Advertisement

ಟ್ಯಾಬ್‌ ಬ್ಯಾಂಕಿಂಗ್‌ ಸಹಿತ  ನೂತನ ಸೌಲಭ್ಯಗಳ ಅಳವಡಿಕೆ

07:55 AM Aug 14, 2017 | Team Udayavani |

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿಸಿ) ಹಲವು ಸಾಧನೆಗಳ ಮೂಲಕ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿದೆ. 18 ಬಾರಿಗೆ ಅಪೆಕ್ಸ್‌ ಬ್ಯಾಂಕ್‌ ಪ್ರಶಸ್ತಿ, 18 ಬಾರಿ ನಬಾರ್ಡ್‌ ಪ್ರಶಸ್ತಿಗಳನ್ನು ಪಡೆದಿದೆ. 2 ಬಾರಿ ಎಫ್‌ಸಿಬಿಎ ರಾಷ್ಟ್ರೀಯ ಪ್ರಶಸ್ತಿಯಿಂದ ಪುರಸ್ಕೃತವಾಗಿದೆ. ಸ್ವಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನದಲ್ಲಿ 43,156
ಗುಂಪುಗಳನ್ನು ರಚಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆದಿದೆ. 23 ವರ್ಷಗಳಿಂದ ಅಧ್ಯಕ್ಷರಾಗಿ ಬ್ಯಾಂಕನ್ನು ಮುನ್ನಡೆಸುತ್ತಿರುವ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ ಮುಂಬಯಿಯ ಬ್ಯಾಂಕಿಂಗ್‌ ಫ್ರಾಂಟಿಯರ್ ಮುಂಬಯಿ ಎಫ್‌ಸಿಬಿಎ-2017ರ ಪ್ರತಿಷ್ಠಿತ ಬೆಸ್ಟ್‌ ಚೇರ್‌ಮನ್‌ ನ್ಯಾಶನಲ್‌ ಪ್ರಶಸ್ತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಉದಯವಾಣಿ ಸಂದರ್ಶನದಲ್ಲಿ ತನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Advertisement

– ರಾಷ್ಟ್ರೀಯ ಪುರಸ್ಕಾರ ಲಭಿಸಿದೆ. ಹೇಗೆನಿಸುತ್ತಿದೆ ?
ಇದು ನನಗೆ ಲಭಿಸಿರುವ ಪ್ರಶಸ್ತಿ ಎನ್ನುವುದಕ್ಕಿಂತಲೂ ಅವಿಭಜಿತ ದ.ಕ. ಜಿಲ್ಲೆಯ ಸಮಸ್ತ ಸಹಕಾರಿಗಳಿಗೆ ಸಂದ ಗೌರವ ಎಂದು ಭಾವಿಸುತ್ತೇನೆ. ದೇಶದಲ್ಲಿ ನಮ್ಮ ಜಿಲ್ಲಾ ಸಹಕಾರಿ ಬ್ಯಾಂಕಿಗೆ ವಿಶೇಷ ಸ್ಥಾನವಿದೆ. ಸಹಕಾರ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ. 23 ವರ್ಷಗಳಿಂದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷನಾಗಿದ್ದೇನೆ. 6 ವರ್ಷ ಕಾರ್ಕಳ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷನಾಗಿ, 3 ವರ್ಷ ಕಾರ್ಕಳ ಟಿಎಪಿಸಿಎಂ ಅಧ್ಯಕ್ಷನಾಗಿ, 5 ವರ್ಷ ಅಪೆಕ್ಸ್‌ ಬ್ಯಾಂಕ್‌ನಲ್ಲಿ ನಿರ್ದೆಶಕನಾಗಿ, ಅಧ್ಯಕ್ಷನಾಗಿ ಸೇವೆ ಮಾಡಿದ್ದೇನೆ. ತಳಮಟ್ಟದಿಂದ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪಡೆದ ಅನುಭವ ಸಹಕಾರ ಕ್ಷೇತ್ರದಲ್ಲಿ ಯಶಸ್ಸಿಗೆ ಕಾರಣವಾಗಿದೆ.

