Advertisement

ಕೃಷಿ ಕ್ಷೇತ್ರ ಆತ್ಮನಿರ್ಭರಕ್ಕೆ ಪ್ರಧಾನಿ ಪಣ: ಕಡಾಡಿ

01:32 PM Apr 27, 2022 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರ ಡಾ| ಸ್ವಾಮಿನಾಥನ್‌ ವರದಿಗೆ ಪೂರಕವಾಗಿ ರೈತರ ಪರವಾಗಿ ಹಲವಾರು ಯೋಜನೆ, ಕಾರ್ಯಕ್ರಮ ಜಾರಿಗೊಳಿಸುತ್ತಿದೆ ಎಂದು ರಾಜ್ಯಸಭೆ ಸದಸ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು.

Advertisement

ಮಂಗಳವಾರ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಏರ್ಪಡಿಸಿದ್ದ ಆತ್ಮನಿರ್ಭರ ಕೃಷಿ ಮತ್ತು ಸಿರಿಧಾನ್ಯಗಳ ವರ್ಷಾಚರಣೆ ಮೇಳ, ಕೇಂದ್ರ, ರಾಜ್ಯ ಸರ್ಕಾರಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿಯವರು ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಮಾತನಾಡಿದ ಮೊದಲ ಪ್ರಧಾನಿ. ಬೇರೆ ಯಾವುದೇ ಪ್ರಧಾನ ಮಂತ್ರಿ ಈ ಮಾತು ಹೇಳಿಲ್ಲ. ಡಾ| ಸ್ವಾಮಿನಾಥನ್‌ ವರದಿಗೆ ಪೂರಕವಾಗಿ ಕೇಂದ್ರ ಸರ್ಕಾರ ಮಣ್ಣಿನ ಆರೋಗ್ಯ ಕಾರ್ಡ್‌, ಹನಿ ನೀರನ್ನು ಸರಿಯಾಗಿ ಬಳಸುವ ಉದ್ದೇಶದಿಂದ ಕೃಷಿ ಸಿಂಚಾಯಿ, ಕೃಷಿಕರು ವಯಸ್ಸಾದ ನಂತರವೂ ಗೌರವದಿಂದ ಬಾಳಲು ಅನುಕೂಲ ಆಗುವಂತೆ ಕಿಸಾನ್‌ ಮಾನ್‌ಧನ್‌, ಹೈನುಗಾರಿಕೆಗೆ ಉತ್ತೇಜನ, ಒಳಗೊಂಡಂತೆ ಹಲವಾರು ಯೋಜನೆ ಜಾರಿಗೆ ತರುತ್ತಿದೆ. ಸ್ವತಃ ಡಾ| ಸ್ವಾಮಿನಾಥನ್‌ ಅವರೇ ಯೋಜನೆ ಜಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ದೇಶದಲ್ಲಿ ಶೇ. 48 ರಷ್ಟು ಜನ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೂ ದೇಶದ ತಲಾ ಆದಾಯಕ್ಕೆ ಕೃಷಿ ಕ್ಷೇತ್ರದ ಕೊಡುಗೆ ಶೇ. 11 ರಷ್ಟು ಮಾತ್ರವೇ ಇತ್ತು. ನರೇಂದ್ರ ಮೋದಿ ಅವರು ಕೃಷಿ ಕ್ಷೇತ್ರ ಉದ್ಯಮದ ರೂಪ ಪಡೆಯಬೇಕು. ರೈತರ ಆದಾಯ ದ್ವಿಗುಣವಾಗಬೇಕು. ಕೃಷಿ ಕ್ಷೇತ್ರವನ್ನು ಆತ್ಮನಿರ್ಭ ರವನ್ನಾಗಿ ಮಾಡದೇ ಹೋದಲ್ಲಿ ದೇಶದ ಅಭಿವೃದ್ಧಿ ಆಗುವುದಿಲ್ಲ ಎಂದರಿತು ಹಲವಾರು ರೈತರಪರ ಯೋಜನೆ ಜಾರಿಗೊಳಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳು ಜಾರಿಗೆ ಬರಲಿವೆ. ರೈತರು ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿತರಾಗಬೇಕು ಎಂದು ಆಶಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರ ಸರ್ಕಾರಗಳಾಗಿವೆ. ಎರಡೂ ಸರ್ಕಾರ ರೈತರ ಪರ ಅನೇಕ ಯೋಜನೆ ಜಾರಿಗೊಳಿಸಿವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕೇಂದ್ರದ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ 21,933 ಕೋಟಿ ಅನುದಾನ ಇತ್ತು. ಮೋದಿ ಅವರು ಅಧಿಕಾರಕ್ಕೆ ಬಂದ ನಂತರ 1,37,523 ಕೋಟಿ ಅನುದಾನ ಮೀಸಲಿಡಲಾಗಿದೆ. ಮಳೆ ಆಶ್ರಿತ ಪ್ರದೇಶದ ರೈತರ ಅನುಕೂಲಕ್ಕಾಗಿ ಕೃಷಿ ಸಿಂಚಾಯಿ ಯೋಜನೆ ಮೂಲಕ 6452 ಕೋಟಿ ನೆರವು ನೀಡಲಾಗಿದೆ ಎಂದು ತಿಳಿಸಿದರು.

