪೈಲಟ್ ಯೋಜನೆಯನ್ನು ಶಾಶ್ವತವಾಗಿ ಮುಂದುವರಿಸಲು ಸರಕಾರದ ಅಂಗೀಕಾರ ಆಗತ್ಯವಿತ್ತು. ಆದರೆ ಅಂಗೀಕಾರ ದೊರೆಯದ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತಗೊಂಡಿತ್ತು.
ಏನಿದು ಪೆರಿಟೋನಿಯಲ್ ಡಯಾಲಿಸಿಸ್?
ಕಿಡ್ನಿ ವೈಫಲ್ಯಕ್ಕೊಳಗಾದವರು ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಸ್ವಯಂ ಆಗಿ ಡಯಾಲಿಸಿಸ್ ಮಾಡಿಕೊಳ್ಳುವ ವ್ಯವಸ್ಥೆಯೇ ಪೆರಿಟೋನಿಯಲ್ ಡಯಾಲಿಸಿಸ್. ಮೊದಲಿಗೆ ರೋಗಿ ಆಸ್ಪತ್ರೆಗೆ ಬಂದು ಸಣ್ಣ ಶಸ್ತ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಕಿಬ್ಬೊಟ್ಟೆಯಲ್ಲಿ ಟ್ಯೂಬ್ ಅಳವಡಿಸಿ ಅದರ ಮೂಲಕ ನಿರ್ದಿಷ್ಟ ಔಷಧಗಳನ್ನು ಸೇರಿಸಲಾಗುತ್ತದೆ. ಬಳಿಕ ಈ ಪ್ರಕ್ರಿಯೆಯನ್ನು ರೋಗಿ ಸ್ವತಃ ಮನೆಯಲ್ಲೇ ಮಾಡಬಹುದು. ತಿಂಗಳಿಗೊಮ್ಮೆ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ಹೆಲ್ತ್ ಕೋ-ಅರ್ಡಿನೇಟರ್‌ಗಳು ರೋಗಿಗಳಿಗೆ ತರಬೇತಿ ನೀಡುತ್ತಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ 2014ರಲ್ಲಿ ರಾಜ್ಯ ಸರಕಾರದಿಂದ ಪೈಲಟ್ ಯೋಜನೆಯಾಗಿ ಪೆರಿಟೋನಿಯಲ್ಡಯಾಲಿಸಿಸ್ ಅನುಷ್ಠಾನಗೊಂಡಿತ್ತು. 20 ರೋಗಿಗಳನ್ನು ಆಯ್ಕೆ ಮಾಡಿ ಚಿಕಿತ್ಸೆ ಸೌಲಭ್ಯ ಒದಗಿಸಲಾಗಿದ್ದು ಯೋಜ ನೆಯ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ.
– ಡಾ| ರಾಜೇಶ್ವರಿ ದೇವಿ, ವೈದ್ಯಕೀಯ ಅಧೀಕ್ಷಕರು, ವೆನ್ಲಾಕ್ ಆಸ್ಪತ್ರೆ
ಕೇಶವ ಕುಂದರ್