– ಕ್ಯಾಶ್‌ಲೆಸ್‌ ಪರಿಕಲ್ಪನೆ ಹೇಗೆ ಅನುಷ್ಠಾನಗೊಳ್ಳುತ್ತಿದೆ ?
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಇಡೀ ರಾಷ್ಟ್ರದಲ್ಲೇ ಹಲವು ಪ್ರಥಮಗಳ ಹೆಗ್ಗಳಿಕೆ ಹೊಂದಿದೆ. ಇವತ್ತು ಏನು ಕ್ಯಾಶ್‌ಲೆಸ್‌ ಪರಿಕಲ್ಪನೆ ಅನುಷ್ಠಾನಗೊಳ್ಳುತ್ತಿದೆ ಇದನ್ನು 3 ವರ್ಷಗಳ ಹಿಂದೆಯ ಸಹಕಾರಿ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ನಮ್ಮದಾಗಿದೆ. ಗ್ರಾಮೀಣ ಭಾಗದಲ್ಲಿ ಪೊಸ್‌ ಮೆಷಿನ್‌ ಮೈಕ್ರೊ ಎಟಿಎಂಗಳನ್ನು ಅಳವಡಿಸಿ ನಗದು ಪಾವತಿ, ಠೇವಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ. ಸಹಕಾರಿ ಕ್ಷೇತ್ರದ ಈ ಯಶಸ್ವಿ ಪ್ರಯೋಗವನ್ನು ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳು ಅಳವಡಿಕೆ ಮಾಡಿವೆೆ. ದೇಶದಲ್ಲಿ ರುಪೆ ಕಿಸಾನ್‌ ಡೆಬಿಟ್‌ ಕಾರ್ಡ್‌ ಪ್ರಥಮವಾಗಿ ನೀಡಿದ ಬ್ಯಾಂಕ್‌ ನಮ್ಮದಾಗಿದೆ. ನಮ್ಮ ಬ್ಯಾಂಕಿನ ವ್ಯಾಪ್ತಿಯಲ್ಲಿ ಬರುವ 72,000 ಮಂದಿಗೆ ರುಪೆ ಕಿಸಾನ್‌ ಡೆಬಿಟ್‌ ಕಾರ್ಡ್‌ ನೀಡಲಾಗಿದೆ. ಇನ್ನೂ 20,000 ಮಂದಿಗೆ ನೀಡಲಾಗುತ್ತಿದೆ. ಸಹಕಾರಿ ಬ್ಯಾಂಕ್‌ಗಳಲ್ಲಿ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ.

