ಬಾದಾಮಿ: ಮಕ್ಕಳು ನಾಪತ್ತೆಯಾಗುವುದನ್ನು ತಡೆಯಲು ಪೊಲೀಸ್ ಇಲಾಖೆ ನಂದಿಕೇಶ್ವರ ಗ್ರಾಮದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದೆ. ಕಳೆದ 15 ದಿನಗಳ ಹಿಂದೆ ನಂದಿಕೇಶ್ವರ ಗ್ರಾಮದ ಸಿದ್ದಪ್ಪ ಹುಲಸಗೇರಿ ಎಂಬುವರ 8 ವರ್ಷದ ಮಗುವನ್ನು ಮನೆಯಲ್ಲಿ ಯಾರೂ ಇಲ್ಲವೆಂಬ ಕಾರಣಕ್ಕೆ ಅವರ ಸಂಬಂ ಧಿಕರೊಬ್ಬರು ಬೈಕ್‌ನಲ್ಲಿ ಕೆಂದೂರ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಆ ಗ್ರಾಮದವರು
ಅಪರಿಚಿತರು ಮಗುವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಪಿಎಸ್‌ಐ.ಪ್ರಕಾಶ ಬಣಕಾರ ಅವರಿಗೆ ತಿಳಿಸಿದ್ದರು. ನಂತರ ವಿಚಾರಿಸಿದಾಗ ಅವರ ಸಂಬಂ ಧಿಕರೇ ಕರೆದುಕೊಂಡು ಹೋಗಿರುವುದು ದೃಢಪಟ್ಟಿತ್ತು.
ಗ್ರಾಮದಲ್ಲಿ 2009ರಿಂದ 2016ರ ಅವಧಿಯಲ್ಲಿ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದವು. 2009 ರ ಶ್ರಾವಣ ಮಾಸದಲ್ಲಿ ಗುರಮ್ಮ ಮಾಗುಂಡಯ್ಯ ತೋಗುಣಸಿ ಎಂಬ 3 ವರ್ಷ 6 ತಿಂಗಳು ಮಗು, 2010ರಲ್ಲಿ ರಂಗನಾಥ ಬಸಪ್ಪ ಮಡ್ಡಿ ಕುಟುಂಬದ ಇಬ್ಬರು ಮಕ್ಕಳು, 2016ರಲ್ಲಿ ಮಹಾಕೂಟಿ ತಿಪ್ಪಣ್ಣ ಢಾಣಕಶಿರೂರ (5) ಎಂಬ ಮಗು ಕಾಣೆಯಾಗಿತ್ತು. ಇದರಲ್ಲಿ ಎರಡು ಮಕ್ಕಳು ಶವವಾಗಿ ಪತ್ತೆಯಾಗಿವೆ. ಇನ್ನೆರಡು ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳು ಸಹ ಪತ್ತೆಯಾಗಿಲ್ಲ. ಮಕ್ಕಳ ಕಳ್ಳತನ, ಕಾಣೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್
ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ನಂದಿಕೇಶ್ವರ ಗ್ರಾಮದ ದ್ವಾರಬಾಗಿಲಿನಿಂದ ಊರ ಪ್ರಮುಖ ಬೀದಿಗಳಲ್ಲಿ, ಶಾಲೆ, ಗ್ರಾಪಂ ಮತ್ತು ಡಿಸಿಸಿ ಬ್ಯಾಂಕ್ ಶಾಖೆ ಹತ್ತಿರ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಿದೆ.
ಸಭೆ ಆಯೋಜನೆ: ಪಿಎಸ್‌ಐ ಪ್ರಕಾಶ ಬಾಣಕಾರ ನಂದಿಕೇಶ್ವರ ಗ್ರಾಮದಲ್ಲಿ ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಕ್ಕಳ ಬಗ್ಗೆ ಜಾಗೃತಿ ವಹಿಸಲು ಮಾಹಿತಿ ನೀಡಿದ್ದಾರೆ. ಗ್ರಾಮದಲ್ಲಿ ಈಗ ಸುಮಾರು 20ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರತಿನಿತ್ಯ ಇಬ್ಬರು ಪೊಲೀಸರನ್ನು ಬಂದೋಬಸ್ತ್ ನಿಯೋಜಿಸಿದ್ದಾರೆ.