ಬಡಗನ್ನೂರು: ಪುತ್ತೂರು ವಿಧಾನಸಭಾ ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕುಂಬ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ, ಮೋದಿ ಸ್ವಚ್ಛತೆಗೆ ಆದ್ಯತೆ ಕೊಟ್ಟಿದ್ದಾರೆ. ನಮ್ಮ ಮನೆ, ಪರಿಸರವನ್ನು ಸ್ವಚ್ಛ ಮಾಡುವುದರ ಜತೆಗೆ ಇಡೀ ದೇಶ ಸ್ವಚ್ಛವಾದರೆ ಆರೋಗ್ಯ ಹಾಗೂ ಮನಸ್ಸು ಸ್ವಚ್ಛಗೊಳ್ಳುತ್ತದೆ. ಮೋದಿಯವರು ಇಡೀ ಭಾರತವನ್ನು ಒಗ್ಗೂಡಿಸುವ ಜತೆಗೆ ಎಲ್ಲ ವರ್ಗದವರನ್ನು ಒಟ್ಟಿಗೆ ಸೇರಿಸಿಕೊಂಡು ದೇಶವನ್ನು ಮುನ್ನಡೆಸುತ್ತಿದ್ದಾರೆ. ಕೃಷಿ ಸಮ್ಮಾನ ಪಿಂಚಣಿ, ಆಯುಷ್ಮಾನ್, ಉಜ್ವಲ್ ಸಹಿತ ಹಲವಾರು ಯೋಜನೆಗಳನ್ನು ತಂದಿದ್ದಾರೆ ಎಂದು ಹೇಳಿದರು.
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ನಿತಿಶ್ ಕುಮಾರ್ ಶಾಂತಿವನ ಒಳಮೊಗ್ರು ಬಿಜೆಪಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕುಂಬ್ರ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಒಳಮೊಗ್ರು ಗ್ರಾ.ಪಂ. ಅಧ್ಯಕ್ಷ ಯತಿರಾಜ ರೈ ನೀರ್ಪಾಡಿ, ಕೆದಂಬಾಡಿ ಬಿಜೆಪಿ ಸಮಿತಿ ಅಧ್ಯಕ್ಷ ರತನ್ ರೈ, ಒಳಮೊಗ್ರು ಪಂಚಾಯತ್ ಸದಸ್ಯರಾದ ತ್ರಿವೇಣಿ ಪಲ್ಲತ್ತಾರು, ಕಟ್ಟಡ ಕಾರ್ಮಿಕರ ರಾಜ್ಯ ಉಪಾಧ್ಯಕ್ಷ ಪುರಂದರ ಶೆಟ್ಟಿ, ಮುಡಾಲ ಬೂತ್ ಸಮಿತಿ ಅಧ್ಯಕ್ಷ ಮಾಧವ ರೈ ಕುಂಬ್ರ, ಮೇಘರಾಜ್, ಮುಡಾಲ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಾಸು ಪೂಜಾರಿ ಅಜ್ಜಿಕಲ್ಲು, ಜಯರಾಮ ಆಚಾರ್ಯ, ವಿನೋದಾ ಮಗಿರೆ, ರೇಖಾ ಪರ್ಪುಂಜ, ಪ್ರಮೀಳಾ, ಸಾವಿತ್ರಿ ಪವಿತ್ರಾ ಉಪಸ್ಥಿತರಿದ್ದರು. ಕುಂಬ್ರ ಶ್ರೀರಾಮ ಭಜನ ಮಂದಿರದ ಪರಿಸರ, ಕೃಷಿ ಪತ್ತಿನ ಸಹಕಾರಿ ಸಂಘದ ಬಳಿ, ಕುಂಬ್ರ ಪೇಟೆ ಸ್ವತ್ಛ ಮಾಡಲಾಯಿತು. ಪುತ್ತೂರು ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ರೈ ಕೈಕಾರ ಸ್ವಾಗತಿಸಿ ವಂದಿಸಿದರು.
ಅಖಂಡ ಭಾರತದ ಕನಸು
ಕಾಶ್ಮೀರಕ್ಕೆ ಸಂಬಂಧಿಸಿ ಸಂವಿಧಾನದ 370ನೇ ವಿಧಿ ರದ್ದು ಮಾಡುವ ಮೂಲಕ ಅಖಂಡ ಭಾರತದ ಕನಸನ್ನು ನನಸು ಮಾಡುತ್ತಾ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿ ಭಾರತವನ್ನು ಜಗದ್ಗುರುವಿನ ಸ್ಥಾನಕ್ಕೆ ಒಯ್ಯಲು ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಅವರ ಕೈಯನ್ನು ಬಲಪಡಿಸೋಣ. ಇನ್ನೂ ಒಂದು ವಾರ ಬಿಜೆಪಿ ವತಿಯಿಂದ ಸೇವಾ ಸಪ್ತಾಹ ನಡೆಯಲಿದೆ ಎಂದು ಮಠಂದೂರು ಹೇಳಿದರು.