– ವಾಣಿಜ್ಯ ಬ್ಯಾಂಕ್‌ಗಳ ಪ್ರಬಲ ಸ್ಪರ್ಧೆಯ ನಡುವೆಯೂ ಎಸ್‌ಸಿಡಿಸಿಸಿ ಬ್ಯಾಂಕಿನ ಯಶಸ್ಸನ್ನು ಯಾವ ರೀತಿ ವಿಶ್ಲೇಷಿಸಬಹುದು ?
ನಾವು ಕೊಡುವ ಸೇವೆಯಿಂದ ಇದು ಸಾಧ್ಯವಾಗಿದೆ. ಅವಿಭಜಿತ ದ.ಕ. ಜಿಲ್ಲೆ ಬ್ಯಾಂಕಿಂಗ್‌ ಕ್ಷೇತ್ರದ ತವರೂರು ಎಂಬ ಮಾತಿದೆ. ವಾಣಿಜ್ಯ ಬ್ಯಾಂಕ್‌ಗಳು ಶಕ್ತಿಶಾಲಿಯಾಗಿರುವ ಜಿಲ್ಲೆ . ಇದರ ನಡುವೆಯೂ ಎಸ್‌ಸಿಡಿಸಿಸಿ ಬ್ಯಾಂಕ್‌ ವ್ಯವಹಾರ ಮತ್ತು ಸೇವೆಯಲ್ಲಿ ಯಶಸ್ಸು ಸಾಧಿಸಿ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. 102 ಶಾಖೆಗಳನ್ನು ಹೊಂದಿದೆ. ನಿರಂತರವಾಗಿ ಲಾಭದಲ್ಲಿ ಮುನ್ನಡೆಯುತ್ತಾ ಬಂದು ಕಳೆದ ಅರ್ಥಿಕ ಸಾಲಿನಲ್ಲಿ 24.07 ಕೋ.ರೂ. ಲಾಭಗಳಿಸಿದೆ. ಇದು ಮುಖ್ಯವಾಗಿ ಗ್ರಾಹಕರಿಗೆ ನಾವು ನೀಡುವ ಸೇವೆ, ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ಸಾಧ್ಯವಾಗಿದೆ. ನಮ್ಮ ಕೊಡಿಯಾಲಬೈಲ್‌ ಶಾಖೆಯಲ್ಲಿ ಬೆಳಗ್ಗೆ 8ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಇದು ಉದ್ಯೋಗಸ್ಥರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಿದೆ. ಬ್ಯಾಂಕಿಂಗ್‌ ಆನ್‌ ವೀಲ್‌ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದವರು ನಾವು. ವಾಹನದಲ್ಲಿ ಎಟಿಎಂ ಇಟ್ಟು ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಅಲ್ಲಿ ಚಿನ್ನಾಭರಣ ಮೇಲೆ ಸಾಲ, ಠೇವಣಿ ಸ್ವೀಕಾರ, ಎಟಿಎಂ ಸೌಲಭ್ಯ ನೀಡುತ್ತಿದೆ. ಈ ರೀತಿಯ ಸೇವೆ ಯಾವುದೇ ಕಮರ್ಷಿಯಲ್‌ ಬ್ಯಾಂಕ್‌ಗಳು ನೀಡುತ್ತಿಲ್ಲ.

– ಗ್ರಾಹಕ ಸೇವೆಯ ನಿಟ್ಟಿನಲ್ಲಿ ಹೊಸ ಯೋಜನೆಗಳು ?
ಎಸ್‌ಸಿಡಿಸಿಸಿ ಬ್ಯಾಂಕ್‌ ತನ್ನ ಸದಸ್ಯ ಸಹಕಾರ ಸಂಘಗಳಿಗೆ, ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಆನೇಕ ವಿನೂತನ ಸೇವೆಗಳನ್ನು ನೀಡುತ್ತಾ ಬಂದಿದೆ. ಈ ಪರಂಪರೆ ನಿಂತ ನೀರಾಗ ಬಾರದು. ಈ ನಿಟ್ಟಿನಲ್ಲಿ ಬ್ಯಾಂಕ್‌ ಅನೇಕ ಯೋಜನೆಗಳನ್ನು ಈಗಾಗಲೇ ಚಿಂತನೆ ನಡೆಸಿದ್ದು ಇವುಗಳು ಅನುಷ್ಠಾನದ ಹಾದಿಯಲ್ಲಿವೆ. ಇದರಲ್ಲಿ ಮುಖ್ಯವಾಗಿ ಉಲ್ಲೇಖೀಸಬಹುದಾದರೆ ಟ್ಯಾಬ್‌ ಬ್ಯಾಂಕಿಂಗ್‌, ಮೊಬೈಲ್‌ ಮೂಲಕ ಬ್ಯಾಂಕಿನ ಶಾಖೆಗಳ ನಡುವೆ ಒಂದು ಖಾತೆಯಿಂದ ಮತ್ತೂಂದು ಖಾತೆಗೆ ಹಣ ವರ್ಗಾಯಿಸುವ ಮೊಬೈಲ್‌ ಬ್ಯಾಂಕಿಂಗ್‌, ಇಂಟರ್‌ ಬ್ಯಾಂಕಿಂಗ್‌ ಮೊಬೈಲ್‌ ಪೇಮೆಂಟ್‌ ಸಿಸ್ಟಮ್‌ ಯೋಜನೆ -ಎನ್‌ಪಿಸಿಐ, ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆ, ಕಾಮನ್‌ ಸಾಫ್ಟ್‌ವೇರ್‌ ಪ್ರಮುಖವಾದುದು. ಕಾಮನ್‌ ಸಾಫ್ಟ್‌ವೇರ್‌ ಯೋಜನೆಯನ್ನು ಏಕರೂಪದ ಲೆಕ್ಕಪದ್ಧತಿಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ರೂಪಿಸಲಾಗುತ್ತಿದೆ. ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕಾಮನ್‌ ಸಾಫ್ಟ್‌ವೇರ್‌ ಅಳವಡಿಸುವುದರಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳ ನಡುವೆ ನೇರ ವ್ಯವಹಾರ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇದೊಂದು ಅತ್ಯಂತ ಉಪಯುಕ್ತ ಯೋಜನೆಯಾಗಲಿದೆ. 

