Advertisement

ಕಸ್ತೂರಿ ರಂಗನ್‌ ವರದಿ ಅನುಷ್ಠಾನ ಈಗ ಅನಿವಾರ್ಯ

06:00 AM Aug 26, 2018 | |

ಮಡಿಕೇರಿ: ಕೊಡಗು ಅನಾಹುತದ ಮೂಲಕ ಪ್ರಕೃತಿ ಕಲಿಸಿದ ಪಾಠದ ಬಳಿಕ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಪಶ್ಚಿಮ ಘಟ್ಟ ಸಂರಕ್ಷಣೆಗೆ ಡಾ. ಕಸ್ತೂರಿ ರಂಗನ್‌ ವರದಿ ಜಾರಿಯೇ ಇಂತಹ ವಿಪತ್ತು ತಡೆಗೆ ಸೂಕ್ತ ಮದ್ದು ಎಂಬ ತೀರ್ಮಾನಕ್ಕೆ ಬಂದಿದೆ.

Advertisement

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕೃತಿ ವಿಕೋಪಗಳು ಮತ್ತಷ್ಟು ಸಂಭವಿಸಿ, ಅಪಾರ ಜೀವ ವೈವಿಧ್ಯ ನಷ್ಟವಾಗುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಕಸ್ತೂರಿ ರಂಗನ್‌ ವರದಿಯನ್ನು ಕೆಲ ತಿದ್ದುಪಡಿಗಳನ್ನು ಮಾಡಿ ಜಾರಿಗೊಳಿಸಬಹುದು ಎಂದು ಈ ಹಿಂದೆಯೇ ಸರ್ಕಾರವನ್ನು ಅರಣ್ಯ ಇಲಾಖೆ ಎಚ್ಚರಿಸಿತ್ತು. ಇದೀಗ ಕೊಡಗಿನ ಘಟನೆಯನ್ನು ಉಲ್ಲೇಖೀಸಿ ಪಶ್ಚಿಮ ಘಟ್ಟ ಪ್ರದೇಶದ ಉಳಿವಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದು, ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ಸಲಹೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕೇರಳ ಸಮೇತವಾಗಿ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಅರಣ್ಯ ನಾಶ ಮತ್ತು ಅದರ ಮೇಲೆ ಮಾನವನ ಸವಾರಿಯ ಬಗ್ಗೆ ಡಾ.ಕಸ್ತೂರಿ ರಂಗನ್‌ ಅವರು ವಿಸ್ತೃತವಾದ ವರದಿ ನೀಡಿದ್ದರು. ಆಗಲೂ ಯಾರೂ ಎಚ್ಚೆತ್ತು ಕೊಂಡಿಲ್ಲ. ಕಸ್ತೂರಿ ರಂಗನ್‌ ವರದಿ ಅನುಷ್ಠಾನಗೊಂಡಿದ್ದರೆ ಸ್ವಲ್ಪವಾದರೂ, ಪರಿಸರ ಸಂರಕ್ಷಣೆ ಮಾಡಬಹುದಿತ್ತು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ)ಎಚ್‌.ಪೂರ್ಣಿಮಾ “ಉದಯವಾಣಿ’ಗೆ ತಿಳಿಸಿದರು.

ಕಾಡಿನ ಮರುಸೃಷ್ಟಿ
ಕೊಡಗಿನಲ್ಲಿ ಒಂದೆಡೆ ಜನವಸತಿ ಪುನರ್‌ನಿರ್ಮಾಣ ಕಾರ್ಯಕ್ಕೆ ಯೋಜನೆಗಳು ಸಿದ್ಧವಾಗುತ್ತಿದ್ದಂತೆಯೇ, ಮತ್ತೂಂದೆಡೆ ಕಾಡಿನ ಮರುಸೃಷ್ಟಿಗೆ ಅರಣ್ಯ ಇಲಾಖೆ ಸಜ್ಜಾಗುತ್ತಿದೆ. ಮಳೆಯಿಂದ ಕಾಡಿನ ಸಂಪತ್ತು ನಾಶಗೊಂಡಿದೆ. ಹೀಗಾಗಿ, ಮತ್ತೆ ಕಾಡಿನ ಮರುಸೃಷ್ಟಿ ಅನಿವಾರ್ಯ. ಅದಕ್ಕಾಗಿ ಎಲ್ಲ ರೀತಿಯ ಸಂಶೋಧನೆಗಳನ್ನು ನಡೆಸಲಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಕಾಡಿನ ಪ್ರದೇಶದಲ್ಲಿ ಎಲ್ಲೆಲ್ಲಿ ಭೂ ಕುಸಿತವಾಗಿದೆಯೋ ಆ ಭಾಗದಲ್ಲಿ ನಿತ್ಯ ಹಸಿರಾಗಿರುವ ಜಾತಿ ಮರಗಳನ್ನು ನೆಡಲಾಗುತ್ತದೆ. ಒಮ್ಮೆ ಗಿಡ ನೆಟ್ಟ ನಂತರ ಅದರ ಭವಿಷ್ಯ ಹಾಗೂ ವಾಸ್ತವಾಂಶ ಪರಿಶೀಲನೆ ಮಾಡಿಯೇ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಗಿಡ ಸಂಗ್ರಹ ಆರಂಭಿಸಿ, ಮೇ ಅಥವಾ ಜೂನ್‌ನಲ್ಲಿ ಸಸಿ ನೆಡುವ ಕಾರ್ಯ ಮಾಡಲಿದ್ದಾರೆ.

