ಬೈಲಹೊಂಗಲ: ಚಚಡಿ ಏತ ನೀರಾವರಿ ಯೋಜನೆಯ ಚಾಲನೆಯಿಂದ ಗೋಕಾಕ, ಬೈಲಹೊಂಗಲ, ಸವದತ್ತಿ ತಾಲೂಕಿನ ರೈತರ ಹೊಲಗಳು ನೀರಾವರಿಯಿಂದ ಕಂಗೊಳಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ವಣ್ಣೂರ ಗ್ರಾಮದ ಸರಕಾರಿ ಪಿಯು ಕಾಲೇಜಿನಲ್ಲಿ ಚಚಡಿ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಕಿಮೀ 6ರಿಂದ 39ರ ವರೆಗಿನ ನಿರ್ಮಾಣ ಕಾಮಗಾರಿಗಳ ಅಡಿಗಲ್ಲು ಸಮಾರಂಭಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.
ಚಚಡಿ ಯೋಜನೆಯ ಮುಖ್ಯ ಕಾಲುವೆ ನಿರ್ಮಾಣಕ್ಕೆ 2020-21ರಲ್ಲಿ ಅನುಮೋದನೆಗೊಂಡಿತ್ತು. ಇದೀಗ 28.29 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇನ್ನೂ 26 ಕೋಟಿ ರೂ. ನೀಡಲು ಸರಕಾರ ಸಿದ್ಧವಿದೆ. ನಿಗದಿತ ವೇಳೆಯಲ್ಲಿ ಕಾಮಗಾರಿಯನ್ನು ಗುತ್ತಿಗೆದಾರರು ಸಮರ್ಪಕವಾಗಿ ನಿರ್ವಹಿಸಬೇಕು. ಅಸಮರ್ಪಕವಾಗಿ ಕಾಮಗಾರಿ ನಡೆದಿದ್ದು ಕಂಡುಬಂದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಬಿಲ್ ತಡೆ ಹಿಡಿಯಲಾಗುವುದು ಎಂದು ಎಚ್ಚರಿಸಿದರು.
ರೈತರು ಕಾಲುವೆ ಆದ ಮೇಲೆ ಕೈಕಟ್ಟಿಕೊಂಡು ಎಲ್ಲವೂ ಸರಕಾರವೇ ನಿರ್ವಹಿಸಲಿ ಎಂದು ಯೋಚಿಸದೆ, ತಮ್ಮ ಮನೆಯಂತೆ ಕಾಲುವೆಯನ್ನು ಸ್ವಚ್ಛವಾಗಿಟ್ಟಲ್ಲಿ ಯೋಜನೆ ಸಾಕಾರಗೊಳ್ಳಲು ಸಾಧ್ಯವಿದೆ. ಬರುವ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಶಾಸಕ ಮಹಾಂತೇಶ ದೊಡ್ಡಗೌಡರ ಕಿತ್ತೂರ ಮತಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಕಷ್ಟು ಸುತ್ತಾಟಗಳ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಈ ನೀರಾವರಿ ಯೋಜನೆಗೆ ಅರಣ್ಯ ಇಲಾಖೆ ಭಾಗಶಃ ಅನುಮೋದನೆ ಕೊಟ್ಟಿದ್ದು, ಇಲ್ಲಿಯ 14 ಹಳ್ಳಿಗಳಿಗೆ ಕೆನಾಲ್ ಮುಖಾಂತರ ಪೈಪ್‌ಲೈನ್ ಅಳವಡಿಸಿ ನೀರಾವರಿ ಒದಗಿಸುವ ಕಾಮಗಾರಿ ಪ್ರಗತಿ ಹಂತದಲ್ಲಿದೆ. ವನ್ನೂರ ಗ್ರಾಮದಲ್ಲಿ 20 ಕೋಟಿ ಅನುದಾನದಲ್ಲಿ ಡಾ| ಅಂಬೇಡ್ಕರ್ ವಸತಿ ನಿಲಯ ನಿರ್ಮಾಣಗೊಂಡಿದ್ದು, ಜೂನ್‌ದೊಳಗೆ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಫ್. ಕೊಳದೂರ, ಕಿತ್ತೂರು ಗ್ರಾಮೀಣ ಬಿಜೆಪಿ ಅಧ್ಯಕ್ಷ ಬಸವರಾಜ ಪರವನ್ನವರ, ಬಸನಗೌಡ ಸಿದ್ರಾಮನಿ, ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಮಿಂಡೊಳ್ಳಿ, ಮುಖ್ಯ ಅಭಿಯಂತ ಅರವಿಂದ ಕಣಗಿಲ, ಅಧಿಧೀಕ್ಷಕ ಅಭಿಯಂತ ಸಿ.ಎಂ. ಬಂತಿ, ಮಲ್ಲಿಕಾರ್ಜುನ ತುಬಾಕಿ, ತಹಶೀಲ್ದಾರ್ ಬಸವರಾಜ ನಾಗರಾಳ, ತಾಪಂ ಇಒ ಸುಭಾಸ ಸಂಪಗಾವಿ, ಬಸವರಾಜ ಅಂಗಡಿ, ಬಾಳಾಸಾಹೇಬ ದೇಸಾಯಿ, ಬಸಲಿಂಗಪ್ಪ ಬಸೆಟ್ಟಿ, ಎಸ್.ಎಫ್. ನಾಯಕ, ಸತ್ಯನಾಯ್ಕ ನಾಯ್ಕ, ಎ.ಆರ್. ಮಾಳನ್ನವರ, ಎಸ್.ಎಂ. ಪಾಟೀಲ, ಮಹಾಂತೇಶ ಹಿರೇಮಠ, ಮನೋಜ ಕೆಳಗೇರಿ, ಆನಂದ ಕಿರಗಿ, ಶಿವು ಚೋಬಾರಿ, ಸಂತೋಷ ಪಾಟೀಲ ಇದ್ದರು.