Advertisement

ಟ್ಯಾಬ್‌ ಬ್ಯಾಂಕಿಂಗ್‌ ಸೇವೆ ಹೇಗೆ ಮತ್ತು ಯಾವಾಗ ?
ಬ್ಯಾಂಕ್‌ ವ್ಯವಹಾರವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಟ್ಯಾಬ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸಲು ಬ್ಯಾಂಕ್‌ ಮುಂದಾಗಿದೆ. ಮನೆ ಅಥವಾ ಕಚೇರಿಗಳಲ್ಲಿ ಕುಳಿತು ಮೊಬೈಲ್‌ ಸಂಪರ್ಕವಿರುವ ಬ್ಯಾಂಕಿನ ಟ್ಯಾಬ್ಲೆಟ್‌ ಬಳಸಿ ತಮ್ಮ ಬ್ಯಾಂಕ್‌ ಖಾತೆಯನ್ನು ತೆರೆಯುವ ಹಾಗೂ ನಿರ್ವಹಿಸುವ ನೂತನ ವ್ಯವಸ್ಥೆ ಇದಾಗಿದೆ. ಇದರಿಂದ ಗ್ರಾಹಕರು ಪ್ರತಿ ಬಾರಿ ಶಾಖೆಗಳಿಗೆ ಅಲೆದಾಡುವುದು ತಪ್ಪುತ್ತದೆ. ಇದನ್ನು ಅದಷ್ಟು ಬೇಗ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ಜಾರಿಯಲ್ಲಿವೆ.

-ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಸರಕಾರದ ಸಾಲಮನ್ನಾ ಯೋಜನೆಯ ಅನುಷ್ಠಾನ ಹೇಗಾಗುತ್ತಿದೆ ?
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಅರ್ಹ ರೈತರಿಗೆ 360 ಕೋ.ರೂ. ಸಾಲ ಮನ್ನಾವಾಗುತ್ತದೆ. 83,000 ಮಂದಿ ರೈತರಿಗೆ ಇದರ ಪ್ರಯೋಜನ ಸಿಗುತ್ತಿದೆ. ಇದರ ಜತೆಗೆ ಈಗಾಗಲೇ ಸಾಲ ಮರುಪಾವತಿಸಿರುವ ರೈತರಿಗೂ ಇದರ ಪ್ರಯೋಜನ ಸಿಗಬೇಕು ಎಂದು ಸರಕಾರ ಮತ್ತು ಇಲಾಖೆಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇದರಿಂದ ಸುಮಾರು 13,000 ರೈತರಿಗೆ ಪ್ರಯೋಜನವಾಗಲಿದೆ.

ಸಂದರ್ಶನ: ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next