ಖಾಸಗಿ ಭೂಮಿ ಅರಣ್ಯಕ್ಕೆ ಹೊಂದಿಕೊಂಡಿದ್ದರೂ ಕಾಡಿನ ಜಾತಿಯ ಮರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಖಾಸಗಿ ಭೂಮಿಯಲ್ಲಿ ಭೂ ಕುಸಿತ ಹೆಚ್ಚಾಗಿರುವುದಕ್ಕೆ ಇದು ಕೂಡ ಒಂದು ಕಾರಣ ಇರಬಹುದು. ದಟ್ಟಾರಣ್ಯದ ಒಳಗೆ ಭೂ ಕುಸಿತವಾಗಿಲ್ಲ. ಹೀಗಾಗಿ, ಕಾಡಿನ ಮರುಸೃಷ್ಟಿಗೆ ಬೇಕಾದ ಎಲ್ಲ ರೀತಿಯ ಸಂಶೋಧನೆಗಳನ್ನು ನಡೆಸಲಿದ್ದೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Advertisement

ಸಂಶೋಧನೆ ಖಾಸಗಿ ಭೂಮಿಯಲ್ಲಿರುವ ಮರಗಳ ಜತೆಗೆ ಅರಣ್ಯ ಭೂಮಿಯಲ್ಲಿರುವ ಹತ್ತಾರು ಬಗೆಯ ಹಲವು ಮರಗಳು ನಾಶವಾಗಿದೆ. ಖಾಸಗಿ ಭೂಮಿಯಲ್ಲಿ ಇರುವ ಮರಗಳನ್ನು ಕಡಿದು ಬೇವು ಮೊದಲಾದ ಮರಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಶೇ.19 ರಷ್ಟು ಕಾಡು ಉಳಿದಿದೆ. ಇವೆಲ್ಲದರ ಮಧ್ಯೆ ಅರಣ್ಯ ಒತ್ತುವರಿಯೂ ಹೆಚ್ಚಾಗಿದೆ ಎನ್ನುತ್ತಾರೆ ಪೂರ್ಣಿಮಾ.

ಗಾಡ್ಗಿಳ್‌ ವರದಿಯಲ್ಲೇನಿತ್ತು?
ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಂತೆ ಮಾಧವ ಗಾಡ್ಗಿಳ್‌ ವರದಿ ಬಂದಾಗಲೇ ಅದನ್ನು ಅನುಷ್ಠಾನ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ಮಾಡಿದ್ದರು. ಆದರೆ, ಇದು ಕಠಿಣ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಈ ವರದಿ ಜಾರಿಗೊಳಿಸದೆ ಕಸ್ತೂರಿ ರಂಗನ್‌ ಸಮಿತಿ ರಚಿಸಿ ಮತ್ತೂಂದು ವರದಿ ಸಿದ್ಧಪಡಿಸಿತ್ತು. ಕಸ್ತೂರಿರಂಗನ್‌ ವರದಿಯಲ್ಲಿ ಜನವಸತಿ ಪ್ರದೇಶವನ್ನು ಉಳಿಸಿಕೊಳ್ಳುವುದರ ಜತೆಗೆ ಪಶ್ಚಿಮ ಘಟ್ಟಗಳ ಸಂರಕ್ಷಣೆ ಹೇಗೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿತ್ತು. ಹೀಗಾಗಿ ಈ ವರದಿಯನ್ನು ಜಾರಿಗೊಳಿಸಬೇಕು ಎಂದು ಆರಂಭದಲ್ಲೇ ಅರಣ್ಯ ಇಲಾಖೆ ಸರ್ಕಾರಕ್ಕೆ ಸಲಹೆ ಮಾಡಿತ್ತು. ಆದರೆ, ರಾಜಕೀಯ ಕಾರಣಗಳು, ಜನರಿಗೆ ತೊಂದರೆಯಾಗಬಾರದು ಎಂದು ಸರ್ಕಾರ ತೀರ್ಮಾನ ಕೈಗೊಳ್ಳಲಿಲ್ಲ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next