Advertisement

ಮಣಿಪಾಲ ಆರೋಗ್ಯ ಕಾರ್ಡ್‌ ನೋಂದಣಿ ಪ್ರಕ್ರಿಯೆಗೆ ಚಾಲನೆ

10:50 AM Jun 18, 2020 | mahesh |

ಉಡುಪಿ: ಮಣಿಪಾಲ ಆರೋಗ್ಯ ಕಾರ್ಡ್‌ ಮೂಲಕ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡುವಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಯಶಸ್ವಿಯಾಗಿದೆ ಎಂದು ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ತಿಳಿಸಿದರು. ಅವರು ಕೆಎಂಸಿ ಆಸ್ಪತ್ರೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ “ಮಣಿಪಾಲ ಆರೋಗ್ಯ ಕಾರ್ಡ್‌ 2020’ರ ಪ್ರಥಮ ಕಾರ್ಡನ್ನು ವಿತರಿಸಿ, ಹೊಸ ಕಾರ್ಡ್‌ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು.

Advertisement

ಸಂಸ್ಥೆಯ ಸಂಸ್ಥಾಪಕ ದಿ| ಡಾ| ಟಿಎಂಎ ಪೈಯವರ ಕನಸನ್ನು ಈಡೇರಿಸಲು ಆರೋಗ್ಯ ಸೇವೆ ಎಲ್ಲರಿಗೂ ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡಲು ಮಣಿಪಾಲ ಆರೋಗ್ಯ ಕಾರ್ಡ್‌ ಪ್ರಾರಂಭಿಸಲಾಯಿತು. ಕಳೆದ 20 ವರ್ಷಗಳಿಂದ ಉತ್ತಮ ಸೇವೆ ಜತೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದರೊಂದಿಗೆ ಯೋಜನೆಗೆ ಹೆಚ್ಚು ಸದಸ್ಯರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಸ್ಮಾರ್ಟ್‌ ಕಾರ್ಡ್‌
ಈ ಕಾರ್ಡ್‌ಗಳನ್ನು ಸುಲಭವಾಗಿ ನೋಂದಾಯಿಸಲು ಹಾಗೂ ಪೂರ್ವ ಸಂಖ್ಯಾ ಮುದ್ರಿತ ಸ್ಮಾರ್ಟ್‌ ಕಾರ್ಡನ್ನು ಪರಿಚಯಿಸುತ್ತಿದ್ದೇವೆ. ಇದನ್ನು ಫ‌ಲಾನುಭವಿಗಳಿಗೆ ಸ್ಥಳದಲ್ಲೇ ನೀಡಲಾಗುತ್ತದೆ ಎಂದರು. ಕುಲಪತಿ ಡಾ| ಎಚ್‌. ವಿನೋದ ಭಟ್‌, ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಕಸ್ತೂರ್ಬಾ ಆಸ್ಪತ್ರೆ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಉಪಸ್ಥಿತರಿದ್ದರು.

ವಿಶೇಷ ರಿಯಾಯಿತಿ
ಮಣಿಪಾಲ ಆರೋಗ್ಯ ಕಾರ್ಡ್‌ ಹೊಂದಿರುವವರಿಗೆ ಎಲ್ಲ ತಜ್ಞ ಅಥವಾ ಸೂಪರ್‌ ಸ್ಪೆಷಲಿಸ್ಟ್‌ ವೈದ್ಯರ ಹೊರ ರೋಗಿ ಸಮಾಲೋಚನೆ ಮೇಲೆ ಶೇ. 50, ಪ್ರಯೋಗಾಲಯ ಪರೀಕ್ಷೆಗಳ ಮೇಲೆ ಶೇ. 30, ಡಯಾಲಿಸಿಸ್‌ನಲ್ಲಿ 100 ರೂ., ಆಸ್ಪತ್ರೆಯ ಔಷಧಾಲಯದಿಂದ ಖರೀದಿಸಿದ ಔಷಧಗಳ ಮೇಲೆ ಶೇ. 12, ಬಿಲ್‌ನಲ್ಲಿ ಶೇ. 25ರಷ್ಟು ರಿಯಾ ಯಿತಿ ಸಿಗಲಿದೆ. ಕಾರ್ಡ್‌ ಶುಲ್ಕದ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ 9980 854 700 ಸಂಖ್ಯೆಗೆ ಕರೆ ಮಾಡ ಬಹುದು.

ಅವಧಿ 2 ವರ್ಷಗಳಿಗೆ ವಿಸ್ತರಣೆ
ಮಣಿಪಾಲ ಆರೋಗ್ಯ ಕಾರ್ಡ್‌ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಗಳಿಗೆ ವಿಸ್ತರಿಸಬಹುದು. ಜತೆಗೆ ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆಯನ್ನು ಸೇರ್ಪಡೆಗೊಳಿಸಲಾಗಿದೆ. ಈ ಕಾರ್ಡ್‌ ಹೊಂದಿರುವವರು ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಗೋವಾ, ಕಟೀಲಿನಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವೆಗಳ ಪ್ರಯೋಜನ ಪಡೆಯಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next