Advertisement

ಕೃಷಿ ವೆಚ್ಚವನ್ನು ಶೇ.10 ರಿಂದ 15 ರಷ್ಟು ಕಡಿಮೆಗೊಳಿಸಲು ಅತ್ಯಗತ್ಯವಾಗಿರುವ ನೂತನ ತಂತ್ರಜ್ಞಾನ ಬಳಕೆ ಪ್ರಾರಂಭಿಸಲಾಗಿದೆ. ರೈತರು ಬೆಳೆದಂತಹ ಬೆಳೆಗಳಿಗೆ ಮೌಲ್ಯವರ್ಧಿತ ದರ ದೊರೆಯುವಂತಾಗಲು ಯೋಜನೆ ರೂಪಿಸಲಾಗಿದೆ. ಕರ್ನಾಟಕದಲ್ಲಿ ರೈತರ ಬೆಳೆಗಳ ಮಾರುಕಟ್ಟೆಗಾಗಿ ಸೆಕೆಂಡರಿ ಅಗ್ರಿ ಡೈರೆಕ್ಟರ್‌ ಹುದ್ದೆ ಸೃಜಿಸಲಾಗಿದೆ ಎಂದು ತಿಳಿಸಿದರು.

ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮಾತನಾಡಿ, ರೈತರ ಆದಾಯ ದ್ವಿಗುಣವಾಗಿ, ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಮಹತ್ತರ ಉದ್ದೇಶದಿಂದ ಪ್ರಧಾನಿಯವರು ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಯೋಜನೆ ಜಾರಿಗೊಳಿಸಿದ್ದಾರೆ. ಸಿರಿಧಾನ್ಯ ಬಳಕೆಯಿಂದ ಆರೋಗ್ಯ ವೃದ್ಧಿಸುತ್ತದೆ ಮತ್ತು ವಿದೇಶಗಳಿಗೆ ರಫ್ತು ಮಾಡುವಂತಾಗಬೇಕು ಎಂದು ಸಿರಿಧಾನ್ಯಗಳನ್ನು ಬೆಳೆಯಲು ಕರೆ ನೀಡಿದ್ದಾರೆ. ಮಾತ್ರವಲ್ಲ ಸಿರಿಧಾನ್ಯ ಬೆಳೆದವರಿಗೆ ಸಹಾಯಧನ ನೀಡುವ ವ್ಯವಸ್ಥೆಯನ್ನೂ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ದೇಶ ಪ್ರಗತಿ ಸಾಧಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಎಂದು ಮೋದಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆಲ್ಲಲಿದೆ. ರೈತ ಮೋರ್ಚಾ ಕಾರ್ಯಕರ್ತರು ಕೇಂದ್ರ, ರಾಜ್ಯ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಕೂತಲ್ಲಿ ನಿಂತಲ್ಲಿ ಮಾತನಾಡಬೇಕು. ಜನರ ಮನೆ ಮನೆಗೆ, ಮನಸ್ಸುಗಳಲ್ಲಿ ಯೋಜನೆ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಲೋಕಿಕೆರೆ ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್‌.ಎ. ರವೀಂದ್ರ ನಾಥ್‌, ಎಸ್‌. ವಿ. ರಾಮಚಂದ್ರ, ಮಾಜಿ ಶಾಸಕ ಬಿ.ಪಿ. ಹರೀಶ್‌, ಡಾ| ಎ.ಎಚ್. ಶಿವಯೋಗಿಸ್ವಾಮಿ, ಮೇಯರ್‌ ಜಯಮ್ಮ ಗೋಪಿನಾಯ್ಕ, ಎಸ್‌.ಎಂ. ವೀರೇಶ್‌ ಹನಗವಾಡಿ, ಬಿ.ಎಸ್. ಜಗದೀಶ್‌, ಬಿ.ಎಂ. ಸತೀಶ್‌, ಶಿವಪ್ರಸಾದ್‌, ಶಾಮನೂರು ಲಿಂಗರಾಜ್‌, ಅಣಬೇರು ಜೀವನ ಮೂರ್ತಿ, ಸಂಗಜ್ಜಗೌಡ್ರು ಇತರರು ಇದ್ದರು. ಅಣಜಿ ಗುಡ್ಡಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next