ಸವಣೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರೈತರ ನೋಂದಣಿ ಮಾಡುವಲ್ಲಿ ಸವಣೂರು ತಾಲೂಕು ಹಿಂದೆ ಬಿದ್ದಿದ್ದು, ರೈತರನ್ನು ನೋಂದಾವಣಿ ಮಾಡುವ ಮೂಲಕ ಸರ್ಕಾರದ ಯೋಜನೆ ಲಾಭ ಪ್ರತಿ ರೈತರಿಗೂ ತಲುಪಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯ ಆವರಣದಲ್ಲಿ ಶುಕ್ರವಾರ ಜರುಗಿದ ತಾಲೂಕು ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ಯೋಜನೆ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭವಾದರೂ ನೋಂದಣಿ ಮಾತ್ರ ಕಡಿಮೆಯಾಗಿದೆ. ಇದರಿಂದ, ಕೆಲವೇ ರೈತರು ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಶೇ. 85ರಷ್ಟು ನೋಂದಣಿಯನ್ನು ಮಾಡಿಸಲಾಗಿದೆ ಎಂದರು.
ಇಂದಿನ ದಿನಗಳಲ್ಲಿ ಟಿಬಿ ರೋಗಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸ್ಥಳೀಯ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುವ ಮೂಲಕ ಮುಂದಿನ 15 ದಿನಗಳ ಒಳಗಾಗಿ ರೋಗಿಗಳನ್ನು ಗುರುತಿಸಿ ಚಿಕಿತ್ಸೆಗೆ ಒಳಪಡಿಸಿ ರೋಗ ನಿರ್ಮೂಲನೆ ಆಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ರಾಘವೇಂದ್ರ ಜಿಗಳಿಕೊಪ್ಪ ಮಾತನಾಡಿ, ತಾಲೂಕಿನಲ್ಲಿ 26 ಸಾವಿರ ಜನಸಂಖ್ಯೆ ತೆಗೆದುಕೊಂಡು ಟಿಬಿ ರೋಗ ಪತ್ತೆಹಚ್ಚಲು 23 ತಂಡಗಳನ್ನು ರಚನೆ ಮಾಡಲಾಗಿದೆ. ಈ ಕಾರ್ಯಾಚರಣೆ ಜು.15 ರಿಂದ ಪ್ರಾರಂಭವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 200 ಜನರನ್ನು ಕಫ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಒಂದು ರೋಗಿಯನ್ನು ಪತ್ತೆ ಹಚ್ಚಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಉಪ ವಿಭಾಗಾಧಿಕಾರಿ ಬೋಯಾರ್ ಹರ್ಷಲ್ ನಾರಾಯಣರಾವ, ಪ್ರಭಾರ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ತಹಶೀಲ್ದಾರ್ ವಿ.ಡಿ.ಸಜ್ಜನ, ತಾಪಂ ಪ್ರಭಾರ ಇಒ ಎಸ್.ಎಚ್.ಅಮರಾಪೂರ, ಪಶು ಸಂಗೋಪನಾ ಇಲಾಖೆ ಅಧಿಕಾರಿ ಭಿರೇಶ್, ವಿವಿಧ ಇಲಾಖೆ ಅಧಿಕಾರಿಗಳಾದ ಸರಸ್ವತಿ ಗಜಕೋಶ, ಪ್ರಮೀಳಾ ಕೋಟಿ, ಕುಂಬಾರ, ಎನ್.ಎಸ್. ನವಲಗುಂದ ಸೇರಿದಂತೆ ಮೊದಲಾದವರಿದ್ದರು.