ಗಂಗಾವತಿ: ರಾಜ್ಯದ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಕುರಿತು ಅಧ್ಯಾಯನ ನಡೆಸಿರುವ ಕಾಂತರಾಜು ವರದಿ ಅನುಷ್ಠಾನ ಹಾಗೂ ಮುಸ್ಲಿಮರಿಗೆ ಶೇ.8 ರಷ್ಟು ಮೀಸಲಾತಿ ಹೆಚ್ಚಳಕ್ಕೆ ಸ್ಥಳೀಯ ಶಾಸಕ ಗಾಲಿ ಜನಾರ್ದನರೆಡ್ಡಿ ಬೆಳಗಾವಿಯಲ್ಲಿ ಜರುಗುವ ವಿಧಾನಸಭಾ ಅಧಿವೇಶದಲ್ಲಿ ವಿಷಯ ಪ್ರಸ್ತಾಪಿಸುವಂತೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದರು.
ಯೋಜನೆಗಳನ್ನು ರೂಪಿಸಲು ರಾಜ್ಯದ ಎಲ್ಲ ಜಾತಿ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಮತ್ತು ಅಂಕಿ ಅಂಶಗಳ ಸಮೇತವಾದ ವರದಿಗಾಗಿ ಕಾಂತರಾಜ್ ಆಯೋಗವನ್ನು ರಚಿಸಲಾಗಿತ್ತು. ಆಯೋಗವು ವರ್ಷಗಟ್ಟಲೇ ರಾಜ್ಯದಾದ್ಯಂತ ಸಮೀಕ್ಷೆ ನಡೆಸಿ, ಜಾತಿ ಮತ್ತಿತರ ಹಲವು ಕಾರಣಗಳಿಂದಾಗಿ ತಮ್ಮ ಹಕ್ಕು ಅಧಿಕಾರಗಳಿಂದ ವಂಚಿತರಾಗಿ, ಹಲವು ರೀತಿಯಲ್ಲಿ ಶೋಷಣೆಗೊಳಗಾಗಿರುವ ಜಾತಿ ಸಮುದಾಯಗಳ ವಾಸ್ತವ ಸ್ಥಿತಿಗಳ ಬಗ್ಗೆ ಅಂಕಿ ಅಂಶಗಳ ಸಮೇತವಾದ ವರದಿ ನೀಡಿದೆ.
ರಾಜ್ಯ ಸರಕಾರ ವರದಿಯನ್ನು ಸ್ವೀಕರಿಸಿ ಅನುಷ್ಠಾನ ಮಾಡಬೇಕು.ಎಸ್ಸಿ ಮೀಸಲಾತಿಯಲ್ಲಿ ವ್ಯಾಪಕ ಅನ್ಯಾಯವಾಗಿದ್ದು ಇದರಲ್ಲಿ ಒಳಮೀಸಲಾತಿ ಕಲ್ಪಿಸಲು ಸದಾಶಿವ ಆಯೋಗವು ಒಳಮೀಸಲಾತಿಗೆ ಶಿಫಾರಸ್ಸು ಮಾಡಿರುವ ವರದಿಯ ಕೂಡಲೇ ಒಪ್ಪಿ ಅನುಷ್ಠಾನ ಮಾಡಬೇಕು. ರಾಜ್ಯದಲ್ಲಿ ಸುಮಾರು ಶೇ.17 ಜನಸಂಖ್ಯೆ ಹೊಂದಿರುವ ಮುಸಲ್ಮಾನರಿಗೆ ಇದುವರೆಗೂ ಜಾರಿಯಲ್ಲಿದ್ದ ಶೇ.4 ಮೀಸಲಾತಿಯನ್ನು ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವು ರದ್ದು ಮಾಡಿದ್ದು ಸರ್ಕಾರದ ಈ ಸಂವಿಧಾನ ವಿರೋಧಿ ನಿರ್ಧಾರವನ್ನು ಹೈ ಕೋರ್ಟ್ ತಡೆ ಹಿಡಿದಿದೆಯಾದರೂ ಮೀಸಲಾತಿ ಮುಂದುವರಿಕೆಯಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಗೊಂದಲ ಉಂಟು ಮಾಡುತ್ತಿದ್ದಾರೆ. ಗೊಂದಲ ನಿವಾರಣೆಗಾಗಿ ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ತಡ ಮಾಡುತ್ತಿರುವುದು ಮುಸಲ್ಮಾನರ ವಿರೋಧಿ ನಡೆಯನ್ನು ತೋರಿಸುತ್ತದೆ. ಸರ್ಕಾರದ ಕೂಡಲೇ ಮೀಸಲಾತಿಯನ್ನು ಶೇ. 8 ಗೆ ಹೆಚ್ಚು ಮಾಡಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಉಪಾಧ್ಯಕ್ಷ ಮುದ್ದಾಸಿರ್.ಪ್ರಧಾನ ಕಾರ್ಯದರ್ಶಿ ಎಂ ಡಿ ಅಜರುದ್ದಿನ್. ಕೋಶಾಧಿಕಾರಿ ಫೈಯಾಜ್ ಅಹ್ಮದ್.ಇಮ್ರಾನ್ ಅಡ್ವೋಕೇಟ್. ಖಾಜಾ ಬಜಾಜ್.ಮಹೇಬೂಬ್ ಮುರಹರಿ ನಗರ್. ಖಾಜಾ ಮೇಕನಿಕ್ ಮತ್ತು ಕಾರ್ಯಕರ್ತರಿದ್ದರು.